‘ಬಡ್ಡಿ ಕಟ್ಟಿದರೆ ಮಾತ್ರ ಸಾಲಮನ್ನಾ’

7
ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಆರೋಪ

‘ಬಡ್ಡಿ ಕಟ್ಟಿದರೆ ಮಾತ್ರ ಸಾಲಮನ್ನಾ’

Published:
Updated:
Prajavani

ಕನಕಪುರ: ‘ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರವು ಸಾಲಮನ್ನಾ ಘೋಷಣೆ ಮಾಡಿದ್ದರೂ ಸೊಸೈಟಿಗಳು ಬಡ್ಡಿ ಕಟ್ಟಿದರೆ ಮಾತ್ರ ಸಾಲಮನ್ನಾ ಎಂದು ಹೇಳುತ್ತಿವೆ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಆರೋಪಿಸಿದರು.

ನಗರದ ಎಪಿಎಂಸಿ ಕಚೇರಿಯಲ್ಲಿ ಶುಕ್ರವಾರ ನಡೆದ ‘ರಾಜ್ಯ ರೈತ ಸಂಘದ ಮಾಸಿಕ ಸಭೆ’ಯಲ್ಲಿ ಸಾಲಮನ್ನಾ ಹಾಗೂ ಇಲಾಖೆಗಳಲ್ಲಿ ಸವಲತ್ತು ಪಡೆಯಲು ಚುನಾಯಿತ ಜನಪ್ರತಿನಿಧಿಗಳ ಶಿಪಾರಸ್ಸು ಪತ್ರ ಕೇಳುತ್ತಿರುವ ಹಿನ್ನೆಲೆಯಲ್ಲಿ ಚರ್ಚೆ ನಡೆಸಿ ಅವರು ಮಾತನಾಡಿದರು.

‘ಸರ್ಕಾರವು 2008 ರಿಂದ ಈಚೆಗೆ ಸುಸ್ತಿ ಸಾಲ ಸೇರಿದಂತೆ ಪ್ರಸ್ತುತ ಚಾಲ್ತಿ ಸಾಲವನ್ನು ಮನ್ನಾ ಮಾಡಿರುವುದಾಗಿ ಹೇಳಿದೆ. ಯಾವ ರೈತರ ಸಾಲ ಸುಸ್ತಿಯಾಗಿರುತ್ತದೋ ಅಂಥವರು ಬಡ್ಡಿ ಕಟ್ಟಿದರೆ ಮಾತ್ರ ಸಾಲಮನ್ನಾವಾಗುತ್ತದೆ ಎಂದು ರೈತರಿಂದ ಬಡ್ಡಿ ಕಟ್ಟಿಸಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ಜನತೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದರು.

‘ಆಧಾರ್‌ ಕಾರ್ಡ್‌ ಮತ್ತು ಪಹಣಿಯಲ್ಲಿ ವ್ಯತ್ಯಾಸವಿರುವ ರೈತರ ದಾಖಲಾತಿಗಳನ್ನು ಪಡೆಯದೆ ವಾಪಸ್‌ ಕಳಿಸುತ್ತಿದ್ದಾರೆ. ದಾಖಲಾತಿಗಳನ್ನು ನಿಗದಿತ ದಿನಾಂಕದೊಳಗೆ ಕೊಡದಿದ್ದಲ್ಲಿ ಸಾಲಮನ್ನಾ ಆಗುವುದಿಲ್ಲ ಎಂದು ಸರ್ಕಾರ ಹೇಳುತ್ತಿದ್ದು, ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ’ ಎಂದರು.

‘ಸರ್ಕಾರವು ಇಲಾಖೆಗಳ ಮೂಲಕ ಕೊಡುವ ಸವಲತ್ತು ಮತ್ತು ಪ್ರೋತ್ಸಾಹ ಧನ, ಸಹಾಯಧನ, ರಿಯಾಯಿತಿ ದರದಲ್ಲಿ ಸಲಕರಣೆ ಪಡಯಲು ಕಡ್ಡಾಯವಾಗಿ ಜನಪ್ರತಿನಿಧಿಗಳಿಂದ ಶಿಫಾರಸು ಪತ್ರ ಕೇಳುತ್ತಿರುವುದು ರಾಜಕಾರಣಕ್ಕೆ ಅವಕಾಶವಾಗಿದೆ’ ಎಂದು ರೈತ ಸಂಘದ ಜಿಲ್ಲಾ ಮುಖಂಡ ಶ್ರೀನಿವಾಸ್‌ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ರೈತರು ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ಸರ್ಕಾರದ ಗೊಂದಲ ಹೇಳಿಕೆಗಳು, ಯೋಜನೆಗಳ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಲು ಜ. 9 ರಂದು ಭೇಟಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾಲ್ಲೂಕು ಘಟಕದ ಅಧ್ಯಕ್ಷ ಶಶಿಕುಮಾರ್‌, ಜಿಲ್ಲಾ ಕಾರ್ಯದರ್ಶಿ ಕುಮಾರ್‌, ಮುಖಂಡರಾದ ಶಿವರಾಮ್‌, ಕೃಷ್ಣ ಟಿ., ಮುನಿಸಿದ್ದೇಗೌಡ, ರವಿ.ಡಿ, ವೆಂಕಟೇಶ್‌ ಎಸ್‌.ಎಂ., ಸಿದ್ದರಾಮೇಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !