ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ಕಲುಷಿತ ನೀರು ಪ್ರಕರಣ: ನೀರಿಗೆ ವಿಷ ಬೆರೆಸಿದ ಆರೋಪ, ತನಿಖೆ ಆರಂಭ

Published 2 ಆಗಸ್ಟ್ 2023, 13:15 IST
Last Updated 2 ಆಗಸ್ಟ್ 2023, 13:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಕುಡಿಯುವ ನೀರಿನಲ್ಲಿ ಉದ್ದೇಶಪೂರ್ವಕವಾಗಿ ವಿಷ ಬೆರೆಸಲಾಗಿದೆ ಎಂಬ ಸ್ಥಳೀಯರ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ನೀರು ಸರಬರಾಜು ಮಾಡುತ್ತಿದ್ದ ನೀರುಗಂಟಿಯನ್ನು ತನಿಖೆಗೆ ಒಳಪಡಿಸಿದ್ದಾರೆ.

ಕಲುಷಿತ ನೀರು ಕುಡಿದು ಮಂಜುಳಾ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ತನಿಖೆಗೆ ಅಗತ್ಯವಿರುವ ಸಾಕ್ಷ್ಯಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಘಟನೆಗೆ ಸಂಬಂಧಿಸಿದ ಅನೇಕರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಯುವಕ ಸಾವು; ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದಿರುವ ಶಂಕೆ

‘ತನಿಖೆಗೆ ಅಗತ್ಯವಿರುವ ಕೆಲ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಮೃತದೇಹ ಹಾಗೂ ನೀರಿನ ಮಾದರಿಯನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪ್ರಯೋಗಾಲಯದ ವರದಿ ಕೈಸೇರಿದ ಬಳಿಕ ತನಿಖೆ ಇನ್ನಷ್ಟು ಚುರುಕುಗೊಳ್ಳಲಿದೆ. ನೀರುಗಂಟಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿಬಂದಿದ್ದು, ವಿಚಾರಣೆಗೆ ಕರೆದಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಮಾಹಿತಿ ನೀಡಿದರು.

2022ರಲ್ಲಿ ಕವಾಡಿಗರಹಟ್ಟಿಯಲ್ಲಿ ಪೋಕ್ಸೊ ಪ್ರಕರಣವೊಂದು ದಾಖಲಾಗಿತ್ತು. ಎರಡು ಸಮುದಾಯಗಳ ನಡುವೆ ಇದು ವೈಮನಸು ಮೂಡಿಸಿತ್ತು. ಈ ಕಾರಣಕ್ಕೆ ನೀರಿಗೆ ವಿಷ ಬೆರೆಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಈ ಆಯಾಮದಿಂದಲೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಉನ್ನತ ತನಿಖೆಗೆ ಸ್ವಾಮೀಜಿ ಮನವಿ: ಕವಾಡಿಗರಹಟ್ಟಿಯಲ್ಲಿ ಸಂಭವಿಸಿದ ಘಟನೆ ವೈಯಕ್ತಿಕ ದ್ವೇಷದಿಂದ ನಡೆದಿರುವ ಸಾಧ್ಯತೆ ಇದೆ. ದಲಿತರ ಕೇರಿಗೆ ಪೂರೈಕೆ ಮಾಡುವ ನೀರಿನಲ್ಲಿ ಉದ್ದೇಶಪೂರ್ವಕವಾಗಿ ವಿಷ ಬೆರೆಸಿದ ಅನುಮಾನ ಕಾಡುತ್ತಿದೆ. ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಬೇಕು ಎಂದು ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಲುಷಿತ ನೀರು ಕುಡಿದು ಮಹಿಳೆ ಸಾವು: ಮಾಹಿತಿ ಪಡೆದ ಮುಖ್ಯಮಂತ್ರಿ, ತನಿಖಾ ತಂಡ ರಚನೆ

‘ನೀರು ಕಲುಷಿತಗೊಂಡಿದ್ದರೆ ಇಡೀ ಕವಾಡಿಗರಹಟ್ಟಿಗೆ ತೊಂದರೆ ಆಗಬೇಕಿತ್ತು. ಪರಿಶಿಷ್ಟ ಜಾತಿ ಕಾಲೊನಿಯ ಮೂರು ಬೀದಿಗೆ ಮಾತ್ರ ಸಮಸ್ಯೆಯಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜಾತಿ ವೈಷಮ್ಯದ ವಾಸನೆ ಕಾಣುತ್ತಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT