ಬುಧವಾರ, ಸೆಪ್ಟೆಂಬರ್ 22, 2021
21 °C

ಪತ್ನಿ ಹತ್ಯೆ: ಪತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ವಾರ್ತೆ

ಚಿತ್ರದುರ್ಗ: ಕೌಟುಂಬಿಕ ಕಲಹ ಕಾರಣಕ್ಕೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿರುವಾಗಲೇ ಇಲ್ಲಿನ ವೆಂಕಟೇಶ್ವರ ಬಡಾವಣೆಯ ಪೆಟ್ರೋಲ್ ಬಂಕ್‌ ಬಳಿ ಪತ್ನಿಯನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ.

ನಗರದ ಬಡಾಮಖಾನ್ ಬಡಾವಣೆಯ ಅಮಿನಾ ಬಾನು (33) ಕೊಲೆಯಾದ ಮಹಿಳೆ. ಆರೋಪಿ 37 ವರ್ಷದ ಮೆಹಬೂಬ್ ಬಾಷಾನನ್ನು ಪೊಲೀಸರು ಬಂಧಿಸಿದ್ದಾರೆ.

‘ಪತಿ–ಪತ್ನಿ ನಡುವೆ ಆಗಿಂದಾಗ್ಗೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಹಣಕಾಸು, ದುಬೈಗೆ ಹೋಗುವ ವಿಚಾರವಾಗಿ ಒತ್ತಾಯಿಸುವ ಕಾರಣಕ್ಕೆ ಪದೇ ಪದೇ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಇದು ಕೊಲೆಯಲ್ಲಿ ಅಂತ್ಯವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ತಿಳಿಸಿದರು.

‘ಹೊಸಪೇಟೆ ಬಳಿಯ ಕಮಲಾಪುರದ ನಿವಾಸಿಗಳಾದ ಅಮಿನಾಬಾನು ಹಾಗೂ ಮೆಹಬೂಬ್ ಬಾಷಾ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಬಾಷಾಗೆ ಬಾನು ಅತ್ತೆಯ ಮಗಳಾಗಿದ್ದು, 2008ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಮೂರು ಜನ ಮಕ್ಕಳಿದ್ದಾರೆ’ ಎಂದು ತಿಳಿಸಿದರು. 

‘ಹತ್ತು ದಿನಗಳ ಹಿಂದೆಯಷ್ಟೇ ಬಾನು ಚಿತ್ರದುರ್ಗದ ಬಡಮಕಾನ್ ಬಳಿ ಇರುವ ಸಂಬಂಧಿಕರ ಮನೆಗೆ ಬಂದಿದ್ದರು. ವಾಪಾಸು ಕರೆದೊಯ್ಯಲು ಆಕೆಯ ಪತಿ ಬಂದಿದ್ದ. ಆ ವೇಳೆಯೂ ಪತ್ನಿ ಜತೆಗೆ ಜಗಳ ಮಾಡಿಕೊಂಡಿದ್ದ. ದರ್ಗಾದಿಂದ ವಾಪಾಸು ಬರುವಾಗ ವಾಗ್ವಾದ ತಾರಕಕ್ಕೇರಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಪತ್ನಿಯನ್ನು ಹಿಂಬದಿಯಲ್ಲಿ ಕುಳಿತಿದ್ದ ಬಾಷಾ ಚಾಕುವಿನಿಂದ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.