ಮಂಗಳೂರು: ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಕಾಯ್ದೆಯ ಬಗ್ಗೆ ಪರಿಶಿಷ್ಟ ಸಮುದಾಯದವರಿಗೆ ಸಮಗ್ರ ಮಾಹಿತಿಯನ್ನು ಒದಗಿಸಬೇಕು ಎಂದು ಸಮುದಾಯದ ಮುಖಂಡರು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೊನಾವಣೆ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗದವರ ಕುಂದು ಕೊರತೆಗಳ ಆಲಿಸುವ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಮುದಾಯದ ಮುಖಂಡ ಎಂ. ದೇವದಾಸ್, ‘ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಸಾಕಷ್ಟು ಗೊಂದಲಗಳು ಸಮುದಾಯದ ಜನರಲ್ಲಿದೆ. ಈ ಕಾಯ್ದೆಯನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕು ಎಂಬುದೂ ಅನೇಕರಿಗೆ ತಿಳಿದಿಲ್ಲ. ಈ ಕುರಿತು ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದರು.
ದಲಿತರ ಭೂಮಿ ಹಕ್ಕಿನ ಹೋರಾಟಕ್ಕೆ ಸಂಬಂಧಿಸಿಯೂ ಕಾಯ್ದೆ ದುರುಪಯೋಗವಾಗುತ್ತಿದೆ ಎಂದು ಶೇಖರ ಲಾಯಿಲ, ನೇಮಿರಾಜ, ಎಸ್.ಪಿ.ಆನಂದ, ವಿಶ್ವನಾಥ ಮೊದಲಾದವರು ಆರೋಪಿಸಿದರು.
‘ಕುಕ್ಕೋಡಿ ಎಂಬಲ್ಲಿ 50 ಸೆಂಟ್ಸ್ ಡಿ.ಸಿ ಮನ್ನಾ ಜಾಗದಲ್ಲಿ 10 ಸೆಂಟ್ಸ್ ಜಾಗ ಭಜನಾ ಮಂದಿರಕ್ಕೆ ಹಂಚಿಕೆಯಾಗಿತ್ತು. ಬಳಿಕ ಉಳಿದ 40 ಸೆಂಟ್ಸ್ ಭೂಮಿಯಲ್ಲಿ ದಲಿತ ಸಮುದಾಯ ಭವನ ನಿರ್ಮಾಣಕ್ಕಾಗಿ ₹ 1.50 ಕೋಟಿ ಮೀಸಲಿಡಲಾಗಿತ್ತು. ಆದರೆ ಅದಕ್ಕೆ ಆಕ್ಷೇಪ ವ್ಯಕ್ತವಾಯಿತು. ಜಿಲ್ಲಾ ಪಂಚಾಯಿತಿಯಿಂದ ಸಾರ್ವಜನಿಕ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲು ಹೊರಟಾಗಲೂ ಕೆಲವರು ಚಕಾರ ಎತ್ತಿದರು. ಆದರೆ ಅದೇ ಜಾಗದಲ್ಲಿ ಈಗ ಮದುವೆ ಸಭಾಂಗಣ ನಿರ್ಮಾಣಕ್ಕೆ ಸಿದ್ದತೆ ನಡೆಯುತ್ತಿದೆ. ದಲಿತ ಸಮುದಾಯದ ಯುವಕರನ್ನು ಬಳಸಿ ದಲಿತರ ಮೇಲೆಯೇ ದೌರ್ಜನ್ಯ ನಡೆಸಲಾಗುತ್ತಿದೆ‘ ಎಂದು ಶೇಖರ ಲಾಯಿಲ ಆರೋಪಿಸಿದರು.
‘ಕುಕ್ಕೇಡಿ ಗ್ರಾಪಂ ಈ ಜಾಗವನ್ನು ಸಾರ್ವಜನಿಕ ಮೈದಾನ ಎಂದು ನಿರ್ಣಯ ಕೈಗೊಳ್ಳಲಾಗಿದೆ. ಅದನ್ನು ಸಾರ್ವಜನಿಕ ಮೈದಾನವಾಗಿಯೇ ಉಪಯೋಗಿಸಬೇಕು’ ಎಂದು ಒತ್ತಾಯಿಸಿಸಿದರು.
‘ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ‘ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.
ದಲಿತ ಮುಖಂಡ ಡೀಕಯ್ಯ ಸಾವಿನ ಸಮಗ್ರ ತನಿಖೆ ನಡೆಸಿ ಈ ಕುರಿತಾದ ಅನುಮಾನಗಳನ್ನು ನಿವಾರಿಸಬೇಕು ಎಂದು ಸಮುದಾಯದ ನಾಯಕರು ಆಗ್ರಹಿಸಿದರು.
‘ಸಾಕ್ಷಾಧಾರಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ದಲಿತರೊಬ್ಬರ ಭೂಮಿಯನ್ನು ಅಡವಿಟ್ಟು ವ್ಯಕ್ತಿಯೊಬ್ಬರು ಬ್ಯಾಂಕ್ ಸಾಲ ಪಡೆದು ವಂಚಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ನಾರಾವಿ, ಕುತ್ಲೂರು, ಶಿರ್ಲಾಲು, ಸವಣಾಲು, ನಡ ಸೇರಿದಂತೆ ಒಂಬತ್ತು ಗ್ರಾಮಗಳಲ್ಲಿ ಅನೇಕ ಜನವಸತಿ ಪ್ರದೇಶಗಳಿಗೆ ಇನ್ನೂ ವಿದ್ಯುತ್ ಹಾಗೂ ರಸ್ತೆ ಸೌಲಭ್ಯಗಳಿಲ್ಲ. ಅರಣ್ಯ ಹಕ್ಕು ಕಾಯ್ದೆಯಡಿ ಅಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಅವಕಾಶವಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಬೇಕು’ ಎಂದು ಶೇಖರ ಲಾಯಿಲ ಕೋರಿದರು.
ದಲಿತ ಮುಖಂಡರಾದ ಅಶೋಕ್ ಕೊಂಚಾಡಿ, ಜಗದೀಶ್ ಪಾಂಡೇಶ್ವರ, ಅನಿಲ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.