ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಿತರಣೆಯಲ್ಲೂ ರಾಜಕೀಯ

ಲಸಿಕೆ, ಆಹಾರ ಕಿಟ್‌ ವಿತರಣೆ ಬಿಜೆಪಿ ಕಾರ್ಯಕ್ರಮವಲ್ಲ: ಹರೀಶ್‌ಕುಮಾರ್‌
Last Updated 3 ಸೆಪ್ಟೆಂಬರ್ 2021, 3:54 IST
ಅಕ್ಷರ ಗಾತ್ರ

ಮಂಗಳೂರು: ಸರ್ಕಾರದಿಂದ ಜನರಿಗೆ ದೊರೆಯುವ ಸೌಲಭ್ಯಗಳ ವಿತರಣೆಯಲ್ಲೂ ಬಿಜೆಪಿಯ ಜನಪ್ರತಿನಿಧಿಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್‌ಕುಮಾರ್ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಸಿಕೆ ಹಂಚಿಕೆ, ಗ್ರಾಮೀಣ ಪ್ರದೇಶಗಳಲ್ಲಿ ಜನರ ಆರೋಗ್ಯ ತಪಾಸಣೆ, ಕಾರ್ಮಿಕ ಕಲ್ಯಾಣ ನಿಧಿಯಿಂದ ನೀಡಲಾಗುವ ಆಹಾರ ಪೊಟ್ಟಣಗಳನ್ನು ವಿತರಿಸುವ ಕಾರ್ಯವನ್ನು ಪಕ್ಷದ ಕಾರ್ಯಕ್ರಮವನ್ನಾಗಿ ಬಿಜೆಪಿ ಮಾಡುತ್ತಿದೆ ಎಂದರು.

ಎರಡು ವರ್ಷದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 18 ರಿಂದ 44 ವರ್ಷದ ವಯಸ್ಸಿನವರಿಗೆ ನೀಡಲಾದ ಲಸಿಕಾ ಪ್ರಮಾಣ ಶೇ 14, 45ರಿಂದ 60 ವರ್ಷದವರೆಗೆ ಶೇ 40, 60 ವರ್ಷ ಮೇಲಿನವರಲ್ಲಿ ಶೇ 57 ಮಾತ್ರ. ಸರ್ಕಾರಕ್ಕೆ ಲಸಿಕೆ ಪ್ರಮಾಣ ಏಕೆ ಹೆಚ್ಚಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಲಸಿಕಾ ಕಾರ್ಯಕ್ರಮ ಆರೋಗ್ಯ ಕೇಂದ್ರ, ಆಸ್ಪತ್ರೆಗಳಲ್ಲಿ ನಡೆಯಬೇಕೇ ಹೊರತು ಬಿಜೆಪಿ ಕಾರ್ಯಕರ್ತರ ಮನೆಯ ಸಮೀಪವಲ್ಲ ಎಂದು ಹೇಳಿದರು.

ಕಾರ್ಮಿಕ ಕಲ್ಯಾಣ ನಿಧಿಯಡಿ ರಾಜ್ಯದಲ್ಲಿ ₹8ಸಾವಿರ ಕೋಟಿ ಸಂಗ್ರಹವಿದೆ. ಅದರಡಿ ಕಾರ್ಮಿಕರಿಗೆ ಆಹಾರದ ಕಿಟ್‌ ವಿತರಿಸಲಾಗುತ್ತಿದೆ. ಬಂಟ್ವಾಳದ ನರಿಕೊಂಬು ಗ್ರಾಮದಲ್ಲಿ ವಿತರಣೆಗೆ ಬಂದ ಆಹಾರ ಪೊಟ್ಟಣ ಅಲ್ಲಿನ ಕಿರಾಣಿ ಅಗಂಡಿಯೊಂದರಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಆರೋಪಿಸಿದರು.

ಇಂತಹ ಆಹಾರ ಪೊಟ್ಟಣಗಳನ್ನು ಬಿಜೆಪಿಯವರ ಮನೆಗಳಲ್ಲಿ ದಾಸ್ತಾನು ಇಡುವ ಬಗ್ಗೆ ಮಾಹಿತಿ ದೊರಕಿದೆ. ಬಿಜೆಪಿ ಆಡಳಿತ ಇರುವಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಪೊಟ್ಟಣ ವಿತರಿಸಲಾಗಿದ್ದು, ಕಾಂಗ್ರೆಸ್ ಆಡಳಿತ ಇರುವ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ದಾಸ್ತಾನು ಇರಿಸಿರುವುದು ಯಾರ ಒತ್ತಡದಿಂದ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಕೋವಿಡ್–19 ಸಂದರ್ಭದಲ್ಲಿ ಜನಸಾಮಾನ್ಯರ ಆರೋಗ್ಯದ ಹಕ್ಕು ಸರ್ಕಾರದ ಜವಾಬ್ದಾರಿ. ಲಸಿಕೆಯ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೊ ಅಳವಡಿಸುವ ಸರ್ಕಾರ, ಕೋವಿಡ್‌ನಿಂದ ಮೃತಪಟ್ಟವರ ಮರಣ ಪ್ರಮಾಣಪತ್ರದಲ್ಲೂ ಮೋದಿ ಫೋಟೊ ಹಾಕಲಿ ಎಂದು ಲೇವಡಿ ಮಾಡಿದರು.

ಪಕ್ಷದ ಮುಖಂಡರಾದ ಶಾಹುಲ್ ಹಮೀದ್, ಅಬ್ಬಾಸ್ ಅಲಿ, ಲಾರೆನ್ಸ್ ಡಿಸೋಜ, ಸುಧೀರ್ ಟಿ.ಕೆ., ನೀರಜ್ ಪಾಲ್, ಅಪ್ಪಿ, ಸಬಿತಾ ಮಿಸ್ಕಿತ್, ಶೋಭಾ ಪಡೀಲ್, ಶಬೀರ್ ಎಸ್., ನಝೀರ್ ಬಜಾಲ್ ಉಪಸ್ಥಿತರಿದ್ದರು.

‘ಅಡುಗೆ ಅನಿಲ: ಖಾಸಗೀಕರಣಕ್ಕೆ ಹುನ್ನಾರ’

ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾಡುವ ಮೂಲಕ ಸರ್ಕಾರ ಖಾಸಗಿ ಕಂಪನಿಗಳಿಗೆ ಲಾಭ ಮಾಡುತ್ತಿದ್ದು, ಅಡುಗೆ ಅನಿಲ ಪೂರೈಕೆಯನ್ನೂ ಖಾಸಗೀಕರಣ ಮಾಡುವ ಹುನ್ನಾರ ನಡೆಸಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಮತಾ ಗಟ್ಟಿ ಆರೋಪಿಸಿದರು.

ಹಿಂದೆ ಅಡುಗೆ ಅನಿಲ ಸಬ್ಸಿಡಿ ಗ್ರಾಹಕರ ಬ್ಯಾಂಕ್‌ಗೆ ಜಮಾ ಆಗುತ್ತಿತ್ತು. ಕೋವಿಡ್‌–19 ಬಳಿಕ ಮಾಹಿತಿ ನೀಡದೇ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ. ಉಜ್ವಲ ಯೋಜನೆಯಡಿ ಮೂರು ತಿಂಗಳು ಮಾತ್ರ ಫಲಾನುಭವಿಗಳಿಗೆ ಸಬ್ಸಿಡಿ ದೊರಕಿದ್ದು, ಬಳಿಕ ಸಬ್ಸಿಡಿಯೂ ಸಿಗುತ್ತಿಲ್ಲ. ಪ್ರಸಕ್ತ ಕೇಂದ್ರ ಸರ್ಕಾರ ಹಿಂದಿನ ಅವಧಿಯ ಸಾಲ ತೀರಿಸಲು ಬೆಲೆ ಏರಿಕೆಯ ಸಬೂಬು ನೀಡುತ್ತಿದೆ ಎಂದು ಹೇಳಿದರು.

ಯುಪಿಎ ಅವಧಿಯಲ್ಲಿ ಸಿಲಿಂಡರ್‌ ಬೆಲೆ ₹354 ಇದ್ದಾಗ ಬೀದಿಗಿಳಿದು ಹೋರಾಟ ಮಾಡಿದ್ದ ಈಗಿನ ಕೇಂದ್ರ ಸಚಿವರಾಗಿರುವ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಈಗ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಅಪ್ಪಿ, ಸಬಿತಾ ಮಿಸ್ಕಿತ್, ಶೋಭಾ ಕೇಶವ್, ತೆರೆಸಾ, ಚಂದ್ರಕಲಾ, ಗೀತಾ ಅತ್ತಾವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT