ಶುಕ್ರವಾರ, ಜುಲೈ 30, 2021
25 °C

ಹಿರಿಯ ರಂಗಕರ್ಮಿ ಡಿ.ಕೆ.ಚೌಟ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿರಿಯ ರಂಗಕರ್ಮಿ, ನಾಟಕಕಾರ ಹಾಗೂ ರಂಗ ನಿರಂತರ ಕಾರ್ಯಾಧ್ಯಕ್ಷ ದರ್ಬೆ ಕೃಷ್ಣಾನಂದ ಚೌಟ (82) ಬುಧವಾರ ಬೆಳಿಗ್ಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾದರು. 

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. 

ಅವರಿಗೆ ಪುತ್ರ ಬಾಲಿವುಡ್‌ ಸಂಗೀತ ನಿರ್ದೇಶಕ ಸಂದೀಪ್‌ ಚೌಟ, ಪುತ್ರಿ, ಆನೆ ತಜ್ಞೆ ಪ್ರಜ್ಞಾ ಚೌಟ ಇದ್ದಾರೆ.

ಮುಂಜಾನೆ ಎದೆನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಯೇ ಅವರು ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬಸವೇಶ್ವರ ನಗರ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದೆ. ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 7ಕ್ಕೆ ಶ್ರೀರಾಮಪುರ ಬಳಿಯ ಹರಿಶ್ಚಂದ್ರ ಘಾಟ್‌ ಚಿತಾಗಾರದಲ್ಲಿ ನಡೆಯಲಿದೆ. 

ಡಿ.ಕೆ. ಚೌಟ ಎಂದೇ ಜನಪ್ರಿಯರಾಗಿದ್ದ ದರ್ಬೆ ಕೃಷ್ಣಾನಂದ ಚೌಟ ಹುಟ್ಟಿದ್ದು ಜೂನ್ 1, 1938ರಂದು. ಕಾಸರಗೋಡು ಜಿಲ್ಲೆ ಮೀಯಪದವಿನ ದರ್ಬೆ ಮನೆತನದ ಚೌಟ ಅವರ ಊರು ಮಂಜೇಶ್ವರದಿಂದ ಏಳು ಕಿ.ಮೀ ದೂರದಲ್ಲಿದೆ. ಉದ್ಯಮಿಯಾಗಿದ್ದು, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಚಟುವಟಿಕೆಗಳಿಗೆ ನಿರಂತರವಾಗಿ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿದ್ದರು. ಸೃಜನಶೀಲ ಬರವಣಿಗೆಯ ಮೂಲಕವೂ ತುಳು, ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದರು. ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರು, ಚಿತ್ರಸಂತೆ ಮೂಲಕ ಚಿತ್ರಕಲಾ ಪರಿಷತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆಯಲು ಕಾರಣರಾಗಿದ್ದರು.

‘ಆನಂದ ಕೃಷ್ಣ’ ಎಂಬ ಕಾವ್ಯನಾಮದಿಂದ ಖ್ಯಾತಿ ಪಡೆದಿದ್ದ ಚೌಟ, 'ಕರಿಯಜ್ಜನ ಕಥೆಗಳು', 'ಪಿಲಿಪತ್ತಿ ಗಡಸ್', 'ಪಟ್ಟು ಪಜ್ಜೆಲು', 'ದರ್ಮೆತ್ತಿ ಮಾಯೆ', 'ಉರಿ ಉಷ್ಣದ ಮಾಯೆ', 'ಮಿತ್ತಬೈಲ್ ಯಮುನಕ್ಕೆ', ‘ಅರ್ಧ ಸತ್ಯ ಬಾಕಿ ಸುಳ್ಳಲ್ಲ’ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದರು. ಅವರು ರಚಿಸಿದ 'ಪಿಲಿಪತ್ತಿ ಗಡಸ್' ನಾಟಕಕ್ಕೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದೆ. ಇವರ ಸಾಹಿತ್ಯ ಸೇವೆ ಪರಿಗಣಿಸಿ ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿದ್ದರು. 

ಕಳೆದ ವರ್ಷ ನಡೆದ‌ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ: ಡಿ.ಕೆ. ಚೌಟ ಸಂದರ್ಶನ | ಮಣ್ಣು, ಅಕ್ಷರ ಕೃಷಿಯೇ ಜೀವಚೈತನ್ಯ

ಅವರು ಮಕ್ಕಳಾದ ಪ್ರಜ್ಞಾ ಚೌಟ, (ಆನೆಗಳ ಡಾಕ್ಟರ್ ಅಂತಲೇ ಪ್ರಸಿದ್ಧಿಪಡೆದವರು) ಹಾಗೂ ಬಾಲಿವುಡ್ ಸಂಗೀತ ನಿರ್ದೇಶಕ ಸಂದೀಪ್ ಚೌಟ ಸೇರಿದಂತೆ ಅಪಾರ ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.

ಇದನ್ನೂ ಓದಿ: ಮನೆಯಂಗಳದಲ್ಲಿ ಮಾತುಕತೆ | ಪ್ರತ್ಯೇಕ ತುಳು ರಾಜ್ಯದ ಬೇಡಿಕೆ ಹುಚ್ಚುತನ

ಶಶಿಧರ ಭಾರಿಘಾಟ್, ಕೃಷ್ಣಬೈರೇಗೌಡ ಸಂತಾಪ

‘ನಿಜವಾದ ಅರ್ಥದಲ್ಲಿ ರಂಗಭೂಮಿಯ ಪೋಷಕರು ಡಿ.ಕೆ ಚೌಟ ಅವರು. 90ರ ದಶಕದಲ್ಲಿ ಸಿಜಿಕೆ ಮೂಲಕ ಕನ್ನಡ ರಂಗಭೂಮಿಗೆ ಪರಿಚಿತರಾದರು. ನಂತರದಲ್ಲಿ ಸಮುದಾಯ ಸೇರಿದಂತೆ ಕರ್ನಾಟಕದ ವಿವಿಧ ರಂಗ ತಂಡಗಳಿಗೆ ಅವರು ನೀಡಿದ ಸಹಕಾರ ಅನನ್ಯವಾದುದು. ಸಮುದಾಯದ ರುಡಾಲಿ, ಜುಗಾರಿಕ್ರಾಸ್ ಸೇರಿದಂತೆ ಸಮುದಾಯದ ಉತ್ಸವಗಳಿಗೆ ಅವರ ಆರ್ಥಿಕ ಸಹಾಯ ದೊರಕಿದೆ. ಸಿಜಿಕೆ ನಂತರ ರಂಗನಿರಂತರದ ಚುಕ್ಕಾಣಿ ಹಿಡಿದು ಸಂಘಟನೆಗೆ ಬಲ ತುಂಬಿದರು. ತಮ್ಮ ಸೃಜನಶೀಲ ಬರವಣಿಗೆಯ ಮೂಲಕ ತುಳು, ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಗಮನಾರ್ಹ. ಅವರ ಮಿತ್ತಬೈಲ್ ಯಮುನಕ್ಕೆ, ಅರ್ಧಸತ್ಯ ಬಾಕಿಸುಳ್ಳಲ್ಲ, ಕರಿಯಜ್ಜನ ಕಥೆಗಳು, ಪಿಲಪತ್ತಿ ಗಡಸ್, ಮೂರು ಹೆಜ್ಜೆ, ಮೂರು ಲೋಕ ಮುಂತಾದವು ನಮ್ಮ ಕನ್ನಡದ ಹೆಮ್ಮೆ. ಅವರ ಅಗಲಿಕೆಯಿಂದಾಗಿ ನಮ್ಮ ಸಾಂಸ್ಕೃತಿಕ ಲೋಕ ನಿಜವಾಗಿಯೂ ಬಡವಾಗಿದೆ. ಅವರ ಅಪೂರ್ವ ಚೇತನಕ್ಕೆ ಗೌರವಪೂರ್ವಕ ನಮನಗಳು’ ಎಂದು ರಂಗನಿರ್ದೇಶಕ ಶಶಿಧರ ಭಾರಿಘಾಟ್ ಸಂತಾಪ ಸೂಚಿಸಿದ್ದಾರೆ.

ಡಿ.ಕೆ. ಚೌಟ ಅವರ ನಿಧನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೃಷ್ಣಬೈರೇಗೌಡ ಸಹ ಶೋಕ ವ್ಯಕ್ತಪಡಿಸಿದ್ದಾರೆ.

‘ಡಿ.ಕೆ.ಚೌಟ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಹೆಸರು. ಅವರು ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ, ರಂಗ ನಿರಂತರದ ಪೋಷಕರಾಗಿ, ನಂತರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮೂಲಕ ಆ ಸಂಸ್ಥೆಗಳ ಬೆಳವಣಿಗೆಗೆ ಕಾರಣರಾದರು. ಚಿತ್ರಕಲಾ ಪರಿಷತ್ತಿನ ಬೆಳವಣಿಗೆಯಲ್ಲಿ ಚೌಟ ಅವರ ಪಾತ್ರ ಬಹಳ ದೊಡ್ಡದು. ಚಿತ್ರಸಂತೆ ಮೂಲಕ ಅವರು ರಾಷ್ಟ್ರಮಟ್ಟದಲ್ಲಿ ಚಿತ್ರಕಲಾ ಪರಿಷತ್ತು ಖ್ಯಾತಿ ಪಡೆಯಲು ಕಾರಣರಾದರು. ದೊಡ್ಡ ಮಟ್ಟದಲ್ಲಿ ಕಲಾವಿದರಿಗೆ ನೆರವು ನೀಡುತ್ತಿದ್ದ ಚೌಟ ಸ್ವತಃ ಬರಹಗಾರರಾಗಿ ಅನೇಕ ಉತ್ತಮ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟಿದ್ದಾರೆ. ತುಳು ಸಾಹಿತ್ಯಕ್ಕೆ ಅವರ ಕೊಡುಗೆ ದೊಡ್ಡದು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಸನ್ಮಾನಗಳಿಗೆ ಅವರು ಪಾತ್ರರಾಗಿದ್ದರು. ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ದೊಡ್ಡ ನಷ್ಟ ಅನುಭವಿಸಿದೆ’ ಎಂದು ಶೋಕ ಸಂದೇಶದಲ್ಲಿ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಕುಟುಂಬದ ಸಂಪರ್ಕಕ್ಕೆ: 94486 84055

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು