ಭಾನುವಾರ, ಜುಲೈ 25, 2021
21 °C
ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ

ಬಡ ರೋಗಿಗಳನ್ನು ರಸ್ತೆ ಮೇಲೆ ಬಿಟ್ಟ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ವೆನ್ಲಾಕ್‌ ಆಸ್ಪತ್ರೆಯಿಂದ ಸ್ಥಳಾಂತರಿಸಿದ್ದ ನಾಲ್ವರು ಬಡ ರೋಗಿಗಳನ್ನು ನಗರದ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಗುರುವಾರ ತಡರಾತ್ರಿ ಕಂಕನಾಡಿ ಬಸ್‌ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದು, ಈಗ ಎಲ್ಲರನ್ನೂ ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ.

ಮೂರು ತಿಂಗಳ ಹಿಂದೆ ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ‘ಕೋವಿಡ್‌–19 ವಿಶೇಷ ಆಸ್ಪತ್ರೆ’ ಎಂದು ಘೋಷಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಗಳನ್ನು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು. ಈ ಪೈಕಿ ಉಪ್ಪಿನಂಗಡಿಯ ರಘುರಾಮ, ಬೆಂಜನಪಪದವು ನಿವಾಸಿ ಶ್ರೀನಿವಾಸ, ತಲಪಾಡಿಯ ರಮೇಶ ಮತ್ತು ಪುತ್ತೂರಿನ ಸುಂದರ ಎಂಬುವವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು.

ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದ ನಾಲ್ವರನ್ನೂ ಆಸ್ಪತ್ರೆಯ ಸಿಬ್ಬಂದಿ ಗುರುವಾರ ರಾತ್ರಿ ಕರೆತಂದು ಕಂಕನಾಡಿ ಬಸ್‌ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದರು. ಅವರಿಗೆ ಸ್ಥಳೀಯ ವ್ಯಾಪಾರಿಗಳು ಮತ್ತು ಆಟೊ ರಿಕ್ಷಾ ಚಾಲಕರು ಊಟ ಪೂರೈಸಿದ್ದರು. ಸ್ಥಳೀಯ ತುಫೈಲ್‌ ಅಹ್ಮದ್‌ ಎಂಬುವವರು ಹೊದಿಕೆಗಳನ್ನು ಪೂರೈಸಿದ್ದರು. ಈ ವಿಚಾರ ಗುರುವಾರ ರಾತ್ರಿಯಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.

ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರನ್ನು ಸಂಪರ್ಕಿಸಿದ್ದ ಹಲವರು, ಬೀದಿಯ ಮೇಲೆ ಇರುವ ನಾಲ್ವರು ರೋಗಿಗಳ ನೆರವಿಗೆ ಬರುವಂತೆ ಮನವಿ ಮಾಡಿದ್ದರು. ಜಿಲ್ಲಾಧಿಕಾರಿ ಸೂಚನೆಯಂತೆ ಸ್ಥಳಕ್ಕೆ ಬಂದ ಮಹಾನಗರ ಪಾಲಿಕೆ ಅಧಿಕಾರಿಗಳು, ನಾಲ್ವರನ್ನೂ ಇಎಸ್‌ಐ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ತಪಾಸಣೆ ನಡೆಸಿದ ಬಳಿಕ ಬಂದರು ಪ್ರದೇಶದಲ್ಲಿರುವ ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು