ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿವಿ ಹಗರಣ ತನಿಖೆಗೆ ತ್ರಿಸದಸ್ಯ ಸಮಿತಿ

Published 21 ನವೆಂಬರ್ 2023, 6:22 IST
Last Updated 21 ನವೆಂಬರ್ 2023, 6:22 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಸಮಗ್ರ ತನಿಖೆಗೆ ಸರ್ಕಾರವು ನಿವೃತ್ತ ನ್ಯಾಯಾಧೀಶರ ನೇತೃತ್ವದ ತ್ರಿ ಸದಸ್ಯರ ಸಮಿತಿ ನೇಮಕ ಮಾಡಿದ್ದು, ಈ ಸಮಿತಿಯು ಶುಕ್ರವಾರ ಮತ್ತು ಶನಿವಾರ ವಿವಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿವಿ ಕುಲಾಧಿಪತಿಯಾಗಿರುವ ರಾಜ್ಯಪಾಲರ ನಿರ್ದೇಶನದಂತೆ ಸಮಿತಿ ರಚನೆಯಾಗಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ. ರಾಧಾಕೃಷ್ಣ ಹೊಳ್ಳ ಅಧ್ಯಕ್ಷತೆಯ ತನಿಖಾ ಸಮಿತಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರು (ಆಡಳಿತ) ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಸದಸ್ಯರಾಗಿದ್ದಾರೆ.

‘ಮಂಗಳೂರು ವಿವಿ ಮಾಜಿ ಕುಲಪತಿ ಪ್ರೊ. ಭೈರಪ್ಪ ಅವರ ಆಡಳಿತದ ಅವಧಿಯಲ್ಲಿ ಪರೀಕ್ಷೆ ನಿರ್ವಹಣಾ ಗುತ್ತಿಗೆ, ಹಾಸ್ಟಲ್ ಗುತ್ತಿಗೆ, ಸೋಲಾರ್, ಕಂಪ್ಯೂಟರ್ ಮತ್ತು ಸಿಸಿಟಿವಿ ಕ್ಯಾಮೆರಾ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಮತ್ತು ರಾಜ್ಯಪಾಲರ ಅನುಮತಿ ಇಲ್ಲದಿದ್ದರೂ ಅಕ್ರಮ ನೇಮಕಾತಿ, ವಿಶ್ವವಿದ್ಯಾಲಯದ ಆಡಳಿತ ಸೌಧ ಕಟ್ಟಡದ ಬಗ್ಗೆ ತನಿಖೆ ನಡೆಸಿ, ವಸ್ತುನಿಷ್ಠ ವರದಿ ಸಲ್ಲಿಸುವಂತೆ ಮಂಗಳೂರು ವಿವಿ ಕುಲಸಚಿವರಿಗೆ ತಿಳಿಸಲಾಗಿತ್ತು. ವಿವಿಯ ಆಂತರಿಕ ತನಿಖೆ ನಡೆಸಿ, ಆರೋಪಗಳಲ್ಲಿ ಸತ್ಯಾಂಶ ಇಲ್ಲವೆಂದು ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ, ಈ ವರದಿಯ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳುವ ಸಂಬಂಧ ವಿಶೇಷ ಆಡಿಟ್ ತಂಡವನ್ನು ರಚಿಸಿ ಪಾರದರ್ಶಕ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆ ಮೈಸೂರು ಪ್ರಾಂತೀಯ ಕಚೇರಿಯ ಹೆಚ್ಚುವರಿ ನಿರ್ದೇಶಕರಿಗೆ ಸರ್ಕಾರ ಸೂಚಿಸಿತ್ತು’ ಎಂದು ಮೂಲಗಳು ತಿಳಿಸಿವೆ.

‘ನಾಲ್ಕು ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವು ಪರೀಕ್ಷೆ ನಿರ್ವಹಣೆ ವ್ಯವಸ್ಥೆ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣ, ಸೋಲಾರ್ ವ್ಯವಸ್ಥೆ, 2002 ಮತ್ತು 2013ರಲ್ಲಿ ನಡೆದಿರುವ ನೇಮಕಾತಿ, ತಾತ್ಕಾಲಿಕ ಸಿಬ್ಬಂದಿ ನೇಮಕ, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಖರೀದಿ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಪರೀಕ್ಷಾ ಕಾರ್ಯ ನಿರ್ವಹಣೆ ಗುತ್ತಿಗೆ ಟೆಂಡರ್‌ನಲ್ಲಿನ ನ್ಯೂನತೆ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣ, ಕ್ಲಾಸ್‌ ರೂಮ್ ಕಾಂಪ್ಲೆಕ್ಸ್, ಸಭಾಭವನದ ಒಳ ಆವರಣದ ಕಾಮಗಾರಿಗಳ ವೆಚ್ಚದ ಟೆಂಡರ್‌, ಸೌರ ಚಾವಣಿ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ ಕಾಮಗಾರಿ, ಬೋಧಕೇತರ ನೇಮಕಾತಿ ಪ್ರಕ್ರಿಯೆಯಲ್ಲಿ (ಬ್ಯಾಕ್‌ಲಾಗ್‌) ಪ್ರಾಧ್ಯಾಪಕರೊಬ್ಬರ ನೇಮಕಾತಿ ಇನ್ನಿತರ ವಿಷಯಗಳಲ್ಲಿ ಆಗಿರುವ ನ್ಯೂನತೆಯನ್ನು ಉಲ್ಲೇಖಿಸಲಾಗಿತ್ತು. ಇದನ್ನು ಆಧರಿಸಿ ರಾಜ್ಯಪಾಲರು ತನಿಖಾ ಸಮಿತಿ ರಚನೆಗೆ ಆದೇಶಿಸಿದ್ದರು’ ಎಂದು ಆ ಮೂಲ ವಿವರಿಸಿದೆ.

 ಹಗರಣಗಳು ನಡೆದಿದೆ ಎನ್ನಲಾದ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಕುಲಸಚಿವರು (ಪರೀಕ್ಷಾಂಗ) ಮತ್ತು ಸಂಬಂಧಪಟ್ಟ ಹೊಣೆಗಾರಿಕೆ ವಹಿಸಿಕೊಂಡಿದ್ದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರ ನಿರ್ದೇಶನದಂತೆ ಸರ್ಕಾರ ಸಮಿತಿ ರಚಿಸಿದೆ. ಈ ಸಮಿತಿಯು ಕೂಲಂಕಷ ತನಿಖೆ ನಡೆಸಿ, ಒಂದು ತಿಂಗಳ ಒಳಗಾಗಿ ವರದಿ ನೀಡಲಿದೆ ಎಂದು ವಿವಿ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT