ಮಂಗಳೂರು: ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟಲು ಸಿನಿಮಾ ಉದ್ಯಮದಲ್ಲಿ ಮಾತ್ರವಲ್ಲ, ರಾಜಕೀಯ ಪಕ್ಷಗಳೂ ಆಂತರಿಕ ದೂರು ಸಮಿತಿ ರಚಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಸಿ. ಮಂಜುಳಾ ಅಭಿಪ್ರಾಯಪಟ್ಟರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕೀಯ ಪಕ್ಷಗಳು ಬೆಳೆದಂತೆ ಎಲ್ಲ ರೀತಿಯ ಜನರು ಬಂದು ಸೇರುತ್ತಾರೆ. ಪಕ್ಷದಲ್ಲಿ ದುಡಿಯುವ ಆಸೆಯಿಂದ ರಾಜಕಾರಣಕ್ಕೆ ಬರುವ ಮಹಿಳೆಯರು ಲೈಂಗಿಕ ಶೋಷಣೆಗೆ ಒಳಗಾದರೆ ಬಹಿರಂಗವಾಗಿ ಪ್ರತಿರೋಧಿಸಬೇಕು, ಇಲ್ಲವಾದಲ್ಲಿ ಪ್ರಗತಿಪರ ಚಿಂತನೆಯ ಮಹಿಳೆಯರು ತಮಗೆ ತಾವೇ ಅನ್ಯಾಯ ಮಾಡಿಕೊಂಡಂತೆ ಆಗುತ್ತದೆ. ಯಾವುದೇ ಪಕ್ಷ ಇರಲಿ, ಮಹಿಳೆಯರ ವಿಷಯ ಬಂದಾಗ ಅಲ್ಲಿ ಪಕ್ಷದ ಪ್ರಶ್ನೆ ಬರುವುದಿಲ್ಲ. ಮಹಿಳೆ ಯಾರ ಸರಕೂ ಅಲ್ಲ’ ಎಂದರು.
‘ಮಹಿಳೆಯರಿಗೆ ಕಿರುಕುಳ ನೀಡುವ ವ್ಯಕ್ತಿಗಳು ಇದ್ದಲ್ಲಿ, ಅಂತಹವರನ್ನು ಪಕ್ಷದಿಂದ ಹೊರಹಾಕಬೇಕು. ನಮ್ಮ ಪಕ್ಷದಲ್ಲಿ ಅಂತಹ ಸಂದರ್ಭ ಬಂದಲ್ಲಿ ನಾನು ಖಂಡಿತವಾಗಿಯೂ ಪಕ್ಷಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿನಿಮಾ ಉದ್ಯಮ ಕೂಡ ಕೆಲಸ ಸ್ಥಳ ಆಗಿರುವುದರಿಂದ, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆ ಸಮಿತಿ ರಚನೆ ಮಾಡಬೇಕು. ಲೈಂಗಿಕ ಕಿರುಕುಳ ಸೇರಿದಂತೆ ಉದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಕಲಾವಿದರು ಇಟ್ಟಿರುವ ಬೇಡಿಕೆಗೆ ಇನ್ನೂ ಹೆಚ್ಚು ಕಲಾವಿದರು ಸಹಿ ಮಾಡಬೇಕು. ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನಿಗಾದಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ತನಿಖೆಯನ್ನು ನಡೆಸಬೇಕು ಎಂದು ಹೇಳಿದರು.
ಕಾರ್ಕಳದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ, ನೇಹಾ ಹತ್ಯೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದರೂ, ಕರ್ನಾಟಕದ ಗೃಹ ಸಚಿವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಮಹಿಳಾ ಸುರಕ್ಷತೆಯನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಮಹಿಳೆಯರ ಬೆಂಬಲಕ್ಕೆ ನಿಂತಿಲ್ಲ. ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣದ ಬಗ್ಗೆಯೂ ಸರ್ಕಾರದ ಪ್ರತಿಕ್ರಿಯೆ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಮಹಿಳಾ ಸುರಕ್ಷತಾ ಸಭೆ ನಡೆಸುತ್ತಿಲ್ಲ. ಕರಾವಳಿಯಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಯಾವುದೇ ಕ್ರಮ ಆಗಿಲ್ಲ ಎಂದು ಆರೋಪಿಸಿದರು.
ಬಿಜೆಪಿಯ ಮಂಜುಳಾ ರಾವ್, ಶ್ವೇತಾ ಪೂಜಾರಿ, ಶಿಲ್ಪಾ, ಸಂಧ್ಯಾ ವೆಂಕಟೇಶ್, ಲಿಖಿತಾ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.