ಮಂಗಳೂರು: ಅಮೆರಿಕದ ಯುನೈಟೆಡ್ ಮೆಥಡಿಸ್ಟ್ ಚರ್ಚ್‌ನ ನಿವೃತ್ತ ಬಿಷಪ್ ಸುದರ್ಶನ ದೇವಧರ್ (72) ಈಚೆಗೆ ನಿಧನರಾಗಿದ್ದಾರೆ.
ಅವರು ಅಮೆರಿಕದ ಯುನೈಟೆಡ್ ಮೆಥಡಿಸ್ಟ್ ಚರ್ಚ್‌ನಲ್ಲಿ ಬಿಷಪ್ ಆಗಿ ಸೇವೆ ಸಲ್ಲಿಸಿದ ಮೊದಲ ಭಾರತೀಯ ಪ್ರಜೆ. ಯುನೈಟೆಡ್ ಮೆಥಡಿಸ್ಟ್ ಚರ್ಚ್‌ನ ಈಶಾನ್ಯ ವ್ಯಾಪ್ತಿಗೆ ಸಂಬಂಧಿಸಿದ ಈ ಹುದ್ದೆಗೆ ಅವರು 2004ರಲ್ಲಿ ಆಯ್ಕೆಯಾಗಿದ್ದರು. ‘ಸುದಾ’ ಎಂದೇ ಖ್ಯಾತರಾಗಿದ್ದ ಅವರು ಮಡಿಕೇರಿಯ ಸಿಎಸ್‌ಐ ಚರ್ಚ್‌ನ ಪಾಲನಾ ಮಂಡಳಿಯಲ್ಲಿ ಧರ್ಮಾಧಿಕಾರಿಯಾಗುವ ಮೂಲಕ ತಮ್ಮ ಧಾರ್ಮಿಕ ಯಾನ ಆರಂಭಿಸಿದ್ದರು.
1982ರಲ್ಲೇ ಪಾದ್ರಿಯಾಗಿದ್ದ ಅವರು, ಆಂಟೋರಿಯೊ ನಾರ್ಥ್ ಸೆಂಟ್ರಲ್ ನ್ಯೂಯಾರ್ಕ್‌ನ ಆ್ಯನುವಲ್ ಕಾನ್ಫರೆನ್ಸ್‌ನ ಡಿಸ್ಟ್ರಿಕ್ಟ್‌ನ ಸೂಪರಿಂಟೆಂಡೆಂಟ್ ಆಗಿ ಎಂಟು ವರ್ಷ ಕಾರ್ಯ ನಿರ್ವಹಿಸಿದ್ದರು. 2023ರ ಜ. 1ರಂದು ಅವರು ನಿವೃತ್ತರಾಗಿದ್ದರು.
ಬಿಷಪ್ ದೇವಧರ್ ಅವರು ಜ್ಯೂಜೆರ್ಸಿ ಧರ್ಮ ಪ್ರಾಂತ್ಯದ ಬಿಷಪ್ ಆಗಿ 2004ರ ಸೆ.1ರಂದು ನೇಮಕಗೊಂಡಿದ್ದರು. ನ್ಯೂಜೆರ್ಸಿಯಲ್ಲಿ ಎಂಟು ವರ್ಷ ಕರ್ತವ್ಯ ನಿರ್ವಹಿಸಿದ ಬಳಿಕ 650ಕ್ಕೂ ಅಧಿಕ ಚರ್ಚ್‌ಗಳನ್ನೊಳಗೊಂಡ ಬಾಸ್ಟನ್ ಪ್ರದೇಶದ ಹೊಣೆಯನ್ನು ಅವರಿಗೆ 2012ರ ಜೂನ್‌ನಲ್ಲಿ ವಹಿಸಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಬಿ.ಕಾಂ ಪದವೀಧರರಾಗಿದ್ದ ಅವರು ಬೆಂಗಳೂರಿನ ಥಿಯಾಲಾಜಿಕಲ್ ಕಾಲೇಜಿನಲ್ಲಿ ಬಿ.ಡಿ ಪದವಿ ಪಡೆದಿದ್ದರು.
ಅವರಿಗೆ ಪತ್ನಿ ಪ್ರೇಮಾ, ಮಗಳು ತೃಣಾ, ಅಳಿಯ ಗೇಜ್ ಹಾಗೂ ಮೊಮ್ಮಕ್ಕಳು ಇದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.