ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು ವಿವಿಗೆ ಪ್ರಶಸ್ತಿ: ಮರುಕಳಿಸಿದ ಖ್ಯಾತಿ

ಕಬಡ್ಡಿ: ಎನ್‌ಐಎಸ್‌ನಲ್ಲಿ ತರಬೇತಿ ಪಡೆದಿರುವ ಕೋಚ್‌ಗಳು; ಆಳ್ವಾಸ್‌ ಕಾಲೇಜಿನಲ್ಲಿ ತರಬೇತಿ ಶಿಬಿರ
Published 27 ನವೆಂಬರ್ 2023, 6:42 IST
Last Updated 27 ನವೆಂಬರ್ 2023, 6:42 IST
ಅಕ್ಷರ ಗಾತ್ರ

ಮಂಗಳೂರು: ಮೂರು ದಶಕಗಳ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದೆ. ಹರಿಯಾಣ, ಪಂಜಾಬ್‌ ಸೇರಿದಂತೆ ಕಬಡ್ಡಿಯ ಶಕ್ತಿಕೇಂದ್ರವಾದ ಉತ್ತರ ಭಾರತದ ಬಲಿಷ್ಠ ಆಟಗಾರರ ಸವಾಲನ್ನು ಮೀರಿನಿಂತ ಮಂಗಳೂರು ವಿಶ್ವವಿದ್ಯಾಲಯ ತಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಉಡುಪಿಯ ಪೂರ್ಣಪ್ರಜ್ಞಾ ಕಾಲೇಜು ಅಂಗಣದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಫೈನಲ್‌ನಲ್ಲಿ ಚೆನ್ನೈನ ವಿಇಎಲ್ಎಸ್ ಸಂಸ್ಥೆಯ ತಂಡವನ್ನು ಏಕಪಕ್ಷೀಯವಾಗಿ (47–15) ಮಣಿಸುವುದರ ಮೂಲಕ 33 ವರ್ಷಗಳ ನಂತರ ಮಂಗಳೂರು ವಿವಿ ಕಬಡ್ಡಿ ನೈಪುಣ್ಯವನ್ನು ಸಾಬೀತುಪಡಿಸಿದೆ. 1991ರಲ್ಲಿ ಗೋವಿಂದದಾಸ ಕಾಲೇಜಿನ ಪ್ರಕಾಶ್ ಎರ್ಮಾಳ್ ನಾಯಕತ್ವದ ತಂಡ ಭುವನೇಶ್ವರದಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಈಚಿನ ವರ್ಷಗಳಲ್ಲಿ ದಕ್ಷಿಣ ವಲಯದಿಂದ ನಿರಂತರವಾಗಿ ಆಯ್ಕೆಯಾಗುತ್ತಿದ್ದರೂ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.  

ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಆಡಿದ್ದ ವಿನೋದ್ ನಾಯಕ್ ಅವರನ್ನು ಒಳಗೊಂಡ, ಸುಶಾಂತ್ ಶೆಟ್ಟಿ ಅವರ ನಾಯಕತ್ವದ ಬಲಿಷ್ಠ ತಂಡ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಿಂದಲೇ ಪಾರಮ್ಯ ಮೆರೆದು ಭರವಸೆ ಮೂಡಿಸಿತ್ತು. ಐವರು ಅಪ್ಪಟ ರೇಡರ್‌ಗಳು, ಆರು ಪ್ರಬಲ ಡಿಫೆಂಡರ್‌ಗಳನ್ನು ಒಳಗೊಂಡಿದ್ದ ತಂಡವು ಕಾರ್ನರ್‌ ಮತ್ತು ಕವರ್‌ನಲ್ಲಿ ಸಾಕಷ್ಟು ಆಯ್ಕೆಗಳನ್ನು ಇರಿಸಿಕೊಂಡು ಎದುರಾಳಿಗಳ ವಿರುದ್ಧ ತಂತ್ರಗಳನ್ನು ಹೂಡುತ್ತಿತ್ತು. ಹೀಗಾಗಿ ಗೆಲುವಿನ ಹಾದಿ ಸುಲಭವಾಗಿತ್ತು.

ಆಳ್ವಾಸ್‌ನ ಐವರು, ಎಸ್‌ಡಿಎಂ ಉಜಿರೆಯ ನಾಲ್ವರು, ಗೋಕರ್ಣನಾಥ ಕಾಲೇಜಿನ ಇಬ್ಬರು, ಪುತ್ತೂರಿನ ಪ್ರೇರಣಾ ಕಾಲೇಜು ಮತ್ತು ಸುಳ್ಯದ ಎನ್‌ಎಂಸಿಯ ತಲಾ ಇಬ್ಬರು ತಂಡದಲ್ಲಿದ್ದರು. ಈ ತಿಂಗಳ ಆರಂಭದಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದ ದಕ್ಷಿಣ ವಲಯ ಚಾಂಪಿಯನ್‌ಷಿಪ್‌ಗಾಗಿ ಆಳ್ವಾಸ್ ಕಾಲೇಜಿನಲ್ಲಿ ಅಕ್ಟೋಬರ್ 27ರಿಂದ ನವೆಂಬರ್ 8ರ ವರೆಗೆ ನಡೆದ ಶಿಬಿರವು ತಂಡಕ್ಕೆ ಹೊಸ ಹುರುಪು ತುಂಬಲು ನೆರವಾಗಿತ್ತು ಎಂಬುದು ತಂಡದ ಆಡಳಿತವರ ಅಭಿಪ್ರಾಯ.

ಎನ್‌ಐಎಸ್ ಕೋಚ್‌ಗಳು:

ತಂಡದ ಕೋಚ್‌ಗಳಾದ ಆಳ್ವಾಸ್ ಕಾಲೇಜಿನ ಸತೀಶ್ ನಾಯಕ್ ಮತ್ತು ಬನ್ನಡ್ಕದ ವಿಶ್ವವಿದ್ಯಾಲಯ ಕಾಲೇಜಿನ ಕಿರಣ್ ಕುಮಾರ್ ಎನ್‌ಐಎಸ್‌ನಿಂದ ಪ್ರಮಾಣಪತ್ರ ಪಡೆದುಕೊಂಡವರು. ಕುವೆಂಪು ವಿಶ್ವವಿದ್ಯಾಲಯ ತಂಡವನ್ನು ದಕ್ಷಿಣ ವಲಯಲ್ಲಿ ಐದು ಬಾರಿ ಪ್ರತಿನಿಧಿಸಿದ್ದ ಚಿತ್ರದುರ್ಗದ ಸತೀಶ್ ಒಂದು ಬಾರಿ ನಾಯಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಿರಣ್ ಕುಮಾರ್ ಬಹುಶಿಸ್ತೀಯ ಕ್ರೀಡಾಪಟು. ಮಂಗಳೂರು ವಿವಿಯನ್ನು ಐದು ಬಾರಿ ಪ್ರತಿನಿಧಿಸಿದ್ದ ಅವರು ಹ್ಯಾಂಡ್‌ಬಾಲ್‌ ಟೂರ್ನಿಯಲ್ಲೂ ವಿವಿ ತಂಡದಲ್ಲಿದ್ದರು. ಕೊಕ್ಕೊ ಆಟಗಾರ ಕೂಡ ಆಗಿದ್ದಾರೆ.  

‘1991ರಲ್ಲಿ ಚಾಂಪಿಯನ್ ಆದ ನಂತರ 2012ರಲ್ಲಿ ಮೂರನೇ ಸ್ಥಾನ ಗಳಿಸಿದ್ದೇ ವಿವಿಯ ದೊಡ್ಡ ಸಾಧನೆಯಾಗಿತ್ತು. ಹಿಂದಿನ ಎರಡು ವರ್ಷ ಪ್ರಬಲ ಪೈಪೋಟಿ ಒಡ್ಡಿದ್ದ ತಂಡ ಈಗ ಚಾಂಪಿಯನ್ ಆಗಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ’ ಎಂದು ಕಿರಣ್ ಕುಮಾರ್ ಹೇಳಿದರು.  

ಮಂಗಳೂರು ವಿಶ್ವವಿದ್ಯಾಲಯ ತಂಡ 1991ರಲ್ಲಿ ಪ್ರಥಮ ಬಾರಿ ಚಿನ್ನದ ಪದಕ ಗೆದ್ದುಕೊಂಡಿತ್ತು. ಈಗ ಮತ್ತೆ ಅಪ್ರತಿಮ ಸಾಧನೆ ಮಾಡಿದೆ. ತಂಡದಲ್ಲಿದ್ದ ಆಟಗಾರರ ಭವಿಷ್ಯಕ್ಕೆ ಇದು ಹೊಸ ಹಾದಿ ಆಗಲಿದೆ.
–ಗೋಪಿನಾಥ ಕಾಪಿಕಾಡ್, 1991ರಲ್ಲಿ ತಂಡದಲ್ಲಿದ್ದ ಆಟಗಾರ
ಉತ್ತರ ಭಾರತದ ಬಲಿಷ್ಠ ತಂಡಗಳು ಇದ್ದರೂ ನಮ್ಮ ತಂಡದ ಮೇಲೆ ಭರವಸೆ ಇತ್ತು. ಅದನ್ನು ಆಟಗಾರರು ಕಾಪಾಡಿಕೊಂಡಿದ್ದಾರೆ. ಎಲ್ಲ ವಿಭಾಗಗಳಲ್ಲೂ ಸಮನ್ವಯದ ಆಟವಾಡಿ ಗೆಲುವು ತಂದುಕೊಟ್ಟಿದ್ದಾರೆ.
–ಜೆರಾಲ್ಡ್ ಸಂತೋಷ್ ಡಿಸೋಜ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ
ಶಿಬಿರಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆ ನೀಡಿರುವ ಪ್ರೋತ್ಸಾಹ ಆಟಗಾರರಲ್ಲಿ ಛಲ ಮೂಡಲು ನೆರವಾಗಿತ್ತು. ಉಳಿದುಕೊಳ್ಳಲು ವ್ಯವಸ್ಥೆ ಆಹಾರ ಮತ್ತು ವಾಹನದ ಸೌಲಭ್ಯ ಉಚಿತವಾಗಿ ಲಭಿಸಿದ್ದರಿಂದ ಶಿಸ್ತಿನ ಅಭ್ಯಾಸ ಮಾಡಲು ಸಾಧ್ಯವಾಗಿತ್ತು.
–ಸತೀಶ್ ನಾಯಕ್‌ ಕೋಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT