ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮರಣ ಸರಣಿಗೆ ಕಾಂಗ್ರೆಸ್ ಹೊಣೆ: ನಳಿನ್ ಕುಮಾರ್ ಕಟೀಲ್

ಲಸಿಕೆ ವಿರುದ್ಧ ಅಪಪ್ರಚಾರ: ಸಂಸದ ನಳಿನ್ ಕುಮಾರ್ ಕಟೀಲ್‌ ಆರೋಪ
Last Updated 20 ಮೇ 2021, 3:51 IST
ಅಕ್ಷರ ಗಾತ್ರ

ಪುತ್ತೂರು: ‘ಕೋವಿಡ್ ಅಲೆಯಲ್ಲಿ ಸಂಭವಿಸುತ್ತಿರುವ ಪ್ರಾಣಹಾನಿಗೆ, ಮರಣ ಸರಣಿಗೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದೇಶಭಕ್ತ ಪಕ್ಷ ಎಂದು ಹೇಳಿಕೊಂಡು ಬಂದಿದ್ದ ಕಾಂಗ್ರೆಸ್ ಇಂದು ದೇಶದ್ರೋಹದ ಕೆಲಸ ಮಾಡುತ್ತಿದೆ’ ಎಂದು ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಅವರು ವಿಜ್ಞಾನಿಗಳಿಗೆ ಪ್ರೇರಣೆ ನೀಡಿ, ಕೋವಿಡ್ ಲಸಿಕೆ ಆವಿಷ್ಕಾರ ಮಾಡಲಾಯಿತು. ಆದರೆ, ಇದರ ವಿರುದ್ಧ ಕಾಂಗ್ರೆಸ್ ವ್ಯಾಪಕ ಅಪಪ್ರಚಾರ ಮಾಡಿತು. ಲಸಿಕೆಯನ್ನು ‘ಬಿಜೆಪಿ ಲಸಿಕೆ’ ಎಂದು ಲೇವಡಿ ಮಾಡಿತು. ರಾಹುಲ್ ಗಾಂಧಿ, ಸಿದ್ದರಾಮಯ್ಯ ಮುಂತಾದ ನಾಯಕರೆಲ್ಲ ಲಸಿಕೆಯ ಬಗ್ಗೆ ಟೀಕೆ ಮಾಡಿ, ಜನರನ್ನು ನಿರುತ್ತೇಜನಗೊಳಿಸಿದರು. ಇದರಿಂದ ಆರಂಭದಲ್ಲಿ ಜನ ಲಸಿಕೆ ಪಡೆಯಲು ಮುಂದೆ ಬರಲೇ ಇಲ್ಲ. ಇವತ್ತು ಸಂಭವಿಸುತ್ತಿರುವ ಪ್ರಾಣ ಹಾನಿಗಳಿಗೆ ಇದೇ ಕಾರಣ’ ಎಂದು ದೂರಿದರು.

‘ಅಂದು ಲಸಿಕೆ ಪಡೆಯದಂತೆ ಜನರನ್ನು ದೂರ ಮಾಡಿದ ಕಾಂಗ್ರೆಸ್ ನಾಯಕರೇ ಇಂದು ಲಸಿಕೆ ಪಡೆದುಕೊಂಡಿದ್ದಾರೆ. ಈಗ ಲಸಿಕೆ ಇಲ್ಲ ಎಂದು ಬೀದಿ ರಂಪ ಮಾಡುತ್ತಿದ್ದಾರೆ. ಮೋದಿ ಸರ್ಕಾರ ಕೋವಿಡ್ ತಡೆಯುವಲ್ಲಿ ವಿಫಲವಾಗಿದೆ ಎಂದು ಬಿಂಬಿಸಲು ಕಾಂಗ್ರೆಸ್ ಟೂಲ್ ಕಿಟ್ ತಂತ್ರಗಾರಿಕೆ ಮಾಡುತ್ತಿದೆ. ಶವ ಸುಡುವ, ನದಿಯಲ್ಲಿ ಶವಗಳು ತೇಲುವ, ಆಕ್ಸಿಜನ್ ಅಭಾವ ಇರುವ ದೃಶ್ಯಗಳನ್ನು ಚಿತ್ರೀಕರಿಸಿ, ಅವುಗಳನ್ನು ಸಾಮಾಜಿಕ ಜಾಣ ತಾಣಗಳಲ್ಲಿ ವಿಜೃಂಭಿಸುವಂತೆ ಮಾಡಲಾಗುತ್ತಿದೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಗೆ ಮಸಿ ಬಳಿಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ’ ಎಂದು ಆಪಾದಿಸಿದರು.

‘ಕುಂಭಮೇಳವು ಕೋವಿಡ್ ಪಾಲಿಗೆ ಸೂಪರ್ ಸ್ಪ್ರೆಡ್ಡರ್ ಆಗಿದೆ. ನೂತನ ಸಂಸತ್ ಭವನವು ಮೋದಿ ಅವರ ಮನೆ ಎಂದೆಲ್ಲಾ ಅಪಪ್ರಚಾರ ಮಾಡಲಾಗಿದೆ. ಕಾಂಗ್ರೆಸ್ ಇಂಥ ಹೀನ ಕೃತ್ಯವನ್ನು ಕೈಬಿಟ್ಟು ರಾಷ್ಟ್ರೀಯ ಸಂಕಟವನ್ನು ಎದುರಿಸುವಲ್ಲಿ ಸರ್ಕಾರದ ಜತೆ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.

‘ಕಾಂಗ್ರೆಸ್ ಶಾಸಕರು ಸೇರಿಕೊಂಡು ₹ 100 ಕೋಟಿ ಹಣ ಒಟ್ಟು ಮಾಡಿ ಲಸಿಕೆ ಅಭಿಯಾನಕ್ಕೆ ನೀಡುವುದಾಗಿ ಹೇಳಿ, ಆ ಪಕ್ಷದ ನಾಯಕರು ದೊಡ್ಡಮಟ್ಟದ ಪ್ರಚಾರ ಪಡೆದುಕೊಂಡಿದ್ದಾರೆ. ಆದರೆ, ಅವರು ಕೊಡುವ ಹಣ ಶಾಸಕರಿಗೆ ಸರ್ಕಾರ ನೀಡುವ ಅನುದಾನದ ಮೊತ್ತವೇ ಹೊರತು ಸಾರ್ವಜನಿಕರಿಂದ ಸಂಗ್ರಹಿಸಿದ್ದನ್ನಲ್ಲ. ಹೀಗಿರುವಾಗ ಇದರಲ್ಲಿ ಕಾಂಗ್ರೆಸ್ ಪಾಲು ಏನಿದೆ?. ಈ ರೀತಿ ಪ್ರಚಾರ ಪಡೆಯುವ ಬದಲು ಕಾಂಗ್ರೆಸಿಗರು ತಾವೇ ಹಣ ಸಂಗ್ರಹಿಸಿ ನೀಡಲಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT