ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಯ | ಅಡಿಕೆ ಹಳದಿ ರೋಗ ಸಂಶೋಧನೆಗೆ ₹100 ಕೋಟಿ: ಖರ್ಗೆ

Published 25 ಏಪ್ರಿಲ್ 2023, 16:31 IST
Last Updated 25 ಏಪ್ರಿಲ್ 2023, 16:31 IST
ಅಕ್ಷರ ಗಾತ್ರ

ಸುಳ್ಯ: ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸುಳ್ಯ ಭಾಗದಲ್ಲಿ ಅಡಿಕೆ ಕೃಷಿಗೆ ಬಾಧಿಸಿರುವ ಹಳದಿ ರೋಗ, ಎಲೆ ಚುಕ್ಕಿ ರೋಗದ ಸಂಪೂರ್ಣ ಸಂಶೋಧನೆ ನಡೆಸಿ ಪರಿಹಾರ ಕಂಡುಕೊಳ್ಳುತ್ತೇವೆ. ಇದಕ್ಕಾಗಿ ₹100 ಕೋಟಿ ಅನುದಾನ ಮೀಸಲಿರಿಸಲಾಗುವುದು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು

ಸುಳ್ಯದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ಅಡಿಕೆ ಹಳದಿರೋಗದಿಂದ ಕೃಷಿ ನಾಶವಾದ ಕೃಷಿಕರಿಗೆ ಬಿಜೆಪಿ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಸಂಶೋಧನೆ ನಡೆಸಿ ಸೂಕ್ತ ಪರಿಹಾರ ಮಾಡಲಿಲ್ಲ’ ಎಂದು ಖರ್ಗೆ ಆರೋಪಿಸಿದರು.

‘ರಾಜ್ಯದ ಭವಿಷ್ಯದ ದೃಷ್ಟಿಯಿಂದ ಈ ಬಾರಿಯ ಚುನಾವಣೆ ಮಹತ್ವವಾದುದು. ಎಷ್ಟೇ ಭಿನ್ನಾಭಿಪ್ರಾಯ, ಅಸಮಾಧಾನ ಇದ್ದರೂ ಅದನ್ನು ಬದಿಗಿರಿಸಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ಈ ಬಾರಿ ಎಲ್ಲರೂ ಸೇರಿ ಕಾಂಗ್ರೆಸ್ ಪಕ್ಷವನ್ನು ಸುಳ್ಯದಲ್ಲಿ ಗೆಲ್ಲಿಸಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

‘ಬಡವರು ಕೂಡಾ ಬ್ಯಾಂಕ್‌ಗೆ ಹೋಗುವಂತೆ ಮಾಡಿದ್ದು ಇಂದಿರಾ ಗಾಂಧಿ. ಇದೀಗ ಕರಾವಳಿಯ ಕೆಲ ಬ್ಯಾಂಕ್‌ಗಳನ್ನು ಬೇರೆ ಬ್ಯಾಂಕ್ ಜೊತೆ ವಿಲೀನ ಮಾಡಿದ್ದಾರೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಯಾವ ಪ್ರಯೋಜನವೂ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಇರುವಾಗ ಅದೆಷ್ಟೋ ಕಾರ್ಯಕ್ರಮಗಳನ್ನ ಕೊಟ್ಟು ರಸ್ತೆಗಳನ್ನು, ಸೇತುವೆಗಳನ್ನು, ಬೃಹತ್ ಕೈಗಾರಿಕೆಗಳನ್ನು ಕೊಟ್ಟು ಮಂಗಳೂರು ಮತ್ತು ಉಡುಪಿಯನ್ನು ಅಭಿವೃದ್ಧಿ ಮಾಡಿದ್ದೇವೆ. ಆದರೆ, ಕರಾವಳಿಯಲ್ಲಿ ಬಿಜೆಪಿ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಬದಲಾಗಿ, ಧರ್ಮ ಧರ್ಮಗಳ ನಡುವೆ ದ್ವೇಷ ಉಂಟು ಮಾಡಿ ರಾಜಕೀಯ ಲಾಭ ಪಡೆಯುವುದು ಬಿಜೆಪಿ ಕೆಲಸ’ ಎಂದು ಹೇಳಿದರು.

‘70 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಸಾಧನೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದಿದೆ. ರೈತರಿಗೆ ₹72000 ಕೋಟಿ ಪ್ಯಾಕೇಜ್ ನೀಡಿರುವುದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ. ಆಹಾರ ಭದ್ರತೆಯ ಬಿಲ್, ಉದ್ಯೋಗಕ್ಕಾಗಿ ನರೇಗಾ ಜಾರಿ ಮಾಡಿದ್ದು ಕಾಂಗ್ರೆಸ್. ದೊಡ್ಡ ದೊಡ್ಡ ಕಾರ್ಖಾನೆಗಳನ್ನು, ಡ್ಯಾಂಗಳನ್ನು ಸ್ಥಾಪಿಸಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ ದೇಶವನ್ನು ಮುನ್ನಡೆಸಿದ್ದು ಕಾಂಗ್ರೆಸ್ ಸಾಧನೆ. ಮುಂದೆ ಕಾಂಗ್ರೆಸ್ ಸರ್ಕಾರ ಬಂದಲ್ಲಿ ಜಿಲ್ಲೆಯಲ್ಲಿ ಬಡವರಿಗಾಗಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುತ್ತೇವೆ’ ಎಂದರು.

‘ಯುವಕರಿಗೆ ಬಿಜೆಪಿ ಸರ್ಕಾರ ಉದ್ಯೋಗ ಕೊಡುವ ಭರವಸೆ ನೀಡಿತ್ತು. ಆದರೆ ಇಲ್ಲಿವರೆಗೂ ಈಡೇರಿಲ್ಲ. ರಾಜ್ಯದಲ್ಲಿ 2.5 ಲಕ್ಷ ಉದ್ಯೋಗ, ಕೇಂದ್ರದಲ್ಲಿ 30 ಲಕ್ಷ ಉದ್ಯೋಗ ಖಾಲಿ ಇದೆ. ನಮ್ಮಲ್ಲಿ ಯಾರೇ ಮುಖ್ಯಮಂತ್ರಿ ಆದರೂ ಕೊಟ್ಟ ವಚನವನ್ನು ಪಾಲಿಸುತ್ತೇವೆ’ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಎಐಸಿಸಿ ವೀಕ್ಷಕಿ ಶಿಬಾ ರಾಮಚಂದ್ರನ್ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಕಾಂಗ್ರೆಸ್ ಮುಖಂಡರಾದ ಡಾ.ರಘು, ಎನ್.ಜಯಪ್ರಕಾಶ್ ರೈ, ಮಹಮ್ಮದ್ ಮಸೂದ್, ಕೋಡಿಜಾಲ್ ಇಬ್ರಾಹಿಂ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಂ.ವೆಂಕಪ್ಪ ಗೌಡ, ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ಕೇದಾರ್, ಶಾಲೆಟ್ ಪಿಂಟೊ, ಗೀತಾ ಕೋಲ್ಚಾರ್, ಎಂ.ಎಸ್.ಮಹಮ್ಮದ್, ಲುಕ್ಮಾನ್ ಬಂಟ್ವಾಳ್, ಸವಾದ್ ಸುಳ್ಯ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಸರಸ್ವತಿ ಕಾಮತ್, ವಹಿದಾ ಇಸ್ಮಾಯಿಲ್, ಕಾವು ಹೇಮನಾಥ ಶೆಟ್ಟಿ, ಕೆ.ಎಂ.ಮುಸ್ತಫ, ಪಿ.ಎ.ಮಹಮ್ಮದ್ ಎಸ್.ಸಂಶುದ್ದೀನ್, ರಾಜೀವಿ ಆರ್ ರೈ, ಪಿ.ಪಿ.ವರ್ಗೀಸ್, ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ, ಸಿದ್ದಿಕ್ ಕೊಕ್ಕೊ ಇದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಸ್ವಾಗತಿಸಿದರು.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT