ಶನಿವಾರ, ಮೇ 15, 2021
29 °C
ಜಿಲ್ಲೆಯಲ್ಲಿ 2,275 ಸಕ್ರಿಯ ಪ್ರಕರಣ: ಜಿಲ್ಲಾಧಿಕಾರಿ ಡಾ.ರಾಜೇಂದ್ರ

ಹೋಂ ಐಸೋಲೇಷನ್‌ನಲ್ಲಿ 1,793 ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲೆಯಲ್ಲಿ ಬುಧವಾರದವರೆಗೆ 2,275 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಇವರಲ್ಲಿ 482 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 1,793 ಮಂದಿ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ 75 ವೆಂಟಿಲೇಟರ್‌ಗಳು ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ 50 ವೆಂಟಿಲೇಟರ್‌ಗಳು ಲಭ್ಯ ಇವೆ ಎಂದರು.

ಜಿಲ್ಲೆಯ 31 ಪ್ರಮುಖ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದ್ದು, ಅಗತ್ಯ ಹಾಸಿಗೆಗಳು, ಆಮ್ಲಜನಕದ ವ್ಯವಸ್ಥೆ ಇದೆ. ವೆನ್ಲಾಕ್ ಆಸ್ಪತ್ರೆಯಲ್ಲಿರುವ ವೆಂಟಿಲೇಟರ್‌ಗಳನ್ನು ನಿರ್ವಹಿಸಲು ಸಿಬ್ಬಂದಿ ಹಾಗೂ ವೈದ್ಯರ ಕೊರತೆಯ ಹಿನ್ನೆಲೆಯಲ್ಲಿ ಐದು ವೆಂಟಿಲೇಟರ್‌ಗಳನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆ ಹಾಗೂ 2 ವೆಂಟಿಲೇಟರ್‌ಗಳನ್ನು ಕಣಚೂರು ಆಸ್ಪತ್ರೆಗೆ ಒದಗಿಸಲಾಗಿದೆ ಎಂದು ತಿಳಿಸಿದರು.

ವೆನ್ಲಾಕ್‌ನ ಮೆಡಿಕಲ್ ಬ್ಲಾಕ್ ಕೋವಿಡ್ ಆಸ್ಪತ್ರೆಯಾಗಿದ್ದು, ಇಲ್ಲಿನ 250 ಹಾಸಿಗೆಗಳನ್ನು ಉಪಯೋಗಿಸಲಾಗುತ್ತಿದೆ. 150ಕ್ಕೂ ಅಧಿಕ ಆಕ್ಸಿಜನ್ ಕಿಟ್‌ಗಳು ಲಭ್ಯವಿದ್ದು, ಅಗತ್ಯಬಿದ್ದಲ್ಲಿ ಅಗತ್ಯ ಆಮ್ಲಜನಕರ ತರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ರೋಗಿಗಳಿಗೆ ಆಯುಷ್ಮಾನ್‌ನಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದಕ್ಕಾಗಿ 25 ಮಂದಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಗಲು ಹೊತ್ತು ಆರೋಗ್ಯ ಮಿತ್ರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ಸೇವೆಯನ್ನು ರಾತ್ರಿ ವೇಳೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಮಾಹಿತಿ ವ್ಯವಸ್ಥೆ: ಸದ್ಯಕ್ಕೆ ದೃಢವಾಗಿರುವ ಕೋವಿಡ್ ಪ್ರಕರಣಗಳಲ್ಲಿ ಶೇ 90ರಷ್ಟು ಪ್ರಕರಣಗಳು ಬಂಟ್ವಾಳ ಹಾಗೂ ಮಂಗಳೂರು ಪ್ರದೇಶಕ್ಕೆ ಸೀಮಿತವಾಗಿವೆ. ಅದರಲ್ಲೂ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಶೇ 90ರಷ್ಟು ಪ್ರಕರಣಗಳು ವರದಿಯಾಗುತ್ತಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಗರದ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಡ್ಯಾಶ್‌ಬೋರ್ಡ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಆ ಪ್ರದೇಶಗಳಲ್ಲಿ ಸಾರ್ವಜನಿಕರ ಹೆಚ್ಚಿನ ಸಂಚಾರ ನಿಯಂತ್ರಿಸಲು ಕ್ರಮ ವಹಿಸಲಾಗುವುದು. ಒಂದು ವಾರದಲ್ಲಿ ಸಾಫ್ಟ್‌ವೇರ್ ಬಳಸಿ ಮಾಹಿತಿ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ನೀಡಲಾಗುವುದು. ವಲಸೆ ಕಾರ್ಮಿಕರು ಜಿಲ್ಲೆಯನ್ನು ಬಿಡದಂತೆ ಅವರ ಮನವೊಲಿಕೆಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಉಪ ವಿಭಾಗಾಧಿಕಾರಿ ಮದನ್ ಮೋಹನ್, ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ ಶ್ಯಾನುಬೋಗ್ ಇದ್ದರು.

‘ಲಸಿಕೆ ಕೊರತೆ ಇಲ್ಲ’

ಮಂಗಳವಾರ ಮಧ್ಯಾಹ್ನ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಸಂಗ್ರಹ ಖಾಲಿಯಾಗಿತ್ತು. ಆದರೆ ರಾತ್ರಿ ವೇಳೆಗೇ 20ಸಾವಿರ ಡೋಸ್‌ ಕೋವಿಶೀಲ್ಡ್ ಲಸಿಕೆ ಬೆಂಗಳೂರಿನಿಂದ ಪೂರೈಕೆಯಾಗಿದೆ. ಇದೇ ವೇಳೆ 2ಸಾವಿರ ಡೋಸ್‌ ಕೋವ್ಯಾಕ್ಸಿನ್ ಕೂಡಾ ಪೂರೈಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು