ಸೋಮವಾರ, ಫೆಬ್ರವರಿ 17, 2020
19 °C
‘104’ ಸಹಾಯವಾಣಿಗೆ ಕರೆ ಮಾಡಿ

ನೋವೆಲ್‌ ಕರೋನಾ ವೈರಸ್‌; ಮುನ್ನೆಚ್ಚರಿಕೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ನೋವೆಲ್ ಕರೋನಾ ವೈರಸ್ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜೊತೆಗೆ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ನೋವೆಲ್ ಕರೋನಾ ವೈರಸ್ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಕರೋನಾ ವೈರಸ್ ಬಗ್ಗೆ ಸದ್ಯಕ್ಕೆ ಆತಂಕವಿಲ್ಲ. ಆದಾಗ್ಯೂ, ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ ಹಾಗೂ ಬೇಧಿ ಉಂಟಾದಾಗ ಭಯಪಡುವ ಅಗತ್ಯವಿಲ್ಲ. ಸಮೀಪದ ಸಾರ್ವಜನಿಕ, ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುವಂತೆ ಅರಿವು ಮೂಡಿಸಬೇಕು’ ಎಂದರು.

‘ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಕುರಿತು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸಂಶಯಾಸ್ಪದ ಪ್ರಕರಣಗಳು, ಪ್ರವಾಸಿಗರಹ ಮತ್ತು ರೋಗಿಗಳ ಬಗ್ಗೆ ನಿಗಾ ವಹಿಸಬೇಕು. ಅವಶ್ಯಕ ಔಷಧಿ, ವೈದ್ಯರು ಮತ್ತು ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಬಿ.ಬಿರಾದಾರ ಮಾತನಾಡಿ, ‘ಕರೋನಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೈರಸ್ ಆಗಿದೆ. ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ, ಸೋಂಕಿತ ವ್ಯಕ್ತಿಯ ಜೊತೆಗೆ ನಿಕಟ ಸಂಪರ್ಕದಲ್ಲಿರುವಾಗ, ಸೋಂಕಿತ ವ್ಯಕ್ತಿಯ ಹಸ್ತಲಾಘವ ಅಥವಾ ಮುಟ್ಟುವಾಗ, ಸೋಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ ಅಥವಾ ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ ಈ ಸೋಂಕು ಹರಡುವ ಸಾಧ್ಯತೆಗಳಿವೆ’ ಎಂದು ಹೇಳಿದರು.

‘ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಬೇಕು. ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸುವುದು, ವೈಯಕ್ತಿಕ ಸ್ವಚ್ಛತೆ ಕಾಪಾಡುವುದು, ವಿಶೇಷವಾಗಿ ಆಗಾಗ ಸಾಬೂನಿನಿಂದ ಕೈತೊಳೆದುಕೊಳ್ಳಬೇಕು, ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಮತ್ತು ಕೈವಸ್ತ್ರ ಉಪಯೋಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು, ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಮಾಂಸ, ಮೊಟ್ಟೆ ಇತರ ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು. ಅಸುರಕ್ಷಿತ ವಲ್ಲದ ಕಾಡುಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬಾರದು’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು