ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ಡ್ಯಾಂ ನಿರ್ಮಿಸದಂತೆ ಸಿಇಒ ತಾಕೀತು

ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ
Last Updated 13 ಸೆಪ್ಟೆಂಬರ್ 2019, 12:58 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ಚೆಕ್‌ ಡ್ಯಾಂ ನಿರ್ಮಾಣ ಮಾಡದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಅಧಿಕಾರಿಗಳಿಗೆ ತಾಕೀತು ಮಾಡಿದರು. ಆದೇಶ ಉಲ್ಲಂಘಿಸಿ ಚೆಕ್‌ಡ್ಯಾಂ ನಿರ್ಮಿಸಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆಯನ್ನೂ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚೆಕ್‌ ಡ್ಯಾಂ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನರೇಗಾ ಯೋಜನೆಯ ಅನುದಾನವನ್ನು ಚೆಕ್‌ಡ್ಯಾಂ ನಿರ್ಮಾಣಕ್ಕೆ ವಿನಿಯೋಗ ಮಾಡಲಾಗಿದೆ ಎಂಬ ಕೃಷಿ ಇಲಾಖೆ ಅಧಿಕಾರಿಯ ಸಮಜಾಯಿಷಿ ಸತ್ಯಭಾಮ ಅವರನ್ನು ಕೆರಳಿಸಿತು.

‘ಕೃಷಿ ಹೊಂಡ, ಬದು ನಿರ್ಮಣಕ್ಕೆ ಈ ಅನುದಾನ ಬಳಸಬಹುದು. ಜಲಸಂರಕ್ಷಣೆ ಮಾಡುವುದಕ್ಕೆ ಬೇರೆ ಇಲಾಖೆ ಇದೆ. ನಿಮ್ಮ ಹೊಣೆಯನ್ನು ಮಾತ್ರ ನಿರ್ವಹಿಸಿ. ಮತ್ತೊಂದು ಇಲಾಖೆಯ ಕಾರ್ಯದಲ್ಲಿ ಮೂಗು ತೂರಿಸಬೇಡಿ. ಸ್ಮಶಾನ ಅಭಿವೃದ್ಧಿ, ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಇತರ ಕೆಲಸಗಳಿಗೂ ಒತ್ತು ನೀಡಿ’ ಎಂದು ಸೂಚನೆ ನೀಡಿದರು.

‘ನರೇಗಾ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ. ಬಹುತೇಕ ಎಲ್ಲ ಇಲಾಖೆ ನರೇಗಾ ಅನುದಾನವನ್ನು ಚೆಕ್‌ಡ್ಯಾಂ ನಿರ್ಮಾಣಕ್ಕೆ ವಿನಿಯೋಗ ಮಾಡಿವೆ. ಬರ ಪರಿಸ್ಥಿತಿಯ ನೆಪದಲ್ಲಿ ಹಲವೆಡೆ ಇವುಗಳನ್ನು ಅವೈಜ್ಞಾನಿಕವಾಗಿ ಕಟ್ಟಲಾಗಿದೆ. ಇರುವ ಚೆಕ್‌ಡ್ಯಾಂಗಳೇ ತುಂಬಿದರೆ ಸಾಕಾಗಿದೆ’ ಎಂದರು.

ಎಇಇ ಮೇಲೆ ಹೊಣೆ

ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಗೆ ನೀಡಲಾಗಿದೆ. ಘಟಕ ದುರಸ್ತಿಗೊಳಿಸದೇ ಇದ್ದರೆ ಸಹಾಯಕ ಕಾರ್ಯಪಾಲ ಎಂಜಿನಿಯರ್‌ (ಎಇಇ) ಹೊಣೆ ಎಂದು ಸಿಇಒ ಸಭೆಗೆ ಮಾಹಿತಿ ನೀಡಿದರು.

ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಸ್ಥಾಪಿಸಿದ ಘಟಕ ಕೆಟ್ಟು ನಿಂತು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದವು. ಘಟಕ ಸ್ಥಾಪಿಸಿದ ಏಜೆನ್ಸಿ ಹಾಗು ಗುತ್ತಿಗೆದಾರರೇ ದುರಸ್ತಿಗೊಳಿಸುವಂತೆ ಸರ್ಕಾರ ಆದೇಶಿಸಿತ್ತು. ನಿಯಮಾವಳಿಗೆ ಮತ್ತೆ ತಿದ್ದುಪಡಿ ತಂದಿರುವ ಸರ್ಕಾರ, ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ವಹಿಸಿದೆ.

‘ನೀರಿನಲ್ಲಿ ಕರಗಿದ ಲವಣಾಂಶಗಳ ಪ್ರಮಾಣ (ಟಿಡಿಎಸ್‌) ಪರಿಶೀಲಿಸುವ ಅಗತ್ಯವಿದೆ. ಕುಡಿಯುವ ನೀರಿನ ಘಟಕಗಳಿಗೆ ಸಂಬಂಧಿಸಿದಂತೆ ಸಾಕಷ್ಟು ದೂರು ಬರುತ್ತಿವೆ. ಪ್ರತಿ ಘಟಕಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ’ ಎಂದು ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌ ಹೇಳಿದರು.

ಕೋಳಿ ಮೃತಪಟ್ಟರೆ ಪಶುವೈದ್ಯ ಹೊಣೆ

ಪಶುಸಂಗೋಪನೆ ಇಲಾಖೆ ವಿತರಿಸುವ ಗಿರಿರಾಜ್ ಕೋಳಿ ಫಲಾನುಭವಿಗಳ ಮನೆಯಲ್ಲಿ ಮೃತಪಟ್ಟರೆ ಪಶುವೈದ್ಯರನ್ನೇ ಹೊಣೆ ಮಾಡಲಾಗುತ್ತದೆ ಎಂದು ಸಿಇಒ ಸತ್ಯಭಾಮ ಎಚ್ಚರಿಕೆ ನೀಡಿದರು.

‘ಪಶುಸಂಗೋಪನೆ ಇಲಾಖೆಯಿಂದ ವಿತರಣೆ ಮಾಡುವ ಕೋಳಿಗಳು ಫಲಾನುಭವಿಗಳ ಮನೆ ತಲುಪಿದ ಕೆಲವೇ ದಿನಗಳಲ್ಲಿ ಮೃತಪಡುತ್ತಿವೆ. ನಾನೇ ವಿತರಿಸಿದ ಹಲವು ಕೋಳಿ ಮೃತಪಟ್ಟಿವೆ. ಆರೋಗ್ಯವಂಥ ಕೋಳಿ ನೀಡಬೇಕಲ್ಲವೇ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪ್ರಶ್ನಿಸಿದರು.

‘ವಿತರಣೆಗೂ ಮುನ್ನ ಕೋಳಿಯ ಆರೋಗ್ಯ ಪರಿಶೀಲಿಸಬೇಕು. ಆಗಾಗ ಅವುಗಳ ಆರೋಗ್ಯದ ಬಗ್ಗೆ ನಿಗಾ ಇಡಬೇಕು. ಫಲಾನುಭವಿಗಳಿಗೆ ನಷ್ಟ ಉಂಟಾದರೆ ಪಶುವೈದ್ಯರನ್ನು ಹೊಣೆ ಮಾಡಲಾಗುವುದು’ ಎಂದು ಸಿಇಒ ಹೇಳಿದರು.

8 ತಿಂಗಳ ಬಳಿಕ ಅನುಪಾಲನೆ

ಸೌಭಾಗ್ಯ ಬಸವರಾಜನ್‌ ಅಧ್ಯಕ್ಷತೆಯಲ್ಲಿ ಜ.11ರಂದು ನಡೆದ ಸಭೆಯ ಅನುಪಾಲನಾ ವರದಿ ಶುಕ್ರವಾರ ಚರ್ಚೆಗೆ ಬಂದಿತು. ಹಿಂದಿನ ಸಭೆಯಲ್ಲಿ ಮಾತನಾಡಿದ್ದಕ್ಕೂ, ಅನುಪಾಲನಾ ವರದಿಯಲ್ಲಿ ಆಗಿರುವ ಉಲ್ಲೇಖಕ್ಕೂ ಹಾಗೂ ವಾಸ್ತವಕ್ಕೂ ಸಂಬಂಧವೇ ಇರಲಿಲ್ಲ.

ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಯ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌ ವಾಸ್ತವ ಏನಿದೆ ಹೇಳಿ ಎಂದು ಕೇಳುತ್ತಿದ್ದರು. ಶುದ್ಧ ಕುಡಿಯುವ ನೀರಿನ ಘಟಕಗಳ ಅಸಮರ್ಪಕ ನಿರ್ವಹಣೆಯ ಬಗ್ಗೆ ಅಧಿಕಾರಿಗಳು ನೀಡುತ್ತಿದ್ದ ಉತ್ತರಕ್ಕೆ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ‘8 ತಿಂಗಳು ಕಳೆದರೂ ಸಮಸ್ಯೆ ಇತ್ಯರ್ಥವಾಗದೇ ಇದ್ದರೆ ಹೇಗೆ’ ಎಂದು ಖಾರವಾಗಿ ಪ್ರಶ್ನಿಸಿದರು.

‘ವಾಟ್‌ ಎ ನಾನ್‌ಸೆನ್ಸ್‌...’

ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ‘ವಾಟ್‌ ಎ ನಾನ್‌ಸೆನ್ಸ್‌...’ ಎಂಬುದು ಕೆಲ ಬಾರಿ ಅನುರಣಿಸಿತು. ಅಧಿಕಾರಿಗಳ ವಿರುದ್ಧದ ಅಸಮಾಧಾನವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಹೀಗೆ ವ್ಯಕ್ತಪಡಿಸುತ್ತಿದ್ದರು. ಕೃಷಿ ಇಲಾಖೆ ಹಾಗೂ ಪ್ರಧಾನಮಂತ್ರಿ ಗ್ರಾಮೀಣ ಸಡಖ್‌ ಯೋಜನೆಯ (ಪಿಎಂಜಿಎಸ್‌ವೈ) ಅಧಿಕಾರಿಗಳು ಸಿಇಒ ಅಸಮಾಧಾನಕ್ಕೆ ಗುರಿಯಾದರು.

ಚೆಕ್‌ಡ್ಯಾಂ ನಿರ್ಮಾಣದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ನಾನ್‌ಸೆನ್ಸ್‌...’ ಪದ ಉಚ್ಛರಣೆ ಆಗುತ್ತಿದ್ದಂತೆ ಸಭೆ ಸ್ತಬ್ಧವಾಯಿತು. ಪಿಎಂಜಿಎಸ್‌ವೈ ಬಗ್ಗೆ ಸರಿಯಾದ ಮಾಹಿತಿ ನೀಡದ ಅಧಿಕಾರಿಗೆ ಷೋಕಾಸ್‌ ನೋಟಿಸ್‌ ನೀಡುವಂತೆ ಸೂಚನೆ ನೀಡಿದರು.

ಉಪಾಧ್ಯಕ್ಷೆ ಪಿ.ಸುಶೀಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT