ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.28ರಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

ಡಾ. ಅಂಬೇಡ್ಕರ್ ವೃತ್ತದಿಂದ ಕಾರ್ಮಿಕರ ಮೆರವಣಿಗೆ
Last Updated 25 ಮಾರ್ಚ್ 2022, 2:56 IST
ಅಕ್ಷರ ಗಾತ್ರ

ಮಂಗಳೂರು: ಕಾರ್ಪೊರೇಟ್ ಪರವಾದ 4 ಕಾರ್ಮಿಕ ಸಂಹಿತೆಗಳ ರದ್ದತಿ, ಬೆಲೆ ನಿಯಂತ್ರಣ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳ ರದ್ದತಿ, ₹24 ಸಾವಿರ ಸಮಾನ ಕನಿಷ್ಠ ವೇತನ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ‘ಭಾರತ ಉಳಿಸಿ-ಜನತೆಯನ್ನು ರಕ್ಷಿಸಿ’ ಎಂಬ ಘೋಷಣೆಯೊಂದಿಗೆ ಮಾ.28 ಹಾಗೂ 29ರಂದು ಅಖಿಲ ಭಾರತ ಸಾರ್ವತ್ರಿಕ ಮಹಾಮುಷ್ಕರ ಜರುಗಲಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಚ್‌.ವಿ. ರಾವ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ನವ ಉದಾರೀಕರಣ ನೀತಿಗಳನ್ನು ಅಕ್ರಮಣಕಾರಿಯಾಗಿ ಜಾರಿ ಮಾಡುತ್ತಿದ್ದು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಐಸಿಡಿಎಸ್ ಯೋಜನೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಮತ್ತಿತರ ಕ್ಷೇತ್ರಗಳಿಗೆ ನಿರಂತರ ಬಜೆಟ್‌ನಲ್ಲಿ ಹಣಕಾಸಿನ ಕಡಿತ ಮಾಡಲಾಗುತ್ತಿದೆ ಎಂದು ದೂರಿದರು.

ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಬಡ ಕುಟುಂಬಕ್ಕೆ ಮಾಸಿಕ ₹ 7,500 ನೇರ ನಗದು ವರ್ಗಾವಣೆ, ಪ್ರತಿ ವ್ಯಕ್ತಿಗೂ ತಲಾ 10 ಕೆ.ಜಿ ಆಹಾರ ಧಾನ್ಯಗಳನ್ನು ನೀಡಬೇಕು ಎನ್ನುವ ಬೇಡಿಕೆಗಳನ್ನು ಸರ್ಕಾರಗಳು ಪರಿಗಣಿಸಲಿಲ್ಲ. ಕೇಂದ್ರ ಸರ್ಕಾರ ಯಾವುದೇ ಚರ್ಚೆಯಿಲ್ಲದೆ ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನು ಹಾಗೂ ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕ ವಿರೋಧಿಯಾಗಿ ರೂಪಿಸಿತು. ಕಾರ್ಮಿಕ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಿ ರಾಜ್ಯ ಸರ್ಕಾರಗಳ ಮೂಲಕ ಜಾರಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಮಹಾಮುಷ್ಕರದ ಭಾಗವಾಗಿ ಮಾ. 28ರಂದು ಎಲ್ಲಾ ತಾಲ್ಲೂಕು, ವಲಯ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮಾ. 28ರಂದು ಬೆಳಿಗ್ಗೆ 10ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ವಿವಿಧ ವಿಭಾಗದ ಕಾರ್ಮಿಕರ ಮೆರವಣಿಗೆ ಹೊರಡಲಿದ್ದು, ಬಳಿಕ ಕ್ಲಾಕ್ ಟವರ್ ಬಳಿಯಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನ ಜರುಗಲಿದೆ ಎಂದು ತಿಳಿಸಿದರು.

ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಜೆ. ಬಾಲಕೃಷ್ಣ ಶೆಟ್ಟಿ, ಸುನೀಲ್‌ಕುಮಾರ್ ಬಜಾಲ್, ಸೀತಾರಾಮ ಬೇರಿಂಜ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಮೋಹನ್ ಕೆ.ಇ., ಫಣೀಂದ್ರ ರಾಘವ ಕೆ., ಪುರುಷೋತ್ತಮ ಪೂಜಾರಿ, ಬಿ.ಎನ್. ದೇವಾಡಿಗ, ಸುರೇಶ್ ಹೆಗ್ಡೆ, ಕರುಣಾಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT