ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

108 ಆಂಬುಲೆನ್ಸ್‌ ಮೇಲ್ದರ್ಜೆಗೆ: ದಿನೇಶ್ ಗುಂಡೂರಾವ್

ಉಪ್ಪಿನಂಗಡಿ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಸಚಿವ ಭೇಟಿ
Published 7 ಜುಲೈ 2024, 16:15 IST
Last Updated 7 ಜುಲೈ 2024, 16:15 IST
ಅಕ್ಷರ ಗಾತ್ರ

ಉಪ್ಪಿನಂಗಡಿ:‘ 108 ಆಂಬುಲೆನ್ಸ್‌ನಲ್ಲಿ ಹಲವು ಲೋಪಗಳಿದ್ದು, ಅದನ್ನು ಸರಿಪಡಿಸಿ, ವಾಹನವನ್ನು ಇನ್ನಷ್ಟು ಆಧುನೀಕರಣಗೊಳಿಸಲಾಗುವುದು. ಇದಕ್ಕಾಗಿ ಟೆಂಡರ್ ಕರೆಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶನಿವಾರ ರಾತ್ರಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಹಿಂದಿನ ಸರ್ಕಾರ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಶೇ 30ರಷ್ಟು ಮಾತ್ರ ಔಷಧಿ ಪೂರೈಕೆ ಮಾಡುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಶೇ 80ರಷ್ಟು ಔಷಧಿ ಪೂರೈಕೆ ಮಾಡುತ್ತಿದ್ದೇವೆ. ಸರ್ಕಾರಿ  ಆರೋಗ್ಯ ಕೇಂದ್ರದ ವಠಾರದೊಳಗಿರುವ ಎಲ್ಲಾ ಔಷಧ ಮಳಿಗೆಗಳನ್ನು ತೆರವುಗೊಳಿಸಲಾಗುವುದು. ಆಸ್ಪತ್ರೆಯ 100 ಮೀ ವ್ಯಾಪ್ತಿಯಲ್ಲಿ ಯಾವುದೇ ಔಷಧ ಮಳಿಗೆಗೆ ಅವಕಾಶ ನೀಡುವುದಿಲ್ಲ’ ಎಂದರು.

ಉಪ್ಪಿನಂಗಡಿ ಆರೋಗ್ಯ ಕೇಂದ್ರದ ಅಪರೇಷನ್ ಥಿಯೇಟರ್ ಮೇಲ್ದರ್ಜೆಗೇರಿಸಲಾಗುವುದು . ಇಲ್ಲಿ ಅನಸ್ತೇಶಿಯಾ ವೈದ್ಯರು ಅಗತ್ಯವಾಗಿ ಬೇಕಾಗಿದ್ದು, ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಡಬ ಮತ್ತು ಪುತ್ತೂರಿಗೆ ₹65 ಲಕ್ಷ ವೆಚ್ಚದಲ್ಲಿ 7 ಆರೋಗ್ಯ ಕ್ಷೇಮ ಕೇಂದ್ರವನ್ನು ನೀಡಲಾಗಿದೆ. ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಒಬ್ಬ ವೈದ್ಯ, ಒಬ್ಬ ಲಾಬ್ ಟೆಕ್ನೀಷಿಯನ್, ಒಬ್ಬರು ನರ್ಸ್‌  ನೇಮಕ ಮಾಡಲಾಗುವುದು ಎಂದರು.

ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ, ಜಿಲ್ಲಾ ಆರೋಗ್ಯಾಧಿಕಾರಿ ತಿಮ್ಮಯ್ಯ, ಡಾ. ಕೃಷ್ಣಾನಂದ, ಡಾ. ದೀಪಕ್ ರೈ, ಡಾ. ಮನೋಜ್ ಕುಮಾರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT