ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಲರ್‌ಗಳಿಗೆ ಸಿಗದ ಪ್ಯಾಕೇಜ್‌ ಪ್ರಯೋಜನ

ಸರ್ಕಾರದ ಮಾನದಂಡಗಳೇ ತೊಡಕು: ಆನಂದ
Last Updated 12 ಜೂನ್ 2021, 13:11 IST
ಅಕ್ಷರ ಗಾತ್ರ

ಮಂಗಳೂರು: ಅಸಂಘಟಿತ ಕಾರ್ಮಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಟೈಲರ್‌ಗಳು, ಸರ್ಕಾರ ಸೂಚಿಸಿದ ಅಧಿಕಾರಿಗಳ ಬಳಿ ಹೋದಾಗ ಲೈಸನ್ಸ್ ಕೇಳುತ್ತಿದ್ದಾರೆ. ಮನೆಯಲ್ಲಿಯೇ ಕೆಲಸ ಮಾಡುತ್ತಿರುವುದಾಗಿ ಹೇಳಿದರೂ ಸಹಿ ಹಾಕುತ್ತಿಲ್ಲ. ಹಾಗಾಗಿ ಸರ್ಕಾರ ಟೈಲರ್‌ಗಳಿಗೆ ಘೋಷಣೆ ಮಾಡಿದ ಪ್ಯಾಕೇಜ್‌ನ ಪ್ರಯೋಜನ ಸಿಗದಂತಾಗಿದೆ ಎಂದು ಕರ್ನಾಟಕ ಟೈಲರ್ಸ್ ಅಸೋಸಿಯೇಶನ್ ಆರೋಪಿಸಿದೆ.

ನಂತರ ಮಾತನಾಡಿದ ಅಸೋಸಿಯೇಶನ್‌ನ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಆನಂದ್, ಮನೆಯಲ್ಲಿ ಕೆಲಸ ಮಾಡುವವರೂ ಲೈಸೆನ್ಸ್ ಮಾಡಬೇಕೆಂಬ ನಿಯಮ ಇದೇಯೇ? ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ನೆಪ ಮಾಡಿ, ಸರ್ಕಾರ ಘೋಷಿಸಿದ ಪ್ಯಾಕೇಜ್‌ನಿಂದ ಬಡ ಟೈಲರ್‌ಗಳನ್ನು ವಂಚಿಸಲಾಗುತ್ತಿದೆ. ಈ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿದರು.

ಕೋವಿಡ್ ಮಾರ್ಗಸೂಚಿಯಂತೆ ಟೈಲರ್ ವೃತ್ತಿ ನಡೆಸುವವರು ಅಂಗಡಿ ಬಾಗಿಲು ತೆರೆಯದೆ ಮನೆಯಲ್ಲಿಯೇ ಇದ್ದಾರೆ. ಇದೀಗ ಸರ್ಕಾರ ಘೋಷಿಸಿದ ₹2ಸಾವಿರ ಪ್ಯಾಕೇಜ್ ಪಡೆಯಲು ಎಪಿಎಲ್ ಮತ್ತು ಬಿಪಿಎಲ್ ಮಾನದಂಡ ಟೈಲರ್ ವೃತ್ತಿಯವರ ಜೊತೆಗೆ ತಾರತಮ್ಯ ಮಾಡಲಾಗಿದೆ. ಈ ಮಾನದಂಡವಿಲ್ಲದೆ ಎಲ್ಲ ಟೈಲರ್‌ಗಳಿಗೆ ಸರ್ಕಾರದ ಯೋಜನೆ ಸಿಗುವಂತಾಗಬೇಕು. ಸಂಘಟನೆಯ ಗುರುತಿನ ಚೀಟಿ ತೋರಿಸಿದರೆ ಅಧಿಕಾರಿಗಳು ಸಹಿ ಹಾಕಿ ಪ್ಯಾಕೇಜ್ ನೀಡಲು ಸಹಕರಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಹೆಚ್ಚಿನ ಟೈಲರ್‌ಗಳು ಸ್ಮಾರ್ಟ್ ಕಾರ್ಡ್ ಮಾಡಿಸಿದ್ದಾರೆ. 2018ರಲ್ಲಿ ಅರ್ಜಿ ಕೊಟ್ಟಿದ್ದರೂ ಕಾರ್ಡ್ ಬಂದಿಲ್ಲ. ಬಂದಿರುವ ಕಾರ್ಡ್‌ಗಳಲ್ಲಿ ಹೆಚ್ಚಿನವರ ವೃತ್ತಿ ಬದಲಾವಣೆಯಾಗಿದೆ. ಟೈಲರ್ ವೃತ್ತಿ ಮಾಡುತ್ತಿರುವವರಿಗೆ ಚಿಂದಿ ಆಯುವವರು ಎಂದು ಮುದ್ರಿತವಾಗಿದ್ದರೆ, ಹಮಾಲಿಗಳು ಎಂದು ಮುದ್ರಿತವಾಗಬೇಕಾದ ಕಾರ್ಡ್‌ಗಳಲ್ಲಿ ಟೈಲರ್‌ಗಳು ಎಂದು ಮುದ್ರಿಸಲಾಗಿದೆ. ಇದನ್ನು ಸರಿಪಡಿಸುವ ಆಶ್ವಾಸನೆ ನೀಡಿದ್ದರೂ ಇನ್ನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಬಿ. ವಸಂತ್, ಜಿಲ್ಲಾ ಘಟಕದ ಅಧ್ಯಕ್ಷ ಪ್ರಜ್ವಲ್, ಕುಸುಮಾ ದೇವಾಡಿಗ, ಸುರೇಶ್ ಸಾಲ್ಯಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT