ಶನಿವಾರ, ಫೆಬ್ರವರಿ 27, 2021
19 °C
ಸಿಬಿಐ, ಐ.ಡಿ. ದುರ್ಬಳಕೆ ಆರೋಪ ಮಾಡಿರುವ ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಿಎಸ್‌ವೈ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ

ಯಡಿಯೂರಪ್ಪಗೆ ಮಾನ ಇದೆಯಾ?: ಕುಮಾರಸ್ವಾಮಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು/ರಾಮನಗರ: ಆದಾಯ ತೆರಿಗೆ(ಐ.ಟಿ) ಇಲಾಖೆ ದುರ್ಬಳಕೆ ವಿಷಯ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಧ್ಯದ ವಾಕ್ಸಮರವನ್ನು ಕಾವೇರಿಸಿದೆ. ಸವಾಲ್‌–ಜವಾಬ್‌ಗಳಿಗೂ ದಾರಿ ಮಾಡಿಕೊಟ್ಟಿದೆ.

ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಐ.ಟಿ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.

ಎಚ್.ಡಿ. ಕುಮಾರಸ್ವಾಮಿ ಹೇಳಿದ್ದು:

*ಅವರಿಗೆ ನಿಜವಾಗಲೂ ಮಾನ ಇದೆಯಾ? ಇರುವುದು ಖಾತ್ರಿಯಾದರೆ ಮಾತ್ರ ಮಾನನಷ್ಟ ಮೊಕದ್ದಮೆ ಹೂಡಲಿ

*ಕೇಂದ್ರ ಸರ್ಕಾರವು ಕೆಲವು ಇಲಾಖೆಗಳನ್ನು ದುರ್ಬಳಕೆ ಮಾಡುತ್ತಿರುವುದು ಖಂಡಿತ. ನಾನು ನನ್ನ ಮಾತಿಗೆ ಈಗಲೂ ಬದ್ಧ.

*ಮಾನನಷ್ಟ ಮೊಕದ್ದಮೆ ಹೂಡಿದರೆ ನ್ಯಾಯಾಲಯದ ಮುಂದೆ ಸಾಕ್ಷ್ಯ ನೀಡಲು ಸಿದ್ಧನಿದ್ದೇನೆ

ಯಡಿಯೂರಪ್ಪ ಹೇಳಿದ್ದು:

* ಜವಾಬ್ದಾರಿಯುತ ಸ್ಥಾನದಲ್ಲಿರುವ ಕುಮಾರಸ್ವಾಮಿ ಆಧಾರ ರಹಿತ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ

*ವಿಜಯೇಂದ್ರ ಭೇಟಿಯಾಗಲು ಬಂದಿಲ್ಲ ಎಂದು ಐಟಿ ಅಧಿಕಾರಿಗಳೇ ಹೇಳಿದ್ದಾರೆ

*ಆರೋಪಗಳನ್ನು ಮುಖ್ಯಮಂತ್ರಿ ಸಾಬೀತು ಮಾಡಿದರೆ, ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಸಂದರ್ಭ ಬಂದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ

ಬ್ಯಾಂಕುಗಳಿಗೆ ಸಾಲ ಪಾವತಿ: ಸಿಎಂ

‘ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕೃಷಿ ಸಾಲವನ್ನು ಸರ್ಕಾರವು ತನ್ನ ಸ್ವಂತ ಆರ್ಥಿಕ ಸಂಪನ್ಮೂಲದಿಂದಲೇ ತೀರಿಸಲಿದೆ. ಮುಂದಿನ ಜುಲೈ ಒಳಗೆ ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡಲಾಗುವುದು’ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

‘ರಾಮನಗರ ವಿಧಾನಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತಂತೆ ನಾನು ಇನ್ನೂ ಕಾಂಗ್ರೆಸ್ ಮುಖಂಡರ ಜೊತೆ ಚರ್ಚಿಸಿಲ್ಲ. ಚುನಾವಣೆ ಘೋಷಣೆಯಾದ ಬಳಿಕವಷ್ಟೇ ಮಾತುಕತೆ ಮಾಡಿ ಅಭ್ಯರ್ಥಿ ಅಂತಿಮಗೊಳಿಸುತ್ತೇವೆ’ ಎಂದರು.

ಸೀತೆ ಬೇಕು: ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ‘ರಾಮನಗರಕ್ಕೆ ರಾಮನಂತೆ ಕುಮಾರಸ್ವಾಮಿ ಇದ್ದಾರೆ. ಈಗ ಇಲ್ಲಿಗೆ ಸೀತೆಯನ್ನು ಕರೆತರಬೇಕಿದೆ’ ಎನ್ನುವ ಮೂಲಕ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆಯ ಸುಳಿವು ನೀಡಿದರು.

‘ಜಲಧಾರೆ’ಗೆ ಸಿದ್ಧತೆ
ರಾಜ್ಯದ ಪ್ರತಿ ಹಳ್ಳಿಗೂ ನದಿ ಮೂಲದಿಂದ ಶಾಶ್ವತವಾಗಿ ನೀರು ಪೂರೈಸುವ ‘ಜಲಧಾರೆ’ ಯೋಜನೆಗೆ ಸಿದ್ಧತೆ ನಡೆದಿದ್ದು, ಇದಕ್ಕಾಗಿ ₨60–70 ಸಾವಿರ ಕೋಟಿ ವೆಚ್ಚ ಅಂದಾಜಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು