ಬುಧವಾರ, ಡಿಸೆಂಬರ್ 11, 2019
24 °C
ಗಣಿ ಸುರಕ್ಷತಾ ನಿರ್ದೇಶನಾಲಯದ ಉಪ ಮಹಾ ನಿರ್ದೇಶಕ ಜಿ.ವಿಜಯಕುಮಾರ್ ಸಲಹೆ

ಗಣಿ ದೂಳು ನಿಯಂತ್ರಣಕ್ಕೆ ಶ್ರಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಗಣಿಗಾರಿಕೆ ಪ್ರದೇಶದಲ್ಲಿ ದೂಳು ನಿಯಂತ್ರಿಸಲು ಪ್ರತಿ ಕಂಪನಿಯೂ ಗಮನ ಹರಿಸಬೇಕು. ಗಣಿ ಲಾರಿ ಸಂಚರಿಸುವ ಮಾರ್ಗದಲ್ಲಿ ನಿಯಮಿತವಾಗಿ ನೀರು ಸಿಂಪಡಿಸಬೇಕು ಎಂದು ಗಣಿ ಸುರಕ್ಷತಾ ನಿರ್ದೇಶನಾಲಯದ ದಕ್ಷಿಣ ವಲಯದ ಉಪ ಮಹಾ ನಿರ್ದೇಶಕ ಜಿ.ವಿಜಯಕುಮಾರ್ ಸಲಹೆ ನೀಡಿದರು.

ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಗಣಿ ಸುರಕ್ಷತಾ ನಿರ್ದೇಶನಾಲಯ ಹಾಗೂ ಆರ್‌.ಪ್ರವೀಣ್ ಚಂದ್ರ ಮೈನ್ಸ್‌ ಸಮೂಹ ಕಂಪನಿ ಸಹಯೋಗದಲ್ಲಿ ‘ಗಣಿ ಸುರಕ್ಷತಾ ಸಪ್ತಾಹ’ದ ಸಮಾರೋಪ ಸಮಾರಂಭದಲ್ಲಿ ಅವರು ‘ದೂಳು ನಿಯಂತ್ರಣ’ಕ್ಕೆ ಸಂಬಂಧಿಸಿದಂತೆ ಮಾತನಾಡಿದರು.

‘ಗಣಿಗಾರಿಕೆ ಪ್ರದೇಶದಲ್ಲಿ ದೂಳಿನ ಸಮಸ್ಯೆ ಕಾಡುತ್ತಿದೆ. ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಲಾರಿ ಚಾಲಕರು ಮಾತ್ರವಲ್ಲದೇ ಸುತ್ತಲಿನ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದಾರೆ. ಗಣಿ ಲಾರಿ ಸಂಚರಿಸುವ ಮಾರ್ಗದಲ್ಲಿ ದೂಳಿನ ಸಮಸ್ಯೆ ನಿವಾರಿಸಲು ನೀರು ಸಿಂಪಡಣೆಯೊಂದೇ ಉಪಾಯ’ ಎಂದು ಹೇಳಿದರು.

‘ಪ್ರಕೃತಿಗೆ ವಿರುದ್ಧವಾಗಿ ಗಣಿಗಾರಿಕೆ ಮಾಡುವುದರಿಂದ ತೊಂದರೆಗಳು ನಿಶ್ಚಿತ. ಗಣಿಗಾರಿಕೆ ಪ್ರದೇಶವನ್ನು ಸುರಕ್ಷಿತವಾಗಿ ಇಡುವ ಹೊಣೆ ಗಣಿ ಕಂಪನಿಗಳ ಮೇಲಿದೆ. ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಕಂಪನಿಗಳು ಆದ್ಯತೆ ನೀಡಬೇಕು. ಸರ್ಕಾರದ ನಿಯಮಗಳನ್ನು ಪಾಲಿಸಬೇಕು’ ಎಂದು ಹೇಳಿದರು.

‘ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ಪರಿಸರಸ್ನೇಹಿ ಗಣಿಗಾರಿಕೆ ನಡೆಸಲು ಅವಕಾಶವಿದೆ. ಗಣಿ ಪ್ರದೇಶದಲ್ಲಿ ನಡೆಸುವ ಸ್ಫೋಟ ದೂರದವರೆಗೆ ಕಂಪನ ಮೂಡಿಸುತ್ತದೆ. ತಂತ್ರಜ್ಞಾನ ಸುಧಾರಣೆ ಕಂಡಿದ್ದರೂ, ಹಳೆಯ ಯಂತ್ರಗಳನ್ನು ಅನುಸರಿಸಿ ಕೆಲಸ ಮಾಡಲಾಗುತ್ತಿದೆ. ಇದು ತಪ್ಪದೇ ಇದ್ದರೆ ಕಾರ್ಮಿಕರು ಅಪಾಯಕ್ಕೆ ಸಿಲುಕುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಬಳ್ಳಾರಿ ವಿಭಾಗದ ಗಣಿ ಸುರಕ್ಷಣಾ ನಿರ್ದೇಶಕ ಉಮೇಶ್ ಎಂ.ಸಾವರ್ಕರ್ ಮಾತನಾಡಿ, ‘ಗಣಿ ಕೆಲಸ ಮಾಡುವ ಕಾರ್ಮಿಕರಿಗೆ ಸುರಕ್ಷತೆಯ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ. ತರಬೇತಿ ನೀಡುವ ಸಂಸ್ಥೆಗಳ ಕೊರತೆ ಕಾಣುತ್ತಿದೆ. ಗಣಿ ಕೆಲಸಕ್ಕೆ ಬರುವ ಮುನ್ನವೇ ಸುರಕ್ಷತೆಯ ಬಗ್ಗೆ ತಿಳಿಯುವುದು ಸೂಕ್ತ. ಸುರಕ್ಷತೆಯ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.

‘ಗಣಿ ಕಾರ್ಮಿಕರು ಪ್ರತಿ ಕ್ಷಣವನ್ನು ಆತಂಕದಿಂದಲೇ ಎದುರಿಸುತ್ತಾರೆ. ಅಪಾಯಕಾರಿ ಸ್ಥಳದಲ್ಲಿ ಕೆಲಸ ಮಾಡುವ ಅವರ ಜೀವ ರಕ್ಷಣೆಗೆ ಪ್ರತಿ ಕಂಪನಿಯೂ ಮುಂದಾಗಬೇಕು. ಮುನ್ನೆಚ್ಚರಿಕೆ ತಪ್ಪಿದರೆ ಜೀವ ಕಳೆದುಕೊಳ್ಳುವ ಅ‍ಪಾಯ ಹೆಚ್ಚು. ಗಣಿ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲೆಡೆ ಪರಿಶೀಲನೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಸುರಕ್ಷತೆಗೆ ಸಂಬಂಧಿಸಿದಂತೆ ಗಣಿ ಕಾರ್ಮಿಕರಿಂದಲೇ ಸಾಕಷ್ಟು ಸಲಹೆಗಳು ಬಂದಿವೆ. ಈ ಸಲಹೆಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿದ ನಿಯಮಗಳನ್ನು ಗಣಿ ಕಂಪನಿಗಳು ಪಾಲನೆ ಮಾಡಬೇಕು’ ಎಂದರು.

ಗಣಿ ಸುರಕ್ಷತಾ ನಿರ್ದೇಶನಾಲಯದ ಮಹಾನಿರ್ದೇಶಕ ಆರ್‌.ಸುಬ್ರಮಣಿಯನ್‌, ಇಆರ್‌ಎಂ ಸಮೂಹದ ಕಂಪನಿ ಅಧ್ಯಕ್ಷ ಆರ್‌.ಪ್ರವೀಣ್‌ ಚಂದ್ರ , ಎಂ.ಎಸ್.ಎ.ಕೆ. ಅಧ್ಯಕ್ಷ ಡಾ.ಮೇಡ ವೆಂಕಟಯ್ಯ, ಎಂ.ಎಸ್.ಎ.ಕೆ. ಕಾರ್ಯದರ್ಶಿ ಎನ್.ರಣಧೀವೆ, ಗಣಿ ಸುರಕ್ಷತಾ ನಿರ್ದೇಶಕ ಎಂ.ಕೆ.ಮಾಳವಿಯ, ಹಿರಿಯ ವ್ಯವಸ್ಥಾಪಕ ಗಣೇಶ್ ಮೂರ್ತಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು