ಸೋಮವಾರ, ಮೇ 17, 2021
25 °C
ಉತ್ಸಾಹದಿಂದ ಹಬ್ಬವನ್ನಾಚರಿಸಿದ ಮಹಿಳೆಯರು, ಚಿಣ್ಣರು, ಯುವಸಮೂಹ

ಯುಗಾದಿ ಮರುದಿನ ನೀರೆರಚಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಯುಗಾದಿ ಹಬ್ಬದ ಅಂಗವಾಗಿ ಚಂದ್ರನನ್ನು ನೋಡಿದ ಮರುದಿನ ನೀರೆರಚುವ ಆಟ ಈಗಲೂ ಪ್ರಚಲಿತದಲ್ಲಿದೆ. ಇಲ್ಲಿಯೂ ಗುರುವಾರ ಅನೇಕರು ಉತ್ಸುಕರಾಗಿ ನೀರು ಎರಚಿ ಸಂಭ್ರಮಿಸಿದರು.

ವಿವಿಧ ಬಡಾವಣೆಗಳಲ್ಲಿ ಮಹಿಳೆಯರು-ಕಿರಿಯರು, ಯುವಕ-ಯುವತಿಯರು ನೀರೆರಚುವ ಹಬ್ಬದಾಟವನ್ನು ಆಚರಿಸಿದರು. ಅದರಲ್ಲೂ ಮಾವ, ಅಳಿಯ, ಅತ್ತೆ, ಸೊಸೆಯಂದಿರು ಹೆಚ್ಚಾಗಿ ನೀರೆರಚುವ ಆಟದಲ್ಲಿ ಪಾಲ್ಗೊಳ್ಳುವುದೇ ಈ ಆಚರಣೆಯ ವಿಶೇಷ.

ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ಜಿಲ್ಲಾ ಕ್ರೀಡಾಂಗಣ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಕೆಳಗೋಟೆ, ಮುನ್ಸಿಪಲ್ ಕಾಲೊನಿ, ಹೊಳಲ್ಕೆರೆ ರಸ್ತೆ, ನೆಹರೂ ನಗರ, ಬುರುಜನಹಟ್ಟಿ, ಫಿಲ್ಟರ್ ಹೌಸ್ ರಸ್ತೆ, ಧರ್ಮಶಾಲಾ ರಸ್ತೆ, ಗೋಪಾಲಪುರ ರಸ್ತೆ, ಗಾರೆಹಟ್ಟಿ ಸೇರಿ ವಿವಿಧೆಡೆ ನೀರೆರಚುವ ಆಟದಲ್ಲಿ ಜನರು ತೊಡಗಿದ್ದರು. ನಗರದ ಕೆಲವೆಡೆ ನೀರಿನ ಜತೆಗೆ ಬಣ್ಣವನ್ನು ಮಿಶ್ರಣ ಮಾಡಿಕೊಂಡು ಎರಚಲು ಮುಂದಾದ ದೃಶ್ಯ ಕಂಡು ಬಂದಿತು.

ಇಲ್ಲಿನ ಕರುವಿನಕಟ್ಟೆ ರಸ್ತೆ, ಸುಣ್ಣದಗುಮ್ಮಿ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚು ಯುವಸಮೂಹ ನೀರೆರಚುವ ಆಟದಲ್ಲಿ ತಲೀನರಾಗಿದ್ದರು. ಅಕ್ಕಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ನೀರೆರಚಿ ಸಂತಸಪಟ್ಟರು. ನೀರಿನ ಬವಣೆಯ ನಡುವೆಯೂ ಹಬ್ಬದಾಟ ಕೆಲವೆಡೆ ಜೋರಾಗಿಯೇ ನಡೆಯಿತು. 

ಹೊಸದಾಗಿ ನೆಂಟರಾದವರು, ಪರಸ್ಪರ ಒಬ್ಬರಿಗೊಬ್ಬರು ನೀರೆರಚುವ ಪದ್ಧತಿ ಅನೇಕ ವರ್ಷಗಳಿಂದಲೂ ರೂಢಿಯಲ್ಲಿದೆ. ಯುಗಾದಿ ಬೇಸಿಗೆಯಲ್ಲಿ ಬರುವುದರಿಂದ ನೀರೆರಚುವ ಆಟ ಸುಡು ಬಿಸಿಲಿನ ಮಧ್ಯೆ ದೇಹಕ್ಕೆ ತಂಪು ನೀಡುತ್ತದೆ ಎಂಬ ಕಾರಣಕ್ಕೆ ಹಿರಿಯರು ಆಚರಿಸಿಕೊಂಡು ಬಂದಿರಬಹುದು ಎಂಬ ನಂಬಿಕೆ ಇದೆ. ಈ ಆಟದಲ್ಲಿ ಅಣ್ಣ– ತಮ್ಮ, ಅಕ್ಕ– ತಂಗಿಯರು ಪರಸ್ಪರ ನೀರೆರಚುವಂತಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.