ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಜಿಲ್ಲೆಯಲ್ಲಿ 3,500 ಹಾಸಿಗೆ ಲಭ್ಯ: ವಿಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿ

Last Updated 13 ಜುಲೈ 2020, 17:45 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ಸೋಂಕಿತರು ಹಾಗೂ ರೋಗ ಲಕ್ಷಣ ಹೊಂದಿದವರ ಚಿಕಿತ್ಸೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳು ಮತ್ತು ‘ಕೇರ್‌ ಸೆಂಟರ್‌’ಗಳಲ್ಲಿ 3,500 ಹಾಸಿಗೆಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರ ಜೊತೆ ಸೋಮವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಈ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ‘ಜಿಲ್ಲೆಯಲ್ಲಿ 10,000 ಹಾಸಿಗೆಗಳನ್ನು ಸಜ್ಜುಗೊಳಿಸುವ ಸಾಮರ್ಥ್ಯವಿದ್ದು, ಒಂದು ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದರು.

ಜಿಲ್ಲೆಯಲ್ಲಿ ಈವರೆಗೆ 36,898 ಜನರನ್ನು ಪರೀಕ್ಷಿಸಲಾಗಿದೆ. ಅವರಲ್ಲಿ 2,222 ಜನರಲ್ಲಿ ಕೋವಿಡ್‌–19 ಸೋಂಕು ಪತ್ತೆಯಾಗಿದೆ. 43 ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. 1,399 ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಉಳಿದವರು ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗಳಿಗೆ ಮರಳಿದ್ದಾರೆ ಎಂದು ಮಾಹಿತಿ ಒದಗಿಸಿದರು.

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಮನೆ, ಮನೆ ಸಮೀಕ್ಷೆ ನಡೆಸಿ ರೋಗ ಲಕ್ಷಣಗಳು ಇರುವವರನ್ನು ಪತ್ತೆ ಮಾಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಸೋಂಕಿತರು ಕೊನೆಯ ಹಂತದಲ್ಲಿ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಇಂತಹ ಪ್ರಕರಣಗಳ ನಿರ್ವಹಣೆ ಕ್ಲಿಷ್ಟಕರವಾಗುತ್ತಿದೆ ಎಂದರು.

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ‘ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ದರ ವಿಧಿಸುತ್ತಿರುವ ಕುರಿತು ದೂರುಗಳು ಬರುತ್ತಿವೆ. ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಸರಿಯಾದ ಮಾರ್ಗಸೂಚಿಗಳನ್ನು ಪ್ರಕಟಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್‌.ಸೆಲ್ವಮಣಿ, ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್, ಡಿಸಿಪಿ ಅರುಣಾಂಗ್ಷು ಗಿರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT