ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ ತಿಂಗಳ ವೇತನ ನೀಡುತ್ತಿದ್ದೇವೆ

ಕೆಎಸ್‌ಆರ್‌ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್
Last Updated 4 ಏಪ್ರಿಲ್ 2020, 12:02 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ರಜೆ ಕಡಿತ ಮಾಡುವುದಿಲ್ಲ. ಮಾರ್ಚ್ ತಿಂಗಳ ಪೂರ್ತಿ ವೇತನ ನೀಡಲಿದ್ದೇವೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಹೇಳಿದರು.

ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗೀಯ ಕಚೇರಿ ಹಾಗೂ ಇಲ್ಲಿನ ಬಸ್ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ ಜತೆ ಅವರು ಮಾತನಾಡಿದರು.

‘ಕೊರೊನಾ ಸಂಕಷ್ಟದಿಂದ ದೇಶ ಮತ್ತು ರಾಜ್ಯ ಬಿಡುಗಡೆ ಆಗಬೇಕಿದೆ. ಅದಕ್ಕಾಗಿ ಸರ್ಕಾರದ ಆದೇಶದಂತೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೋವಿಡ್-19ರ ನೆರವಿಗಾಗಿ ನೌಕರರ ಒಂದು ದಿನದ ವೇತನ ಕಡಿತ ಮಾಡಿ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಕೊರೊನಾದಿಂದಾಗಿ ಬಸ್‌ಗಳ ಸಂಚಾರ ಇಲ್ಲದ ಕಾರಣ ನಿಗಮಕ್ಕೆ ಆದಾಯವೂ ಇಲ್ಲವಾಗಿದೆ. ಆದರೆ, ಜೀವನ್ಮರಣದ ಪ್ರಶ್ನೆ ಎದುರಾದಾಗ ಲಾಭ, ನಷ್ಟದ ಲೆಕ್ಕ ಹಾಕಬಾರದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚಿತ್ರದುರ್ಗ ಆದಾಯ ತರುವ ಸ್ಥಳ: ‘ಸಂಸ್ಥೆಗೆ ಉತ್ತಮ ಆದಾಯ ತರುವ ಸ್ಥಳಗಳಲ್ಲಿ ಚಿತ್ರದುರ್ಗವೂ ಇದೆ. ಮಧ್ಯ ಕರ್ನಾಟಕ ಭಾಗವಾದ್ದರಿಂದ ಇಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಆಗಬೇಕಾದ ಕೆಲಸಗಳು, ಸಮಸ್ಯೆಗಳನ್ನು ಪಟ್ಟಿ ಮಾಡಿದ್ದೇವೆ. ಲಾಕ್‌ಡೌನ್‌ ನಂತರ ಈ ಕುರಿತು ಹೆಚ್ಚಿನ ಗಮನಹರಿಸುತ್ತೇವೆ’ ಎಂದರು.

‘ಪ್ರಸ್ತುತ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಇಲ್ಲಿನ ಬಸ್ ನಿಲ್ದಾಣ ಇಲ್ಲ. ಕಿರಿದಾಗಿದೆ ಎಂಬ ವಿಚಾರ ಗಮನಕ್ಕೆ ಬಂದಿದೆ. ಅದಕ್ಕಾಗಿ ನೂತನ ಬಸ್ ನಿಲ್ದಾಣ ಅಥವಾ ಇರುವ ನಿಲ್ದಾಣವನ್ನೇ ವಿಸ್ತರಿಸಿ, ಹೈಟೆಕ್ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಸರ್ಕಾರಿ ನೌಕರರನ್ನಾಗಿಸಲು ಚರ್ಚೆ:‘ಸರ್ಕಾರಿ ನೌಕರರನ್ನಾಗಿ ಕೆಎಸ್‌ಆರ್‌ಟಿಸಿ ನೌಕರರನ್ನು ಪರಿಗಣಿಸುವ ವಿಚಾರ ಸರ್ಕಾರದ ಹಂತದಲ್ಲಿದೆ. ಮೇ ತಿಂಗಳು ಈ ಕುರಿತು ಚರ್ಚೆಯಾಗುವ ವಿಶ್ವಾಸವಿದೆ’ ಎಂದು ಶಿವಯೋಗಿ ಕಳಸದ್ ಹೇಳಿದರು.

‘ಚಿತ್ರದುರ್ಗ ಘಟಕದಲ್ಲಿ ಚಾಲಕರು, ನಿರ್ವಾಹಕರ 70 ಹುದ್ದೆಗಳು ಖಾಲಿ ಇರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 15ರ ನಂತರ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT