ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ಆಯ್ಕೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ರಘುಪತಿ ಭಟ್‌

Published 2 ಜೂನ್ 2024, 5:48 IST
Last Updated 2 ಜೂನ್ 2024, 5:48 IST
ಅಕ್ಷರ ಗಾತ್ರ

ಮಂಗಳೂರು: ‘ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಮಾನದಂಡದ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಕೆ.ರಘುಪತಿ ಭಟ್‌ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಎರಡೆರಡು ಸಲ ಪಕ್ಷವು ಕಾರಣವಿಲ್ಲದೆಯೇ ನನಗೆ ಟಿಕೆಟ್‌ ನಿರಾಕರಿಸಿದಾಗಲೂ ನಾನು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದೇನೆ. ಈ ಚುನಾವಣೆಯಲ್ಲೂ ಸ್ಪರ್ಧಿಸಿದೇ ಹೋದರೆ, ನನಗೆ ಇನ್ನು ಚುನಾವಣಾ ರಾಜಕೀಯದಲ್ಲಿರಲು ಆಗುವುದಿಲ್ಲ. ನಾಲ್ಕು ವರ್ಷದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ಬಂದಾಗಲೂ ನಾನೇ ಗೆಲ್ಲಿಸಿದ ಶಾಸಕರ ವಿರುದ್ಧ ಸ್ಪರ್ಧಿಸಲಾಗದು’ ಎಂದು ತಮ್ಮ ಸ್ಪರ್ಧೆಯನ್ನು ಸಮರ್ಥಿಸಿದರು.

‘ಕೆಲವರಿಗೆ ಅಧಿಕಾರ ಇಲ್ಲದೇ ಅರೆಕ್ಷಣವೂ ಇರಲಾಗುವುದಿಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ರಘುಪತಿ ಭಟ್‌, ‘ಅವರು ಬಹುಶಃ ಆರೇಳು ಸಲ ಶಾಸಕರಾದವರ ಬಗ್ಗೆ, ನಾನೇ ಮುಖ್ಯಮಂತ್ರಿಯಾಗಿರಬೇಕು, ನನ್ನ ಮಗನೇ ಅಧ್ಯಕ್ಷ ಆಗಬೇಕು ಎಂದು ಹಂಬಲಿಸುವವರ ಕುರಿತು ಹಾಗೆ ಹೇಳಿರಬಹುದು’ ಎಂದರು. 

‘ನಾನು ಶಾಸಕನಾಗಿದ್ದಾಗ ಯಕ್ಷಗಾನ ಕಲಿಕೆ, ಹಡಿಲು ಭೂಮಿ ಕೃಷಿ, ಸರ್ಕಾರಿ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗ ಆರಂಭಿಸುವಂತಹ ಸಾಧನೆ ಮಾಡಿದ್ದೇನೆ. ಗೆದ್ದರೆ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ಡೇಟಾಬೇಸ್ ಆರಂಭಿಸುವ, ಸರ್ಕಾರಿ ಉದ್ಯೋಗ ಸೇರಲು ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇನೆ’ ಎಂದರು.

‘ನೈರುತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಪದವೀಧರರು ಇದ್ದಾರೆ. ಆದರೆ ಮತದಾರರಿರುವುದು 85 ಸಾವಿರ ಮಾತ್ರ. ಪ್ರತಿ ಚುನಾವಣೆಯಲ್ಲಿ ಹೊಸತಾಗಿ ಮತದಾರರ ಪಟ್ಟಿ ತಯಾರಿಸುವುದು ಸರಿಯಲ್ಲ. ಯಾವುದೇ ವ್ಯಕ್ತಿ ಪದವೀಧರನಾದ ತಕ್ಷಣವೇ ಮತದಾರರ ಪಟ್ಟಿಗೆ ಅವರ ಹೆಸರೂ ನೊಂದಣಿಯಾಗುವ ವ್ಯವಸ್ಥೆ ಜಾರಿಯಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT