ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಕಲ್ಯಾಣಾರ್ಥ ಸುದರ್ಶನ ಹೋಮ

Last Updated 2 ಜನವರಿ 2012, 10:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಾತಿಗಿಂತ ಗುಣ ನಡತೆಯೇ ಶ್ರೇಷ್ಠ ಎಂದು ಆರ್‌ಎಸ್‌ಎಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರತಿಪಾದಿಸಿದರು. ಧರ್ಮಜಾಗರಣ ಸಮನ್ವಯ ವಿಭಾಗ ಮತ್ತು ಧರ್ಮ ರಕ್ಷಾ ವಾಹಿನಿ ಆಶ್ರಯದಲ್ಲಿ ಭಾನುವಾರ ನಡೆದ 2ನೇ ವರ್ಷದ ಲೋಕಕಲ್ಯಾಣಾರ್ಥ ಸುದರ್ಶನ ಹೋಮ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ರಾಹ್ಮಣನಾದ ರಾವಣನಿಗಿಂತ ಬೆಸ್ತನಾದ ವ್ಯಾಸ, ಬೇಡನಾದ ವಾಲ್ಮೀಕಿಗೆ ಹೆಚ್ಚಿನ ಗೌರವವಿದೆ. ಯಾರಾದರೂ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ನೀಡುವಂತಹ ಅಹಿಂಸೆಯ ಪಾಠ ಬೇಕಿಲ್ಲ. ಎರಡೂ ಕೆನ್ನೆಗೆ ಹೊಡೆಸಿಕೊಂಡರೂ ಅವರನ್ನು ತಿರುಗಿ ಎದುರಿಸುವುದೇ ಅಹಿಂಸೆ ಎಂದು ಹೇಳಿದರು.

ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ದೇವರು ಮನುಷ್ಯನಿಗೆ ಎರಡು ಕಣ್ಣು ಕೊಟ್ಟಿದ್ದಾನೆ. ಒಂದು ಶ್ರದ್ಧೆಯದ್ದು, ಮತ್ತೊಂದು ಭೌತಿಕ. ಈ ಶ್ರದ್ಧೆಯ ಕಣ್ಣಿನ ಮೂಲಕ ದೇವರನ್ನು ಕಾಣಬಹುದು. ಶ್ರದ್ಧೆಯಿಂದ ಪೂಜಾ ಕಾರ್ಯಕ್ರಮ ನೆರವೇರಿಸುವ ಮೂಲಕ ನಾವು ದೇವರನ್ನು ಕಾಣಬಹುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮ ಜಾಗರಣ ಸಮನ್ವಯ ವಿಭಾಗ ಪ್ರಾಂತ ಸಂಚಾಲಕ ಮುನಿಯಪ್ಪ, ನಾವೆಲ್ಲ ಒಂದೇ ಎನ್ನುವ ಭಾವನೆ ಗಟ್ಟಿಗೊಳಿಸಲಿಕ್ಕೆ ಈ ಸಾಮೂಹಿಕ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಾತಿಯನ್ನು ಮೀರಿದ್ದು ಹಿಂದುತ್ವ. ಇಂತಹ ಹಿಂದುತ್ವ ತತ್ವದಡಿ ಒಂದಾಗುವುದರಿಂದ ಹಿಂದೂಗಳು ಮತ್ತಷ್ಟು ಶಕ್ತಿಯುತವಾಗುತ್ತದೆ. ಈ ಶಕ್ತಿ ಪಡೆದುಕೊಳ್ಳುವುದು ಬೇರೆಯವರನ್ನು ದಮನಿಸಲು ಇಲ್ಲವೇ ಸದೆ ಬಡಿಯಲು ಅಲ್ಲ. ನಮ್ಮ ಉನ್ನತಿಗಾಗಿ ಈ ಶಕ್ತಿ ಗಳಿಸಿಕೊಳ್ಳಬೇಕಿದೆ ಎಂದರು.

ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸುದರ್ಶನ ಹೋಮ ವಿಜೃಂಭಣೆಯಿಂದ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಸ್ವಯಂ ಪ್ರೇರಣೆಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಂಸತ್ ಸದಸ್ಯ ಜನಾರ್ದನಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಎಂ.ಪಿ. ಗುರುರಾಜ್, ಬಿ.ಎ. ಲಿಂಗಾರೆಡ್ಡಿ, ಕೋಟ್ಲ ದೇವರಾಜ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT