ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಿನ ರಾಜಕೀಯ ನೋಡಿದರೆ ದುಃಖ: ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರ ವಿಠಲ ಕಿಣಿ

Last Updated 13 ಆಗಸ್ಟ್ 2022, 16:26 IST
ಅಕ್ಷರ ಗಾತ್ರ

ಮಂಗಳೂರು: ‘ದೇಶಕ್ಕೆ ಸ್ವಾತಂತ್ರ್ಯ ದೊರೆತ ಆರಂಭದ ಕಾಲ ಅದು. ಆಗ, ರಾಜಕೀಯ ಪಕ್ಷಗಳ ನಡುವೆ ವೈಚಾರಿಕ ಭಿನ್ನಾಭಿಪ್ರಾಯ ಇದ್ದರೂ, ಎಲ್ಲ ನಾಯಕರ ಧ್ಯೇಯವೂ ದೇಶವನ್ನು ಉನ್ನತಿಗೆ ಕೊಂಡೊಯ್ಯುವುದೇ ಆಗಿತ್ತು. ರಾಜಕಾರಣಿಗಳ ನಡುವೆ ಪರಸ್ಪರ ಗೌರವ ಭಾವ ಇರುತ್ತಿತ್ತು. ಆದರೆ, ಈಗಿನ ವ್ಯವಸ್ಥೆಯಲ್ಲಿ ರಾಜಕಾರಣಿಗಳ ನಡೆ ನೋಡುವಾಗ ದುಃಖವಾಗುತ್ತದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರ ವಿಠಲ ಕಿಣಿ ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಶನಿವಾರ ಇಲ್ಲಿಯ ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಅನೇಕ ರಾಜಕೀಯ, ಸಾಮಾಜಿಕ ದೃಷ್ಟಾಂತಗಳನ್ನು ವಿವರಿಸಿದರು.

‘1953ರಲ್ಲಿ ಮುಖರ್ಜಿ ಅವರು ಕಾಶ್ಮೀರದಲ್ಲಿ ಸಂಶಯಾತ್ಮಕವಾಗಿ ನಿಧನರಾದ ಸುದ್ದಿ ತಿಳಿಯಿತು. ದುಃಖ ತಡೆಯಲಾಗದೆ, ನನ್ನ ಪುಸ್ತಕದ ಅಂಗಡಿಗೆ ಬಾಗಿಲು ಹಾಕಿ, ಮನೆಗೆ ಬಂದೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಯೋಚಿಸಿ, ಆಗಿನ ಯುವ ಕಾಂಗ್ರೆಸ್ ಮುಖಂಡ ಟಿ.ಎ.ಪೈ ಅವರ ಬಳಿ ಚರ್ಚಿಸಿದೆ. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಪಕ್ಷಗಳ ಕಾರ್ಯಕರ್ತರೂ ಈ ಸಭೆಯಲ್ಲಿ ಭಾಗವಹಿಸಿದರು. ಆಗ ವಿಚಾರ ಭಿನ್ನಾಭಿಪ್ರಾಯ ಇದ್ದರೂ, ಎಲ್ಲರನ್ನೂ ಗೌರವಿಸುವ ಮನೋಭಾವ ಎಲ್ಲರಲ್ಲೂ ಇರುತ್ತಿತ್ತು’ ಎಂದರು.

‘ರಾಜಕೀಯದ ಗಂಧಗಾಳಿ ಇಲ್ಲದ ನಾವು ಜನಸಂಘ ಕಟ್ಟಿದೆವು. ಜನಸಂಘವನ್ನು ಬೆಳೆಸುವ ವ್ಯವಸ್ಥೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ಕೆಲಸ ಮಾಡಿದೆ. ರಾಜಕಾರಣವನ್ನು ಸರಿಯಾಗಿ ಅರ್ಥೈಸಿಕೊಂಡು ದೇಶಸೇವೆ ಮಾಡಲು ಸಾಧ್ಯವಿದೆ ಎಂಬ ಸ್ವಯಂ ಅನುಭವವಾಯಿತು. ಒಮ್ಮೆ ದೀನ್‌ ದಯಾಳ್ ಉಪಾಧ್ಯಾಯರು ಮಂಗಳೂರಿಗೆ ಬರುವ ಕಾರ್ಯಕ್ರಮ ನಿಗದಿಯಾಗಿತ್ತು. ಎಲ್ಲ ರಾಜಕಾರಣಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದ ನಾನು, ಎಲ್ಲ ಪಕ್ಷದವರನ್ನೂ ಆಹ್ವಾನಿಸಿದ್ದೆ. ಆಗಿನ ಕಾಂಗ್ರೆಸ್ ನಾಯಕ ರಂಗನಾಥ ಶೆಣೈ ಕೂಡ ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದರು. ಸಂಜೆ ನಡೆದ ಚಹಾಕೂಟದಲ್ಲಿ ಎಲ್ಲ ಪಕ್ಷಗಳ ಕಾರ್ಯಕರ್ತರು ಭಾಗವಹಿಸಿದ್ದರು’ ಎಂದು ನೆನಪನ್ನು ಮೆಲುಕು ಹಾಕಿದರು.

‘ಒಮ್ಮೆ ದೀನ್ ದಯಾಳರು ಮಂಗಳೂರಿಗೆ ಬಂದಾಗ ಪತ್ರಕರ್ತರು, ನಿಮ್ಮ ಸಂಸ್ಥೆಯಲ್ಲಿ ಮುಸ್ಲಿಮರು ಎಷ್ಟು ಜನರಿದ್ದಾರೆ ಎಂದು ಪ್ರಶ್ನಿಸಿದ್ದರು. ಆಗ, ಅವರು ನಮ್ಮ ದೃಷ್ಟಿಯಲ್ಲಿ ಮುಸ್ಲಿಮರು ಕೂಡ ನಮ್ಮವರೇ, ಎಲ್ಲರನ್ನೂ ನಮ್ಮೊಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದಿದ್ದರು. ಪತ್ರಕರ್ತರು ಸೂಕ್ಷ್ಮತೆ ಹೊಂದಿರಬೇಕು. ಪತ್ರಕರ್ತರಿಗೆ ತಮ್ಮ ಹೊಣೆಗಾರಿಕೆಯ ಅರಿವು ಸದಾ ಇರಬೇಕು’ ಎಂದು ಹೇಳಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ನಿರೂಪಿಸಿದರು. ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT