ಗುರುವಾರ , ಮಾರ್ಚ್ 4, 2021
29 °C
ಪಾಲಿಕೆಯ ಉದ್ದಿಮೆ ಪರವಾನಗಿ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ

ಒಂದೇ ದಿನ 339 ಅರ್ಜಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಉದ್ದಿಮೆ ಪರವಾನಗಿ ನವೀಕರಣ ಮತ್ತು ಹೊಸ ಪರವಾನಗಿಗಳ ವಿತರಣೆಗೆ ಮಂಗಳೂರು ಮಹಾನಗರ ಪಾಲಿಕೆ ನಡೆಸಿದ ಅದಾಲತ್‌ಗೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳವಾರ ನಡೆದ ಅದಾಲತ್‌ನಲ್ಲಿ 339 ಅರ್ಜಿಗಳು ಸಲ್ಲಿಕೆಯಾಗಿವೆ.

ಚುನಾವಣೆ ಮತ್ತಿತರ ಕಾರಣಗಳಿಂದಾಗಿ ಉದ್ದಿಮೆ ಪರವಾನಗಿ ನವೀಕರಣ ಪ್ರಕ್ರಿಯೆ ವಿಳಂಬವಾಗಿತ್ತು. ಹೊಸ ಪರವಾನಗಿಗಳ ವಿತರಣೆಯೂ ನಿಧಾನಗತಿಯಲ್ಲಿ ಸಾಗಿತ್ತು. ಇದರಿಂದಾಗಿ ಬಹುತೇಕ ಉದ್ದಿಮೆದಾರರು ಪರವಾನಗಿಗಳ ನವೀಕರಣಕ್ಕೆ ಆಸಕ್ತಿ ತೋರಿರಲಿಲ್ಲ.

ಈ ವಿಷಯವನ್ನು ಮನಗಂಡ ಪಾಲಿಕೆಯ ನೂತನ ಆಯುಕ್ತ ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ ಅವರು ಉದ್ದಿಮೆ ಪರವಾನಗಿ ನವೀಕರಣಕ್ಕೆ ಅದಾಲತ್‌ ನಡೆಸುವ ನಿರ್ಧಾರ ಕೈಗೊಂಡಿದ್ದರು. ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೊದಲ ಅದಾಲತ್‌ ನಡೆಯಿತು.

ಅರ್ಜಿಗಳ ಸ್ವೀಕಾರ, ಚಲನ್‌ ತುಂಬುವುದು, ದಾಖಲೆಗಳ ಪರಿಶೀಲನೆ, ಈಗಾಗಲೇ ನವೀಕರಣಗೊಂಡಿರುವ ಪರವಾನಗಿಗಳ ವಿತರಣೆಗೆ ಪ್ರತ್ಯೇಕವಾದ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಪಾಲಿಕೆ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಖುದ್ದಾಗಿ ಸ್ಥಳದಲ್ಲಿದ್ದು ಅದಾಲತ್‌ ಮೇಲುಸ್ತುವಾರಿ ನೋಡಿಕೊಂಡರು. ಬೆಳಿಗ್ಗೆಯಿಂದಲೇ ನೂರಾರು ಮಂದಿ ಉದ್ಯಮಿಗಳು, ವ್ಯಾಪಾರಸ್ಥರು ಸರದಿಯಲ್ಲಿ ನಿಂತು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದರು.

‘ಉದ್ದಿಮೆ ಪರವಾನಗಿಗಳ ನವೀಕರಣ ಮತ್ತು ಹೊಸ ಪರವಾನಗಿ ಕೋರಿ 339 ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟು ₹ 9.83 ಲಕ್ಷ ಮೊತ್ತದ ಶುಲ್ಕ ಸಂಗ್ರಹವಾಗಲಿದೆ. ಮಂಗಳವಾರ ₹ 3.96 ಲಕ್ಷ ಸಂಗ್ರಹವಾಗಿದೆ. 187 ಅರ್ಜಿದಾರರು ₹ 5.87 ಲಕ್ಷ ಶುಲ್ಕ ಪಾವತಿಸಬೇಕಿದೆ’ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

152 ಪರವಾನಗಿ ವಿತರಣೆ:
ಈ ಹಿಂದೆ ನವೀಕರಣಗೊಂಡಿದ್ದ 45 ಮತ್ತು ಅದಾಲತ್‌ನಲ್ಲಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದ 107 ಮಂದಿಗೆ ಸ್ಥಳದಲ್ಲಿಯೇ ಉದ್ದಿಮೆ ಪರವಾನಗಿಗಳನ್ನು ವಿತರಿಸಲಾಯಿತು. ಎಲ್ಲ ದಾಖಲೆಗಳೊಂದಿಗೆ ಆರಂಭದಲ್ಲೇ ಅರ್ಜಿ ಸಲ್ಲಿಸಿದವರು ಪರವಾನಗಿ ಪಡೆದುಕೊಂಡೇ ಮರಳಿದರು.

‘ಸಾವಿರಕ್ಕೂ ಹೆಚ್ಚು ಉದ್ದಿಮೆ ಪರವಾನಗಿಗಳ ನವೀಕರಣ ಬಾಕಿ ಇದೆ. ಹತ್ತು ದಿನಗಳೊಳಗೆ ಮತ್ತೊಮ್ಮೆ ಅದಾಲತ್‌ ನಡೆಸಲಾಗುವುದು. ಮೊದಲ ಅದಾಲತ್‌ನಲ್ಲಿ ಸ್ವೀಕರಿಸಿರುವ ಎಲ್ಲ ಅರ್ಜಿಗಳನ್ನೂ ಪರಿಶೀಲಿಸಿ, ಎರಡನೇ ಅದಾಲತ್‌ನಲ್ಲಿ ಪರವಾನಗಿ ವಿತರಿಸಲಾಗುವುದು. ಉದ್ದಿಮೆದಾರರು ಅದಾಲತ್‌ಗಳ ಸದುಪಯೋಗ ಪಡೆಯಬೇಕು’ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು