ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಬಿಪಿಎಲ್‌ ಸವಲತ್ತಿಗಾಗಿ ಕಾಯುತ್ತಿವೆ 5,514 ಕುಟುಂಬಗಳು

2023ರ ಮಾರ್ಚ್‌ನಿಂದ ಪ್ರಕ್ರಿಯೆ ಸ್ಥಗಿತ * ಹೊಸ ಅರ್ಜಿ ಸಲ್ಲಿಕೆಗೆ ಸದ್ಯಕ್ಕಿಲ್ಲ ಅವಕಾಶ
Published 24 ಆಗಸ್ಟ್ 2023, 0:30 IST
Last Updated 24 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2.15 ಲಕ್ಷ ಕುಟುಂಬಗಳು ರಾಜ್ಯ ಸರ್ಕಾರ ಆದ್ಯತಾ ಕುಟುಂಬಗಳ ಸದಸ್ಯರಿಗೆ (ಅಂತ್ಯೋದಯ ಮತ್ತು ಬಿಪಿಎಲ್‌ ಕುಟುಂಬಗಳು) ತಿಂಗಳಿಗೆ ತಲಾ 5 ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡುವ ಬದಲು ನಗದು ವರ್ಗಾವಣೆ ಮಾಡುವ ಕಾರ್ಯಕ್ರಮದ ಪ್ರಯೋಜನ ಪಡೆದಿವೆ. ಆದರೆ, ಈ ಸವಲತ್ತಿಗೆ ಅರ್ಹತೆ ಇದ್ದರೂ 5,514 ಕುಟುಂಬಗಳು ಈ ಸವಲತ್ತಿನಿಂದ ವಂಚಿತವಾಗಿದೆ!

ಹೊಸ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಸ್ಥಗಿತಗೊಂಡಿರುವುದೇ ಈ ಕುಟುಂಬಗಳು ಪಡಿತರ ಸವಲತ್ತಿನಿಂದ ಹೊರಗುಳಿಯುವುದಕ್ಕೆ ಕಾರಣ. ಇವುಗಳಲ್ಲಿ ಕಡು ಬಡತನದಲ್ಲಿರುವ ಕುಟುಂಬಗಳೂ ಇವೆ.

‘ಜಿಲ್ಲೆಯಲ್ಲಿ ಒಟ್ಟು 15,479 ಮಂದಿ ಹೊಸ ಬಿಪಿಎಲ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 745 ಮಂದಿ ಅರ್ಜಿಯನ್ನು ಹಿಂಪಡೆದಿದ್ದರು. 13,240 ಅರ್ಜಿಗಳಿಗೆ ಸಂಬಂಧಿಸಿ ಕಂದಾಯ ನಿರೀಕ್ಷಕರು ಸ್ಥಳಪರಿಶೀಲನೆ ನಡೆಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವರದಿ ಸಲ್ಲಿಸಿದ್ದರು. ಅವರಲ್ಲಿ 7,996 ಕುಟುಂಬಗಳಿಗೆ ಹೊಸ ಬಿಪಿಎಲ್‌ ಕಾರ್ಡ್‌ ನೀಡಲಾಗಿತ್ತು. 1,969 ಅರ್ಜಿಗಳು ತಿರಸ್ಕೃತವಾಗಿದ್ದವು‘ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಮೂಲಗಳು ತಿಳಿಸಿವೆ.

ಹೊಸ ಅರ್ಜಿ ಸಲ್ಲಿಕೆ ಸ್ಥಗಿತ:

‘ಬಿಪಿಎಲ್‌ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು 2023ರ ಮಾರ್ಚ್‌ನಿಂದ ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಹೊಸ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇಲ್ಲ. ಆದ್ಯತಾ ಕುಟುಂಬಗಳ ಸದಸ್ಯರಿಗೆ ಪ್ರತಿ ತಿಂಗಳು  ತಲಾ 5 ಕೆ.ಜಿ. ಅಕ್ಕಿಯನ್ನು ಹೆಚ್ಚುವರಿ ಆಗಿ ನೀಡುವ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಕೆಲವು ಗೊಂದಲ ನಿವಾರಣೆ ಆಗಬೇಕಿದೆ. ಅವೆಲ್ಲವೂ ಒಂದು ಹಂತಕ್ಕೆ ಬಂದ ಬಳಿಕ ಹೊಸ ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡ್‌ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಪುನರಾರಂಭ ಮಾಡಬಹುದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ನೇರ ನಗದು ವರ್ಗಾವಣೆ ಹಾಗೂ ರಾಜ್ಯದ ಫಲಾನುಭವಿಗಳಿಗೆ ಕೇಂದ್ರ ಹಂಚಿಕೆ ಮಾಡಿದ  ಅಕ್ಕಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ತಲಾ 5 ಕೆ.ಜಿ. ಅಕ್ಕಿ ನೀಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದಂತೆ ಜುಲೈ ತಿಂಗಳಿನಲ್ಲಿ ಜಿಲ್ಲೆಗೆ ₹17.42 ಕೋಟಿ ಮಂಜೂರು ಮಾಡಿದ್ದು, ಒಟ್ಟು ₹15.02 ಕೋಟಿ ನಗದು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT