ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಮಕ್ಕಳಿಗೆ ಕೋವಿಡ್ ದೃಢ

17 ಶಿಕ್ಷಕರಿಗೆ ಸೋಂಕು; ಹೆಚ್ಚುತ್ತಿರುವ ಪ್ರಕರಣಗಳು
Last Updated 20 ಏಪ್ರಿಲ್ 2021, 3:08 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಗ್ರಾಮೀಣ ಪ್ರದೇಶಗಳಿಂತ ಹೆಚ್ಚಾಗಿ ಮಂಗಳೂರು ನಗರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸೋಮವಾರ ಬಿಜೈ ಕಾಪಿಕ್ಕಾಡಿನ ಟ್ಯೂಷನ್ ಸಂಸ್ಥೆಯೊಂದರ 13 ಮಕ್ಕಳಿಗೆ ಕೋವಿಡ್ –19 ದೃಢಪಟ್ಟಿದೆ.

ಕೂಳೂರು ಕುಂಜದಬೈಲ್‌ನ ಒಂದೇ ಮನೆಯ ಆರು ಸದಸ್ಯರಿಗೆ ಕೋವಿಡ್ ತಗುಲಿದೆ. ‘ಜಿಲ್ಲೆಯಲ್ಲಿ ಪಾಸಿಟಿವ್ ಪ‍್ರಕರಣಗಳು ಜಾಸ್ತಿ ಬರುತ್ತಿದ್ದರೂ, ಹೆಚ್ಚಿನವರು ಸೋಂಕಿನ ಲಕ್ಷಣ ಹೊಂದಿದವರಲ್ಲ. ಅಂತಹವರು ಮನೆಯಲ್ಲಿ ಪ್ರತ್ಯೇಕ ವಾಸವಿದ್ದಾರೆ. ಚಿಕಿತ್ಸೆ ಅಗತ್ಯ ಇದ್ದವರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಈವರೆಗೆ ಎಲ್ಲೂ ಹಾಸಿಗೆಗೆ ತೊಂದರೆಯಾಗಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ಕುಮಾರ್ ತಿಳಿಸಿದರು.

17 ಶಿಕ್ಷಕರಿಗೆ ಪಾಸಿಟಿವ್:

‘ಆಕ್ಸಿಜನ್ ಸಿಲಿಂಡರ್, ವೆಂಟಿಲೇಷನ್ ಅಗತ್ಯ ಇದ್ದವರಿಗೆ ಒದಗಿಸಲಾಗಿದೆ. ಇವುಗಳ ಕೊರತೆಯೂ ಇಲ್ಲ. ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತರ ಪರೀಕ್ಷೆ ಹೆಚ್ಚು ನಡೆಸುತ್ತಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚು ಪತ್ತೆಯಾಗುತ್ತಿದೆ. ನಗರದ ಶಿಕ್ಷಣ ಸಂಸ್ಥೆಯೊಂದರಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟಿತ್ತು. ಆಗ ಶಿಕ್ಷಣ ಸಂಸ್ಥೆಯ 90 ಜನರ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆ ನಡೆಸಿದಾಗ, 17 ಜನರಿಗೆ ಕೋವಿಡ್ ಇರುವುದು ಪತ್ತೆಯಾಗಿದೆ’ ಎಂದು ಅವರು ವಿವರಿಸಿದರು.

‘ಆರೋಗ್ಯ ಇಲಾಖೆಯಷ್ಟೇ ಜವಾಬ್ದಾರಿ ಸಾರ್ವಜನಿಕರಿಗೂ ಇದೆ. ಉದ್ಯೋಗಿಗಳು, ಅನಿವಾರ್ಯತೆ ಇದ್ದವರು ಮಾತ್ರ ಮನೆಯಿಂದ ಹೊರಬರಬೇಕು. ಉಳಿದವರು ಸಾಧ್ಯವಾದಷ್ಟು ಮನೆಯಲ್ಲೇ ಇರಬೇಕು. ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತರು, ಐಸೊಲೇಷನ್ ಆದರೆ ಸಹಜವಾಗಿ ವೈರಸ್‌ನ ಕೊಂಡಿ ಕಳಚುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಪ್ರಕರಣ ಹೆಚ್ಚುವ ಸಾಧ್ಯತೆ’

‘ವೈರಸ್ ಸ್ವರೂಪ ಬದಲಾಗಿರುವ ಕಾರಣ, ವೇಗವಾಗಿ ಹರಡುತ್ತಿದೆ. ಎಂದಿನಂತೆ ಇರುವ ಜನಸಂಚಾರ, ಶಾಲೆ–ಕಾಲೇಜುಗಳು ತೆರೆದಿರುವ ಕಾರಣಕ್ಕೆ ಇನ್ನು ಎರಡು ವಾರಗಳಲ್ಲಿ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುವ ಸಾಧ್ಯತೆಗಳಿವೆ. ಸಾರ್ವಜನಿಕರು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ಕುಮಾರ್ ತಿಳಿಸಿದರು.

1881 ಸಕ್ರಿಯ ಪ್ರಕರಣ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 218 ಜನರಿಗೆ ಕೋವಿಡ್ ದೃಢಪಟ್ಟಿದೆ. 101 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,881 ಸಕ್ರಿಯ ಪ್ರಕರಣಗಳು ಇವೆ.

ಈವರೆಗೆ 6,89,794 ಜನರ ಗಂಟಲು ದ್ರವ ತಪಾಸಣೆ ಮಾಡಲಾಗಿದ್ದು, ಅವರಲ್ಲಿ 38,361 ಜನರಿಗೆ ಕೋವಿಡ್ ತಗುಲಿತ್ತು.

ನೆರೆಯ ಕಾಸರಗೋಡು ಜಿಲ್ಲೆಯಲ್ಲಿ 676 ಜನರಿಗೆ ಕೋವಿಡ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 4,649 ಸಕ್ರಿಯ ಪ್ರಕರಣಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT