ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಪ್ಪನಾಡು ದೇಗುಲ ಜಾತ್ರೆ 11ರಂದು: ಹಿಂದೂಯೇತರರ ವ್ಯಾಪಾರಕ್ಕೆ ಈ ಸಲವೂ ಇಲ್ಲ ಅವಕಾಶ

Last Updated 8 ಏಪ್ರಿಲ್ 2023, 7:00 IST
ಅಕ್ಷರ ಗಾತ್ರ

ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸೌಹಾರ್ದ ಸಾರುವ ದೇವಾಲಯವೆಂದೇ ಖ್ಯಾತವಾಗಿರುವ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಈ ಸಲವೂ ಹಿಂದೂಯೇತರ ವ್ಯಾಪಾರಿಗಳು ಮಳಿಗೆಗಳನ್ನು ಸ್ಥಾಪಿಸುವುದಕ್ಕೆ ಅವಕಾಶ ನಿರಾಕರಿಸಲಾಗಿದೆ.

ಮುಸ್ಲಿಂ ಸಮುದಾಯದ ಬಪ್ಪ ಬ್ಯಾರಿಯೇ ನಿರ್ಮಿಸಿದ ದೇವಸ್ಥಾನ ಎಂಬ ಐತಿಹ್ಯ ಹೊಂದಿರುವ ಈ ದೇವಸ್ಥಾನದಲ್ಲೂ ಹಿಂದೂವೇತರರ ವ್ಯಾಪಾರಕ್ಕೆ ನಿರ್ಬಂಧ ಹೇರಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಈ ದೇವಸ್ಥಾನದಲ್ಲಿ ಇದೇ 11ರಂದು ಹಗಲು ರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರು ದೇವರ ಶಯನಕ್ಕೆ ಮಲ್ಲಿಗೆಯ ಹರಕೆಯನ್ನು ತೀರಿಸುವ ಸಂಪ್ರದಾಯವಿದೆ. ಆ ದಿನ ಇಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮಲ್ಲಿಗೆ ಹೂ ಮಾರಾಟವಾಗುತ್ತದೆ.

ಇಲ್ಲಿ ಮುಸ್ಲಿಂ ಹಾಗೂ ಹಿಂದೂ ವ್ಯಾಪಾರಿಗಳು ನೂರಾರು ವರ್ಷಗಳಿಂದ ಜೊತೆ ಜೊತೆಯಲ್ಲೇ ವ್ಯಾಪಾರ ವಹಿವಾಟು ನಡೆಸುತ್ತಾ ಬಂದಿದ್ದರು.
ವಿಶ್ವ ಹಿಂದೂ ಪರಿಷತ್‌ನ ಪ್ರಮುಖರು ಮನವಿ ನೀಡಿದ ಬೆನ್ನಿಗೆ ಈ ವಿವಾದ ಗರಿಗೆದರಿತ್ತು. ಆದರೆ, 2022ರ ಜಾತ್ರೆ ಸಂದರ್ಭದಲ್ಲಿ ಮುಜುರಾಯಿ ಇಲಾಖೆಯ ನಿಯಮವನ್ನು ಮುಂದಿಟ್ಟುಕೊಂಡು ಮುಸ್ಲಿಂ ವ್ಯಾಪಾರಿಗಳು ಇಲ್ಲಿ ಮಳಿಗೆ ಸ್ಥಾಪಿಸುವುದಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಈ ಸಲವೂ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಎಂದು ಆಡಳಿತ ಮಂಡಳಿಯು ನಿರ್ಧರಿಸಿದೆ.

ಈ ಬಗ್ಗೆ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಪ್ರತಿಕ್ರಿಯಿಸಿ, ‘ದೇವಾಲಯದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಸರ್ಕಾರದ ನಿಯಮವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಪಾಲಿಸಿದ್ದಾರೆ. ಇದನ್ನು ವಿವಾದ ಮಾಡುವುದು ಸರಿಯಲ್ಲ’ ಎಂದು ತಿಳಿಸಿದರು.

‘ಕೋಮು ಸಾಮರಸ್ಯಕ್ಕೆ ಧಕ್ಕೆಯಿಲ್ಲ’

‘ಬಪ್ಪಬ್ಯಾರಿಗೆ ಒಲಿದ ಶ್ರೀದುರ್ಗೇ ಎನ್ನುವ ಚರಿತ್ರೆಗೆ ಎಂದೂ ಧಕ್ಕೆ ಬಂದಿಲ್ಲ. ಪರಂಪರೆಯಂತೆ ಇಂದಿಗೂ ಬಪ್ಪಬ್ಯಾರಿಯ ಮನೆತನಕ್ಕೆ ದೇವಳದಿಂದ ಪ್ರಸಾದ ನೀಡಲಾಗುತ್ತಿದೆ. ಮುಜರಾಯಿ ಇಲಾಖೆಯ ನಿಯಮ ದೇವಳದ ಜಾಗಕ್ಕೆ ಸಂಬಂಧಿಸಿ ಮಾತ್ರ ಅನ್ವಯಿಸುತ್ತದೆ. ಖಾಸಗಿ ಜಮೀನಿನಲ್ಲಿ ನಾವು ಹಕ್ಕು ಚಲಾಯಿಸಲು ಅವಕಾಶ ಇಲ್ಲ’ ಎಂದು ದೇವಸ್ಥಾನದ ಆನುವಂಶಿಕ ಮೊಕ್ತೇರಸರಾದ ಎಂ. ದುಗ್ಗಣ್ಣ ಸಾವಂತ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT