ಪೂಜಾರಿಕೆ ವಿಚಾರಕ್ಕೆ ಹಲ್ಲೆ: ವ್ಯಕ್ತಿ ಸಾವು

ಚಳ್ಳಕೆರೆ: ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗವ್ವನಹಳ್ಳಿಯಲ್ಲಿ ಗ್ರಾಮ ದೇವತೆ ದುರುಗಮ್ಮ ದೇವಿಯ ಪೂಜಾರಿಕೆ ವಿಚಾರವಾಗಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಗ್ರಾಮದ ಜಯರಾಮಪ್ಪ (55) ಮೃತರು. ಇವರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಚನ್ನಪ್ಪ ಮತ್ತು ಓಬಳೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಯುಗಾದಿ ಹಬ್ಬದಲ್ಲಿ ನಡೆಯುವ ಜಾತ್ರೆಯಲ್ಲಿ ಪೂಜಾರಿಕೆತನ ವಹಿಸಿಕೊಳ್ಳುವ ವಿಷಯದಲ್ಲಿ ಎರಡು ಗುಂಪುಗಳು ಸೃಷ್ಟಿಯಾಗಿದ್ದು, ತೀವ್ರ ಪೈಪೋಟಿ ಏರ್ಪಟ್ಟಿತು. ದೇವಸ್ಥಾನದ ಹುಂಡಿ ಮತ್ತು ಜಾತ್ರೆ ಆಚರಣೆ ಸಂದರ್ಭ ಭಕ್ತರಿಂದ ಹೆಚ್ಚು ಆದಾಯ ಸಂಗ್ರಹವಾಗುತ್ತಿದ್ದುದೇ ಗುಂಪು ಘರ್ಷಣೆಗೆ ಕಾರಣ ಎನ್ನಲಾಗಿದೆ.
ಶನಿವಾರ ರಾತ್ರಿ ಈ ವಿಚಾರವಾಗಿ ಜಯರಾಮಪ್ಪ ಮತ್ತು ಚನ್ನಪ್ಪ ನೇತೃತ್ವದ ಗುಂಪುಗಳ ನಡುವೆ ಜಗಳವಾಯಿತು. ಎರಡು ಗುಂಪಿನವರೂ ಪರಸ್ಪರ ಎಳೆದಾಡಿ ಕಲ್ಲು, ದೊಣ್ಣೆಗಳಿಂದ ಹೊಡೆದಾಡಿದರು. ಚನ್ನಪ್ಪನ ಕಡೆಯವರು ಜಯರಾಮಪ್ಪ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದಾಗ ಕುಸಿದು ಬಿದ್ದ ಜಯರಾಮಪ್ಪ ಅವರನ್ನು ಚಳ್ಳಕೆರೆ ಆಸ್ಪತ್ರೆಗೆ ಕೊಂಡೊಯ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.
‘ನನ್ನ ಪತಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ’ ಎಂದು ಆರೋಪಿಸಿರುವ ಮೃತರ ಪತ್ನಿ ಗುಂಡಮ್ಮ ಹಾಗೂ ಪುತ್ರ ಸಂದೀಪ ಅವರು ಚನ್ನಪ್ಪ, ಓಬಳೇಶ್, ಅರ್ಜುನ್, ಆಕಾಶ, ಮುಕುಂದ ಅವರ ವಿರುದ್ಧ ದೂರು ನೀಡಿದ್ದರು. ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.