ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳಲ್ಲೂ 4ಜಿ: ಬಿಎಸ್‌ಎನ್‌ಎಲ್‌ ಸಿದ್ಧತೆ, 2024ರ ಮಾರ್ಚ್‌ಗೆ ಸೇವೆ ಆರಂಭ

ನೆಟ್‌ವರ್ಕ್‌ ಸಮಸ್ಯೆ ನೀಗಿಸಲು ಕ್ರಮ
Published 13 ಆಗಸ್ಟ್ 2023, 7:20 IST
Last Updated 13 ಆಗಸ್ಟ್ 2023, 7:20 IST
ಅಕ್ಷರ ಗಾತ್ರ

ಮಂಗಳೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೊಲ್ಲೂರು, ದಳ್ಳಿ, ನಂದ್ರೊಳಿ, ಬೆಳಾಲು, ಸಿದ್ದಾಪುರ, ಅರೆಬೈಲು, ಕೊಳ್ಕೆಬೈಲು, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಅಳಂತಾಯ, ಸುರುಳಿ, ಬೆಳ್ತಂಗಡಿ ತಾಲ್ಲೂಕಿನ ಪೆರಾಡಿ, ಅಣಿಯೂರು, ಸುಳ್ಯ ತಾಲ್ಲೂಕಿನ ಸೊಣಗಾಡಿ ಪೀಟಿ, ನೆಲ್ಲೂರು, ಕೆಮ್ರಾಜೆ, ಬಾಳುಗೊಡು... ಇನ್ನು ಯಾವುದೇ ಕಂಪನಿಯ ಮೊಬೈಲ್‌ ನೆಟ್‌ವರ್ಕ್‌ ತಲುಪಿರದ ಗ್ರಾಮಗಳಲ್ಲೂ ಬಿಎಸ್‌ಎನ್‌ಎಲ್‌ನ 4ಜಿ ನೆಟ್‌ವರ್ಕ್‌ ಲಭ್ಯವಾಗುವ ಕಾಲ ಸನ್ನಿಹಿತವಾಗಿದೆ.

ದೂರಸಂಪರ್ಕ ಸೇವೆ ಒದಗಿಸುವ ಸರ್ಕಾರಿ ಸಂಸ್ಥೆ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) 4ಜಿ ಸ್ಯಾಚುರೇಷನ್‌ ಯೋಜನೆಯಡಿ ಉಡುಪಿ ಜಿಲ್ಲೆಯ 158 ಹಾಗೂ ದಕ್ಷಿಣ ಕನ್ನಡ 223 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎಲ್ಲೂ ನೆಟ್‌ವರ್ಕ್‌ ಲಭ್ಯ ಇಲ್ಲದ ಗ್ರಾಮಗಳು ಇಲ್ಲದಂತೆ ನೋಡಿಕೊಳ್ಳುವುದಕ್ಕೆ ಮಂಗಳೂರು ಟೆಲಿಕಾಂ ಜಿಲ್ಲೆ ಸಿದ್ಧತೆ ಮಾಡಿಕೊಂಡಿದೆ. ಇನ್ನೂ ದೂರವಾಣಿ ಹಾಗೂ ಅಂತರ್ಜಾಲ ಸಂಪರ್ಕ ತಲುಪದ ಗ್ರಾಮಗಳನ್ನು ಪಟ್ಟಿ ಮಾಡಿ ಈ ಗ್ರಾಮಗಳಿಗೆ ನೆಟ್‌ವರ್ಕ್‌ ಒದಗಿಸಲು ಕ್ರಮವಹಿಸಿದೆ.

ತೀರಾ ಹಿಂದುಳಿದ ಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್‌ ಸೇರಿದಂತೆ ಯಾವುದೇ ಕಂಪನಿಗಳ ನೆಟ್‌ವರ್ಕ್‌ ಜಾಲ ಇಲ್ಲದ ಕಾರಣ ಲ್ಲಿನ ನಿವಾಸಿಗಳು ಅನೇಕ ಸೌಕರ್ಯಗಳಿಂದ ವಂಚಿತರಾಗಿದ್ದರು. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವುದಕ್ಕೆ ಹಾಗೂ ಸಾರ್ವಜನಿಕರಿಗೆ ಸವಲತ್ತುಗಳನ್ನು ತಲುಪಿಸುವುದಕ್ಕೆ ಸಮಸ್ಯೆ ಆಗಿತ್ತು. ಜಿಲ್ಲಾ ಸಮನ್ವಯ ಸಮಿತಿ ಸಭೆಗಳಲ್ಲಿ ಹಾಗೂ ಕೆಡಿಪಿ ಸಭೆಗಳಲ್ಲೂ ಈ ಬಗ್ಗೆ ಚರ್ಚೆ ಆಗಿತ್ತು. 

‘ಈಗ ಲಭ್ಯ ಇರುವ 2ಜಿ ಹಾಗೂ 3ಜಿ ನೆಟ್‌ವರ್ಕ್‌ನಿಂದ 4ಜಿ ಪರಿವರ್ತನೆಗೆ ಕ್ರಮವಹಿಸಿದ್ದೇವೆ. ಸಂಪೂರ್ಣ ದೇಸೀ ತಂತ್ರಜ್ಞಾನವನ್ನು ಬಳಸಿ ಕುಗ್ರಾಮಗಳಿಗೂ 4ಜಿ ಸೇವೆ ತಲುಪಿಸಲು ಬಿಎಸ್‌ಎನ್‌ಎಲ್‌ ಕ್ರಮ ವಹಿಸಿದೆ’ ಎಂದು ಬಿಎಸ್‌ಎನ್‌ಎಲ್‌ ಮಂಗಳೂರು ಟೆಲಿಕಾಂ ಜಿಲ್ಲೆಯ ಮುಖ್ಯ ಪ್ರಧಾನ ವ್ಯವ ಸ್ಥಾ ಪಕ (ಪಿಜಿಎಂ) ನವೀನ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಎಸ್‌ಎನ್ಎಲ್‌ಗೆ ಸೇವಾ ಪೂರೈಕೆದಾರ ಸಂಸ್ಥೆಗಳಾದ ಟಿಸಿಎಸ್‌, ಸಿಡಾಟ್‌ ಮತ್ತು ತೇಜಸ್‌  ಸೇರಿ ದೇಸೀ ತಂತ್ರಜ್ಞಾನದಲ್ಲಿ4ಜಿ ತಂತ್ರಜ್ಞಾನ ಒದಗಿಸಲು ಉಪಕರಣಗಳನ್ನು ಸಿದ್ದಪಡಿಸಿವೆ. ಈ ಉಪಕರಣಗಳ ಪರಿಶೀಲನೆ ಕಾರ್ಯ ಮುಗಿದಿದ್ದು, ಅವುಗಳ ಅಳವಡಿಕೆಗೆ ಕಾರ್ಯಾದೇಶ ನೀಡಲಾಗಿದೆ. ಅವುಗಳ ಅಳವಡಿಕೆಯೂ ಶೀಘ್ರವೇ ಆರಂಭವಾಗಲಿದೆ’ ಎಂದು ಅವರು ವಿವರಿಸಿದರು.  

‘ಇದು ಶೇ 100 ಗ್ರಾಮಗಳಲ್ಲೂ 2024 ಮಾರ್ಚ್‌ ಒಳಗೆ 4ಜಿ  ಸೇವೆ ತಲುಪಿಸುವುದು ನಮ್ಮ ಉದ್ದೇಶ. 2024ರ ಡಿಸೆಂಬರ್‌ ಉಪಕರಣಗಳ ಅಳವಡಿಕೆ ಪೂರ್ಣಗೊಳಿಸಿ ಉಭಯ ಜಿಲ್ಲೆಗಳ ಎಲ್ಲ ಗ್ರಾಮಗಳಲ್ಲೂ 4ಜಿ ನೆಟ್‌ವರ್ಕ್‌ ಆರಂಭಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಅವರು ತಿಳಿಸಿದರು.

‘ಮೂಲಸೌಕರ್ಯವನ್ನು ಇತರ ಟೆಲಿಕಾಂ ಸೇವೆ ಪೂರೈಕೆ ಕಂಪನಿಗಳ ಜೊತೆಗೆ ಹಂಚಿಕೊಳ್ಳಲಿದ್ದೇವೆ’ ಎಂದು ಅವರು ತಿಳಿಸಿದರು.

ಅವಿಭಜಿತ ದ.ಕ. 102 ಕಡೆ ಟವರ್‌

ನೆಟ್‌ವರ್ಕ್‌ ಜಾಲದ ಸುಧಾರಣೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 66 ಹಾಗೂ ಉಡುಪಿ ಜಿಲ್ಲೆಯಲ್ಲಿ 36 ಕಡೆ ಹೊಸ ಟವರ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ನವೀನ್‌ ಗುಪ್ತ ತಿಳಿಸಿದರು. 

’ಟವರ್‌ ಅಳವಡಿಸಲು ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 66 ಜಾಗಗಳಲ್ಲಿ ಪೈಕಿ 42 ಕಡೆ ಈಗಾಗಲೇ ಜಾಗವನ್ನು ಅಂತಿಮಗೊಳಿಸಲಾಗಿದೆ. ಇನ್ನುಳಿದ ಕಡೆ ಒಂದು ವಾರದಲ್ಲಿ ಜಮೀನು ಹಂಚಿಕೆ ಆಗುವ ನಿರೀಕ್ಷೆ ಇದೆ. ಉಡುಪಿಯಲ್ಲಿ 32 ಕಡೆಯೂ ಜಾಗ ಗುರುತಿಸಲಾಗಿದೆ. ಎರಡು ಕಡೆ ಜಮೀನಿಗೆ ಅರಣ್ಯ ಇಲಾಖೆ ಅನುಮತಿ ಅಗತ್ಯ ಇದೆ. ಎರಡೂ ಜಿಲ್ಲೆಗಳ ಜಿಲ್ಲಾಡಳಿತವು ನಮ್ಮ ಇಲಾಖೆಗೆ ಉತ್ತಮ ಸಹಕಾರ ನೀಡಿವೆ’ ಎಂದು ಅವರು ತಿಳಿಸಿದರು.

ಒಂದು ಟವರ್‌ ಮೂರರಿಂದ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೆಟ್‌ವರ್ಕ್‌ ಒದಗಿಸಬಲ್ಲುದು. ಟವರ್‌ ಅಳವಡಿಕೆಗೆ ತಲಾ 200 ಚದರ ಮೀ. ಜಾಗ ಬೇಕು. ಎಲ್ಲ ಟವರ್‌ಗೂ ಸೌರಶಕ್ತಿಯನ್ನು ಆದ್ಯತೆ ಮೇರೆಗೆ ಬಳಸುತ್ತೇವೆ. ಅಲ್ಲಿಗೆ ವಿದ್ಯುತ್‌ ಸಂಪರ್ಕ ಹಾಗೂ ಜನರೇಟರ್‌ ಸೌಕರ್ಯವೂ ಇರುತ್ತದೆ. 

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಈಗಲೂ ನೆಟ್‌ವರ್ಕ್‌ ಸಿಗದ ಹಲವು ಗ್ರಾಮಗಳಿವೆ. ಈ ಗ್ರಾಮಗಳ ಜನರಿಗೆ ಮೂಲಸೌಕರ್ಯ ಒದಗಿಸುವುದೇ ನಮ್ಮ ಉದ್ದೇಶ. ಲಾಭ ಗಳಿಕೆ ಅಲ್ಲ.
-ನವೀನ್‌ ಗುಪ್ತ, ಪಿಜಿಎಂ, ಬಿಎಸ್‌ಎನ್‌ಎಲ್‌ ಮಂಗಳೂರು ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT