ಮಂಗಳೂರು: ‘ಶಿವಮೊಗ್ಗದ ಹರ್ಷ ಮತ್ತು ಪ್ರವೀಣ್ ನೆಟ್ಟಾರ್ ಸಾವಿಗೆ ಸ್ಪಂದಿಸಿದ ಸಂಘಪರಿವಾರ, ಬಿಜೆಪಿ ಸರ್ಕಾರ ತಮ್ಮದೇ ಸಂಘಟನೆಯ ಕಾರ್ಯಕರ್ತನ ಸಾವಿಗೆ ಸ್ಪಂದಿಸಿಲ್ಲ ಏಕೆ ’ ಎಂದು ಪ್ರೊ.ನರೇಂದ್ರನಾಯಕ್ ಪ್ರಶ್ನಿಸಿದರು.
ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಗೆ ಏಳು ವರುಷ ತುಂಬಿದ ಪ್ರಯುಕ್ತ ದೇಶಪ್ರೇಮಿ ಸಂಘಟನೆಗಳ ಒಕ್ಕೂಟವು ನಗರದ ವೆಂಕಟರಮಣ ದೇವಸ್ಥಾನದಿಂದ ಬಾಳಿಗಾ ಮನೆಯವರೆಗೆ ಮಂಗಳವಾರ ಏರ್ಪಡಿಸಿದ್ದ ಜಾಥಾದ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
‘ವಿನಾಯಕ ಬಾಳಿಗಾ ಮನೆಗೆ ಬಿಜೆಪಿಯ ಒಬ್ಬನೇ ಒಬ್ಬ ಜನಪ್ರತಿನಿಧಿ ಈವರೆಗೂ ಭೇಟಿ ನೀಡಿ ಅವರ ಸಹೋದರಿಯರಿಗೆ ಧೈರ್ಯ ತುಂಬಿಲ್ಲ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವನ್ನೂ ಒದಗಿಸಿಲ್ಲ. ಸಂಘಪರಿವಾರದವರು ಹಾಗೂ ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೇರಿದ ಬಿಜೆಪಿಯವರು ಹಿಂದುಗಳಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ರೋಷ ವ್ಯಕ್ತಪಡಿಸುತ್ತಾರೆ. ಅವರಿಗೆ ಬಾಳಿಗಾ ಸಾವಿಗೆ ನ್ಯಾಯ ಒದಗಿಸುವ ರೋಷ ಏಕೆ ಹುಟ್ಟಲೇ ಇಲ್ಲ. ಈ ಬಗ್ಗೆ ಬಾಳಿಗ ಅವರದೇ ಸಮುದಾಯದ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಸ್ಪಂದಿಸಿಲ್ಲ ಏಕೆ’ ಎಂದರು.
ಮನೋವೈದ್ಯ ಡಾ. ಪಿ.ವಿ ಭಂಡಾರಿ,`ವಿನಾಯಕ ಬಾಳಿಗಾರ ಕೊಲೆ ನಡೆದು ಏಳು ವರ್ಷ ಸಂದರೂ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇಂತಹ ಸರ್ಕಾರ ಯಾಕೆ ಬೇಕು. ಇದೊಂದು ನಪುಂಸಕ, ನರಸತ್ತ ಸರಕಾರ. ಸರಕಾರದ ನಿರ್ಲಕ್ಷ್ಯದಿಂದ ನ್ಯಾಯಕ್ಕಾಗಿ ಹೋರಾಡುವವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗುತ್ತಿದೆ. ಇದರ ವಿರುದ್ಧ ಹೋರಾಟ ತೀವ್ರಗೊಳಿಸುವ ಅಗತ್ಯವಿದೆ’ ಎಂದರು.
ನಾಗರಿಕ ಸೇವಾಟ್ರಸ್ಟ್ ನ ಸೋಮನಾಥ ನಾಯಕ್, ಡಿಎಸ್ಎಸ್ ಮುಖಂಡ ಎಂ.ದೇವದಾಸ್ ಮಾತನಾಡಿದರು. ವಿನಾಯಕ ಬಾಳಿಗಾ ಅವರ ಸಹೋದರಿಯರಾದ ಹರ್ಷಾ ಬಾಳಿಗಾ, ಅನುರಾಧಾ ಬಾಳಿಗಾ, ಪ್ರಮುಖರಾದ ಮುಹಮ್ಮದ್ ಕುಂಜತ್ತಬೈಲ್, ಅಶ್ರಫ್, ಎಂ. ದೇವದಾಸ್, ವಾಸುದೇವ ಉಚ್ಚಿಲ್, ಸುನಿಲ್ ಬಜಿಲಕೇರಿ, ಸುನೀಲ್ ಕುಮಾರ್ ಬಜಾಲ್, ಬಿ.ಕೆ. ಇಮ್ತಿಯಾಜ್, ಮಂಜುಳಾ ನಾಯಕ್, ಪ್ರಕಾಶ್ ಸಾಲ್ಯಾನ್, ವಹಾಬ್ ಕುದ್ರೋಳಿ, ಸಂಜನಾ ಚಲವಾದಿ, ನಿತಿನ್ ಕುತ್ತಾರ್, ರಘು ಎಕ್ಕಾರ್, ರೇವಂತ್ ಕದ್ರಿ, ಕದ್ರಿ ಜೆರಾಲ್ಡ್ ಟವರ್ಸ್, ಡಿವೈಎಫ್ಐ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್ ಬಜಾಲ್ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.