ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ ಪ.ಪಂ ಸಾಮಾನ್ಯ ಸಭೆ

Last Updated 29 ಡಿಸೆಂಬರ್ 2022, 5:02 IST
ಅಕ್ಷರ ಗಾತ್ರ

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಬೆಳ್ತಂಗಡಿ ಸಮುದಾಯ ಆಸ್ಪತ್ರೆ ಮುಂಭಾಗದ ಬಳಿ ಖಾಸಗಿ ಕಟ್ಟಡದಲ್ಲಿ ಪಟ್ಟಣ ಪಂಚಾಯಿತಿಯಿಂದ ಯಾವುದೇ ಪರವಾನಗಿ ಇಲ್ಲದೆ ಅಕ್ರಮ ಜೂಜು ಕೇಂದ್ರ ನಡೆಯುತ್ತಿದೆ. ವಿಚಾರಿಸಲು ಹೋದರೆ ಪೊಲೀಸ್ ಠಾಣೆಯಿಂದ ಪರವಾನಗಿ ಇದೆ ಎಂಬ ಉತ್ತರ ಬರುತ್ತಿದೆ. ಇದರಿಂದ ರಾತ್ರಿ ಹೊತ್ತು ಗಲಾಟೆ ನಡೆಯುತ್ತಿದೆ. ಈ ಬಗ್ಗೆಕ್ರಮ ಕೈಗೊಳ್ಳಬೇಕು ಎಂದು ನಗರ ಪಂಚಾಯಿತಿ ಉಪಾಧ್ಯಕ್ಷ ಜಯಾನಂದ್ ಗೌಡ ಒತ್ತಾಯಿಸಿದರು. ಈ ಬಗ್ಗೆ ಮುಖ್ಯಾಧಿಕಾರಿ ರಾಜೇಶ್ ಮೇಲಧಿಕಾರಿಗಳಿಗೆ ದೂರು ನೀಡುವುದಾಗಿ, ಪ್ರೊಬೆಷನರಿ ಎಸ್‌ಐ ಮುರಳೀಧರ್ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಬೆಳ್ತಂಗಡಿ ಸಮುದಾಯ ಆಸ್ಪತ್ರೆ ಯಲ್ಲಿ ಸರ್ಕಾರಿ ಅಂಬುಲೆನ್ಸ್ ಇದ್ದರೂ ಚಾಲಕನಿಲ್ಲದೆ ಓರ್ವ ರೋಗಿಯನ್ನು ಕೊಂಡೊಯ್ಯಲು ತೊಂದರೆಯಾಗಿದೆ. ಇದು ಬಡ ಕುಟುಂಬದ ರೋಗಿಗೆ ಮಾಡಿದ ಅನ್ಯಾಯ ಎಂದು ಸದಸ್ಯ ಜಗದೀಶ್ ಒತ್ತಾಯಿಸಿದಾಗ ಆರೋಗ್ಯ ಇಲಾಖಾ ಸಿಬ್ಬಂದಿ ಗಿರೀಶ್ ಉತ್ತರಿಸಿ ಅಂಬುಲೆನ್ಸ್ ಚಾಲಕರ ಸೇವೆ 24 ಇದ್ದು, ಆದರೆ ಈ ಸಂದರ್ಭದಲ್ಲಿ ಚಾಲಕನಿಲ್ಲದ ಮಾಹಿತಿ ತಿಳಿದಿಲ್ಲ. ತಕ್ಷಣ ಇದರ ಬಗ್ಗೆ ವರದಿ ತರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳ್ತಂಗಡಿ ಸೇತುವೆ ಬಳಿ ನಗರದ ಕುಡಿಯುವ ನೀರಿನ ಟ್ಯಾಂಕ್ ಇದ್ದು ಇದರ ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಸದಸ್ಯ ಜಗದೀಶ್ ತಿಳಿಸಿದಾಗ ಮುಖ್ಯಾಧಿಕಾರಿ ರಾಜೇಶ್ ಉತ್ತರಿಸಿ ಈ ಬಗ್ಗೆ ಬುಧವಾರ ಸಾರ್ವಜನಿಕರಿಂದ ದೂರು ಬಂದಿದ್ದು ಮರಳುಗಾರಿಕೆಯನ್ನು ತಡೆಹಿಡಿಯಲಾಗಿದೆ. ಮರಳುಗಾರಿಕೆಗೆ ಗಣಿ ಇಲಾಖೆ ಪರವಾನಗಿ ನೀಡ ಬೇಕಾಗಿದೆ. ಆದರೆ ನೀರಿನ ಟ್ಯಾಂಕ್ ಬಳಿ ಮರಳುಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದರು.

ನಗರದ ಗುರುದೇವ ಕಾಲೇಜು ಬಳಿ ರಾತ್ರಿ ಹೊತ್ತು ಮದ್ಯಸೇವನೆ ಮಾಡಲು ಕೆಲವರು ಬರುತ್ತಿದ್ದು ಇದ ರಿಂದ ತೊಂದರೆಯಾಗುತ್ತಿದೆ ಎಂದು ಉಪಾಧ್ಯಕ್ಷ ಜಯಾನಂದ ಗೌಡ ಮತ್ತು ಸದಸ್ಯ ಜನಾರ್ದನ್ ಹೇಳಿದರು. ಪೋಲೀಸ್ ಗಸ್ತು ಹೆಚ್ಚಿಸಲಾಗುವುದು ಎಂದು ಪ್ರೊಬೆಷನರಿ ಎಸ್‌ಐ ಮುರಳೀಧರ್ ಭರವಸೆ ನೀಡಿದರು.

ಖಾಸಗಿ ಬಸ್ ನಿಲ್ದಾಣದೊಳಗೆ ಖಾಸಗಿ ವಾಹನಗಳು ಬಂದು ನಿಲ್ಲುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಖಾಸಗಿ ಬಸ್‌ನವರು ಪಂಚಾಯಿತಿಗೆ ದೂರು ಬಂದಿದೆ. ಈ ಬಗ್ಗೆ ಪೋಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷೆ ರಜನಿ ಕುಡ್ವ ಪೊಲೀಸರಿಗೆ ಸೂಚಿಸಿದರು.

ನಗರದೊಳಗೆ ವಿದ್ಯುತ್ ತಂತಿ ಮೇಲೆ ಮರದ ಕೊಂಬೆಗಳು ಇದ್ದು ಇದನ್ನು ತೆರವುಗೊಳಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಮೆಸ್ಕಾಂ ಅಧಿಕಾರಿ ಉತ್ತರಿಸಿ ಸಿಬ್ಬಂದಿ ಕೊರತೆ ಇರುವುದನ್ನು ಸಭೆಯ ಗಮನಕ್ಕೆ ತಂದರು. ಇದಕ್ಕೆ ಉಪಾಧ್ಯಕ್ಷ ಜಯಾನಂದ್ ಉತ್ತರಿಸಿ ನ.ಪಂ ವತಿಯಿಂದ ಕಾರ್ಮಿಕರನ್ನು ನಿಯೋಜಿಸುವ ವ್ಯವಸ್ಥೆ ಮಾಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

ನಗರೋತ್ಥಾನ ಯೋಜನೆಯಡಿ ಮಂಜೂರಾದ ₹ 10 ಕೋಟಿ ಅನುದಾ ನದಲ್ಲಿ ಕಾಮಗಾರಿ ವಿಳಂಬಾಗುತ್ತಿದೆ ಈ ಬಗ್ಗೆ ಕೆಆರ್‌ಡಿಎಲ್ ಸಂಸ್ಥೆ ವಿರುದ್ದ ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕು ಎಂದು ಜಗದೀಶ್ ಒತ್ತಾಯಿಸಿದರು.

ಅಂಗವಿಕಲರಿಗೆ ವಾರ್ಷಿಕ ಪರಿಹಾರ ನೀಡಲು ಕ್ರಮ ಕೈಗೊ ಳ್ಳಬೇಕು, ಬಡ ಕುಟುಂಬಗಳಿಗೆ ನೆರವು ನೀಡುವ ಯೋಜನೆಯನ್ನು ಮುಂದುವರಿಸಬೇಕು. ಬಿಪಿಎಲ್ ಕುಟುಂಬದ ಸದಸ್ಯರಿಗೆ ಉಚಿತ ನೀರಿನ ಸಂಪರ್ಕ ಕಲ್ಪಿಸಬೇಕು , ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಕ್ರಮಗೊಳ್ಳಬೇಕು, ಕೇರಳ ಮಾದರಿಯಲ್ಲಿ ನ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಗೌರವ ಧನ ಸಿಗುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕು, ಶಾಸಕರ 5 ಕೋಟಿ ಅನುದಾನದ ಕಾಮಗಾರಿ ವೇಗವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು. ನಗರದೊಳಗಿನ ಸರ್ಕಾರಿ ಭೂಮಿ ನಗರ ಪಂಚಾಯಿತಿಗೆ ಹಸ್ತಾಂತರ ಮಾಡುವಂತೆ ತಹಶಿಲ್ದಾರ್‌ಗೆ ಪತ್ರ ಬರೆಯಬೇಕು ಎಂದು ನಿರ್ಣಯಿಸಲಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್, ಮುಖ್ಯಾಧಿಕಾರಿ ರಾಜೇಶ್, ಎಂಜಿನಿಯರ್ ಮಹಾವೀರ
ಅರಿಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT