ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಲೋಕದ ಗಟ್ಟಿಗಿತ್ತಿ ಭೂಮಿಕಾ

Last Updated 13 ಫೆಬ್ರುವರಿ 2020, 15:38 IST
ಅಕ್ಷರ ಗಾತ್ರ

ಆತ್ಮವಿಶ್ವಾಸವನ್ನೇ ಅಸ್ತ್ರವನ್ನಾಗಿಟ್ಟುಕೊಂಡು ತನ್ನ ಆಸಕ್ತಿಯನ್ನು ನಟನೆಯ ಮೂಲಕ ಸಮಾಜಕ್ಕೆ ಪರಿಚಯಿಸಿದವರು ಕುಂದಾಪುರದ ಬೆಡಗಿ ಭೂಮಿಕಾ ಶೆಟ್ಟಿ.

ಬಾಲ್ಯದಲ್ಲಿ ರಾಯಲ್ ಶೆಟ್ಟಿ ಎಂದೇ ಪ್ರಸಿದ್ಧಿ ಹೊಂದಿದ್ದ ಇವರು ಕುಂದಾಪುರದ ಬೇಬಿ ಶೆಟ್ಟಿ ಮತ್ತು ಭಾಸ್ಕರ್ ಶೆಟ್ಟಿ ದಂಪತಿಯ ಪುತ್ರಿ. ಐದನೇ ತರಗತಿಯಲ್ಲಿದ್ದಾಗಲೇ ಯಕ್ಷಗಾನ ಕ್ಷೇತ್ರದಲ್ಲಿ ಒಲವನ್ನು ಹೊಂದಿ ಜತೆಯಲ್ಲಿ ನಟನಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕಲರ್ಸ್‌ ಕನ್ನಡದ ‘ಕಿನ್ನರಿ’ ಧಾರವಾಹಿಯಲ್ಲಿ ಮಣಿ ಪಾತ್ರ ನಿರ್ವಹಿಸುವುದರ ಮೂಲಕ ನಟನಾ ಕ್ಷೇತ್ರದಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದರು. ನಂತರ ‘ನಿನ್ನೆ ಪೆಳ್ಳಾಡತಾ’ ಎಂಬ ತೆಲುಗು ಧಾರವಾಹಿಯಲ್ಲಿ ಮೃದುಳಾ ಎಂಬ ಪಾತ್ರವನ್ನು ನಿರ್ವಹಿಸಿದ್ದರು.

ಹೀಗೆ ಬಣ್ಣದ ಜಗತ್ತಿಗೆ ಕಾಲಿಟ್ಟ ನಂತರ ತಮ್ಮ ಹೆಸರನ್ನು ಭೂಮಿಕಾದಿಂದ ಭೂಮಿ ಶೆಟ್ಟಿ ಎಂಬುದಾಗಿ ಬದಲಾಯಿಸಿಕೊಂಡರು.

‘ಬಿಗ್ ಬಾಸ್ ಮನೆಯ ಪಯಣಕ್ಕೆ ದಾರಿ ಮಾಡಿಕೊಟ್ಟದ್ದು ಕಿನ್ನರಿ ಧಾರವಾಹಿಯ ‘ಮಣಿ’ ಪಾತ್ರ. ಆ ಪಾತ್ರವು ಎಷ್ಟು ಭಾವನಾತ್ಮಕವಾಗಿತ್ತೋ ಅಷ್ಟೇ ಸದೃಢವಾಗಿತ್ತು. ನಟನೆಯನ್ನು ಆರಂಭಿಸಿದ ಹಂತದಲ್ಲಿಯೇ ಇಂತಹ ಒಳ್ಳೆಯ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಭೂಮಿ.

‘ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಬಿಗ್ ಬಾಸ್ ಏಕೆ ಎಂದು ಪ್ರಶ್ನೆ ಹೊಂದಿದ್ದ ನಾನು ಮನೆಯಿಂದ ಹೊರಬಂದ ಮೇಲೆ ಬಿಗ್ ಬಾಸ್ ತನ್ನ ಜೀವನದಲ್ಲಿ ತೆಗೆದುಕೊಂಡ ಒಂದು ಅತ್ಯುತ್ತಮ ನಿರ್ಧಾರ’ ಎನ್ನುತ್ತಾರೆ ಭೂಮಿ.

ಹೀಗೆ ಕಿನ್ನರಿ ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಬಿಗ್ ಬಾಸ್ ಸೀಸನ್ 7ರಲ್ಲಿ. ಮನೆಯಲ್ಲಿ ಮೊದಲನೇ ವಾರದಲ್ಲೇ ನಾಯಕಿಯಾಗಿ ಹೊರಹೊಮ್ಮಿದ ಭೂಮಿ ಪುರುಷರಿಗೂ ಕಠಿಣ ಸ್ಪರ್ಧೆಯನ್ನು ನೀಡುವುದರ ಜತೆಗೆ 112 ದಿನಗಳ ಕಾಲ ಮನೆಯೊಳಗಿದ್ದು ಟಾಪ್ 5 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು.

ತಪ್ಪು ಮಾಡಿದಾಗ ಅದನ್ನು ತಿದ್ದುವುದು, ತಪ್ಪಿಲ್ಲದಾಗ ತಮ್ಮ ಪರವಾಗಿ ಮಾತನಾಡುವುದು, ಜನರ ಜತೆ ಹೊಂದಿಕೊಳ್ಳುವುದು, ಪ್ರೀತಿ ಹಂಚುವುದು, ವಾಸ್ತವಿಕತೆಯಲ್ಲಿ ಬದುಕುವುದು ಮತ್ತು ಪ್ರಾಯೋಗಿಕವಾಗಿ ಚಿಂತಿಸುವುದು ಹೀಗೆ ನನ್ನ ಜೀವನದಲ್ಲಿನ ಹತ್ತು ಹಲವಾರು ಬದಲಾವಣೆಗಳಿಗೆ ಬಿಗ್ ಬಾಸ್ ಮನೆ ಕಾರಣವಾಗಿದೆ ಎನ್ನುತ್ತಾರೆ ಅವರು.

ಆರಂಭದಿಂದಲೂ ಸ್ವತಂತ್ರವಾಗಿ ಇರಲು ಬಯಸಿದ್ದ ಇವರು ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ಬೆಂಗಳೂರಿಗೆ ತೆರಳಿದರು.

ಅಧ್ಯಯನದ ನಡುವಿನಲ್ಲಿ ಕಿನ್ನರಿ ಧಾರಾವಾಹಿಯಲ್ಲಿ ಮಣಿ ಪಾತ್ರವನ್ನು ನಿರ್ವಹಿಸುವ ಅವಕಾಶ ಒದಗಿ ಬಂತು. ತಮ್ಮ ನಟನಾ ಆಸಕ್ತಿ ಹಾಗೂ ಸಮಾಜಕ್ಕೆ ಭೂಮಿ ಶೆಟ್ಟಿಯನ್ನು ಪರಿಚಯಿಸಲು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಕಿರುತೆರೆಯಲ್ಲಿ ಮಣಿಯಾಗಿ ಅಭಿನಯಿಸಿದರು.

ಹೆಣ್ಣುಮಕ್ಕಳ ಬಗ್ಗೆ ವಿಶೇಷ ಕಾಳಜಿ:‘ಸಮಾಜದಲ್ಲಿ ಒಬ್ಬ ಮಹಿಳೆ ಎಲ್ಲಾ ತರಹದ ಪಾತ್ರವನ್ನು ನಿರ್ವಹಿಸುತ್ತಾಳೆ. ಒಬ್ಬ ತಾಯಿಯಾಗಿ, ಮಗಳಾಗಿ, ಅಕ್ಕನಾಗಿ ಹೀಗೆ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾ ತನ್ನ ಸ್ವಹಿತವನ್ನು ಮರೆತುಬಿಡುತ್ತಾಳೆ. ಒಬ್ಬ ಮಹಿಳೆ ಇತರರ ಮೇಲೆ ಅವಲಂಬಿಸದೇ ತನ್ನ ನಿರ್ಧಾರವನ್ನು ಸ್ವತಂತ್ರವಾಗಿ ತಗೆದುಕೊಳ್ಳಬೇಕು. ನಿರ್ಧಾರದ ಪರಿಣಾಮ ಹೇಗೆ ಇರಲಿ ಅದನ್ನು ಮೆಟ್ಟಿ ನಿಲ್ಲುವ ಧೈರ್ಯ ಮತ್ತು ಆತ್ಮವಿಶ್ವಾಸ ಪ್ರತಿಯೊಬ್ಬ ಮಹಿಳೆಯಲ್ಲೂ ಇರಬೇಕು.

ಆಕೆ ಯಾವುದೇ ರೀತಿಯ ಬಟ್ಟೆ ತೊಡಲಿ, ಯಾವುದೇ ರೀತಿಯ ನಿರ್ಧಾರ ಕೈಗೊಳ್ಳಲಿ, ಕೊನೆಯದಾಗಿ ಅವಳಿಗೆ ಬೇಕಾಗುವುದು ಆತ್ಮವಿಶ್ವಾಸ. ಆತ್ಮವಿಶ್ವಾಸವೊಂದಿದ್ದರೆ ಎಲ್ಲಾ ತರಹದ ಸಮಸ್ಯೆಗಳನ್ನು ಬಗೆಹರಿಸಬಹುದು’ ಎನ್ನುತ್ತಾರೆ ಗಟ್ಟಿಗಿತ್ತಿ ಭೂಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT