ರಾಮನಗರ ಉಪ ಚುನಾವಣೆ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ, ಬಿಜೆಪಿ ಒಗ್ಗಟ್ಟಿನ ಮಂತ್ರ

7
ಜೆಡಿಎಸ್‌ನಿಂದ ಅನಿತಾ ಹೆಸರು ಅಂತಿಮ

ರಾಮನಗರ ಉಪ ಚುನಾವಣೆ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ, ಬಿಜೆಪಿ ಒಗ್ಗಟ್ಟಿನ ಮಂತ್ರ

Published:
Updated:

ರಾಮನಗರ: ನ. 3ರಂದು ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಸ್ಪರ್ಧೆ ಸಂಬಂಧ ಪಕ್ಷದೊಳಗೆ ಬಂಡಾಯ ಮುಂದುವರಿದಿದೆ. ಸ್ವತಂತ್ರ ಸ್ಪರ್ಧೆಯ ನಿಲುವಿಗೆ ಈಗಲೂ ಬದ್ಧ ಎಂದು ವಿಧಾನಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಹಾಗೂ ಮುಖಂಡ ಇಕ್ಬಾಲ್‌ ಹುಸೇನ್‌ ಹೇಳಿಕೆ ನೀಡಿದ್ದಾರೆ.

ಗುರುವಾರ ದಿನವಿಡೀ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಜೊತೆ ಸಭೆಗಳನ್ನು ನಡೆಸಿ ಮೈತ್ರಿಯ ಸಾಧಕ–ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು. ಬಿಡದಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಸಿ.ಎಂ. ಲಿಂಗಪ್ಪ ‘ನಮಗೆ ಸರ್ಕಾರದ ಉಳಿವಿಗಿಂತ ಕಾರ್ಯಕರ್ತರ ಹಿತ ಕಾಯುವುದು ಮುಖ್ಯ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಅಭ್ಯರ್ಥಿ ಹಾಕದಿದ್ದರೆ ಬಂಡಾಯವಾಗಿ ಕಣಕ್ಕೆ ಇಳಿಯುವುದು ನಿಶ್ಚಿತ. ಸ್ಪರ್ಧೆಗೆ ಈಗಾಗಲೇ ಇಕ್ಬಾಲ್‌ ಹುಸೇನ್‌ ಸಿದ್ಧತೆ ನಡೆಸಿದ್ದಾರೆ. ಅವರು ಸ್ಪರ್ಧಿಸದೇ ಹೋದರೆ ನಾನೇ ಅಭ್ಯರ್ಥಿಯಾಗುತ್ತೇನೆ’ ಎಂದರು.

‘ನನ್ನ ಪುತ್ರ ಚಂದ್ರಶೇಖರ್ ಬಿಜೆಪಿ ಸೇರ್ಪಡೆಗೆ ನಮ್ಮ ಕುಟುಂಬದಲ್ಲಿ ಸಹಮತ ಇಲ್ಲ. ಯಾವುದೇ ಕಾರಣಕ್ಕೂ ಅವರನ್ನು ಮರಳಿ ಕಾಂಗ್ರೆಸ್‌ಗೆ ಕರೆ ತರುವುದಿಲ್ಲ’ ಎಂದರು.

ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಇಕ್ಬಾಲ್ ಹುಸೇನ್ ಮಾತನಾಡಿ ‘ಸ್ಪರ್ಧೆಗೆ ಕಾರ್ಯಕರ್ತರಿಂದ ಒತ್ತಡ ಹೆಚ್ಚಿದೆ. ವಾರ್ಡ್, ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಮೂರು ದಿನದಲ್ಲಿ ನಿರ್ಧಾರ ಪ್ರಕಟಿಸುತ್ತೇನೆ’ ಎಂದರು.

ಬುಧವಾರವಷ್ಟೇ ಪಕ್ಷ ಸೇರ್ಪಡೆಗೊಂಡ ಎಲ್. ಚಂದ್ರಶೇಖರ್ ಅವರು ಬಿಜೆಪಿ ಜಿಲ್ಲಾ ಘಟಕದ ಎಂ. ರುದ್ರೇಶ್‌ ಜೊತೆಗೂಡಿ ಗುರುವಾರ ರಾಮನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ‘ಪಕ್ಷವು ಮೂವರು ಆಕಾಂಕ್ಷಿಗಳಲ್ಲಿ ಯಾರೊಬ್ಬರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಗೆಲುವಿಗೆ ಶ್ರಮಿಸುತ್ತೇವೆ’ ಎಂದು ಇಬ್ಬರು ನಾಯಕರು ಹೇಳಿದರು.

ಜೆಡಿಎಸ್: ಗದ್ದಲಕ್ಕೆ ತೆರೆ
ಜೆಡಿಎಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇದ್ದ ಗೊಂದಲಕ್ಕೆ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ತೆರೆ ಎಳೆದಿದ್ದು, ಇದೇ 15ರಂದು ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವುದು ಖಾತ್ರಿಯಾಗಿದೆ.

ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಕ್ಷೇತ್ರದ ಕಾರ್ಯಕರ್ತರೊಡನೆ ಸಭೆ ನಡೆಸಿದ ಗೌಡರು, ಎಲ್ಲ ಮರೆತು ಗೆಲುವಿಗೆ ಶ್ರಮಿಸುವಂತೆ ಹೇಳಿದರು. ಕ್ಷೇತ್ರದ ಮುಸ್ಲಿಂ ಮುಖಂಡರ ಜೊತೆ ಪ್ರತ್ಯೇಕ ಸಭೆ ನಡೆಸಿ ಸಹಕಾರ ಕೋರಿದರು.

* ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಇಕ್ಬಾಲ್‌ ಹುಸೇನ್‌ ಸ್ಪರ್ಧಿಸಲಿದ್ದಾರೆ. ಅವರು ಸ್ಪರ್ಧಿಸದೇ ಹೋದರೆ ನಾನೇ ಅಭ್ಯರ್ಥಿಯಾಗುತ್ತೇನೆ
-ಸಿ.ಎಂ. ಲಿಂಗಪ್ಪ, ವಿಧಾನ ಪರಿಷತ್ ಸದಸ್ಯ

* ನಾನು ಅಭ್ಯರ್ಥಿಯಾಗಲು ಈಗಾಗಲೇ ಅರ್ಜಿ ಸಿದ್ಧಪಡಿಸಿಕೊಂಡಿದ್ದೇನೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಭಾನುವಾರದೊಳಗೆ ನಿರ್ಧಾರ ಪ್ರಕಟಿಸುತ್ತೇನೆ
-ಇಕ್ಬಾಲ್ ಹುಸೇನ್‌, ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿ

* ಉಪ ಚುನಾವಣೆಯಲ್ಲಿ ನಾನೂ ಬಿಜೆಪಿ ಟಿಕೆಟ್ ಆಕಾಂಕ್ಷಿ. ಪಕ್ಷವು ಅವಕಾಶ ನೀಡಿದಲ್ಲಿ ಇದೇ 13ರಂದು ನಾಮಪತ್ರ ಸಲ್ಲಿಸುತ್ತೇನೆ
-ಎಲ್‌. ಚಂದ್ರಶೇಖರ್‌, ಬಿಜೆಪಿ ಮುಖಂಡ

* ಬಿಜೆಪಿಯು ನಾನು, ಸಿ.ಪಿ. ಯೋಗೇಶ್ವರ್‌ ಹಾಗೂ ಚಂದ್ರಶೇಖರ್ ಮೂವರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಲಿದೆ. ಯಾರಿಗೇ ಟಿಕೆಟ್ ಸಿಕ್ಕರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ
-ಎಂ.ರುದ್ರೇಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !