ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು: ಕೊಳವೆಬಾವಿ ಕೊರೆಯುವ ವೇಳೆ ಕೃಷಿಕರ ಆಕ್ಷೇಪ

Published : 6 ಮೇ 2024, 14:48 IST
Last Updated : 6 ಮೇ 2024, 14:48 IST
ಫಾಲೋ ಮಾಡಿ
Comments

ಪುತ್ತೂರು: ತಾಲ್ಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಸಮೀಪದ ಕೊಲ್ಯ ಜನವಸತಿ ಕಾಲೊನಿಯಲ್ಲಿ 15 ದಿನಗಳಿಂದ ನೀರಿನ ಸಮಸ್ಯೆ ಎದುರಾಗಿದ್ದು, ಸಮಸ್ಯೆ ನಿವಾರಿಸಲು ಆರ್ಯಾಪು ಗ್ರಾಮ ಪಂಚಾಯಿತಿಯು ಇಲ್ಲಿಗೆ ಸಮೀಪದ ಕಂಬಳದಡ್ಡ ಎಂಬಲ್ಲಿ ಸೋಮವಾರ ಕೊಳವೆ ಬಾವಿಯೊಂದನ್ನು ಕೊರೆಸಲು ಮುಂದಾದಾಗ ಆ ಭಾಗದ ಕೃಷಿಕರು ಆಕ್ಷೇಪ ವ್ಯಕ್ತಪಡಿಸಿ ತಡೆದರು.

ಕೊಲ್ಯ ಜನವಸತಿ ಕಾಲೊನಿಯಲ್ಲಿ ಸುಮಾರು 80 ಮನೆಗಳಿದ್ದು, ಈ ಪ್ರದೇಶಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದ ಗ್ರಾಮ ಪಂಚಾಯಿತಿಯ 4 ಕೊಳವೆ ಬಾವಿಗಳ ಪೈಕಿ 3ರಲ್ಲಿ ನೀರು ಬರಿದಾಗಿತ್ತು. ಇನ್ನೊಂದರಲ್ಲೂ ನೀರು ಕಡಿಮೆಯಾಗಿತ್ತು. ಇದರಿಂದಾಗಿ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಎರಡು ದಿನಗಳಿಂದ ಸಮಸ್ಯೆ ಮತ್ತಷ್ಟು ತೀವ್ರಗೊಂಡಿತ್ತು.

ಈ ಕಾರಣದಿಂದ ಆರ್ಯಾಪು ಗ್ರಾಮ ಪಂಚಾಯಿತಿಯಿಂದ ಸಂಪ್ಯ-ಕೊಲ್ಯ ಸಮೀಪದ ಕಂಬಳದಡ್ಡದಲ್ಲಿ ಕೊಳವೆಬಾವಿ ಕೊರೆಯುವ ಜಾಗ ಗುರುತಿಸಿ, ಸೋಮವಾರ ಬೆಳಿಗ್ಗೆ ಕೊಳವೆಬಾವಿ ಕೊರೆಯುವ ಕೆಲಸ ಆರಂಭಿಸುತ್ತಿದ್ದಂತೆ ಆ ಪರಿಸರದ ಕೃಷಿಕರು ಬಂದು ಕೊಳವೆ ಬಾವಿ ಕೊರೆಯುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿ ತಡೆದರು. ಇಲ್ಲಿ ಕೊಳವೆ ಬಾವಿ ಕೊರೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದರು.

ಸ್ಥಳದಲ್ಲಿದ್ದ ಆರ್ಯಾಪು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ. ಅವರು ಮನವೊಲಿಸುವ ಪ್ರಯತ್ನ ಮಾಡಿದರೂ ಅಲ್ಲಿನ ಜನ ಒಪ್ಪಲಿಲ್ಲ. ಬಳಿಕ ಈ ವಿಚಾರವನ್ನು ಅವರು ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಇಒಗೆ ತಿಳಿಸಿದರು.

ತಹಶೀಲ್ದಾರ್ ಕುಞಿ ಅಹ್ಮದ್ ಮತ್ತು ತಾಲ್ಲೂಕು ಪಂಚಾಯಿತಿ ಇಒ ಹನಮ ರೆಡ್ಡಿ ಇಬ್ರಾಹಿಂಪುರ ಅವರು ಸ್ಥಳಕ್ಕೆ ಬಂದ ವೇಳೆಯೂ ಅಲ್ಲಿನ ಕೃಷಿಕರು ಕೊಳವೆ ಬಾವಿ ಕೊರೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ‌

ತಹಶೀಲ್ದಾರ್ ಆದೇಶ–ಕ್ರಮಕ್ಕೆ ಸೂಚನೆ: ತಹಶೀಲ್ದಾರ್ ಕುಞಿ ಅಹ್ಮದ್ ಅವರು ಕೊಳವೆಬಾವಿ ಕೊರೆಯಲು ಆದೇಶ ಮಾಡಿದ್ದು, ಅಗತ್ಯ ಬಿದ್ದರೆ ಸೆಕ್ಷನ್ 144 ಜಾರಿ ಮಾಡಿ. ತೊಂದರೆ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲಿದ್ದ ಸಂಪ್ಯ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ರಂಗಶ್ಯಾಮಯ್ಯ ಅವರಿಗೆ ಸೂಚಿಸಿದರು.

ತಹಶೀಲ್ದಾರ್‌ ಆದೇಶ ಮತ್ತು ಕಾನೂನು ಕ್ರಮದ ಎಚ್ಚರಿಕೆಯ ಬಳಿಕ ಪಟ್ಟು ಸಡಿಲಿಸಿದ ಅಲ್ಲಿನ ಕೃಷಿಕರು, ಇಲ್ಲಿ ಪಂಚಾಯಿತಿ ಕೊಳವೆ ಬಾವಿ ಕೊರೆದರೆ ನಮಗೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಹಾಗಾಗಿ ಭವಿಷ್ಯದಲ್ಲಿ ಈ ಪರಿಸರದ ನಾವು ಕೊಳವೆ ಬಾವಿ ಕೊರೆಯುವ ವೇಳೆ ಪಂಚಾಯಿತಿ ವತಿಯಿಂದ ತೊಂದರೆ ನೀಡಬಾರದು ಎಂದು ಷರತ್ತು ಹಾಕಿದರು. ಇದಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರು ಸಮ್ಮತಿ ಸೂಚಿಸಿದರು. ನಂತರ ಅಧಿಕಾರಿಗಳ ಮತ್ತು ಪೊಲೀಸರ ಉಪಸ್ಥಿತಿಯಲ್ಲಿ ಕೊಳವೆಬಾವಿ ಕೊರೆಯಲಾಯಿತು.

ಈ ಪರಿಸರದಲ್ಲಿ ಕೃಷಿ ಭೂಮಿ ಇದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇ ವತೆಗೆ ನಮ್ಮ ಖಾಸಗಿ ಕೊಳವೆ ಬಾವಿಯಿಂದ ನೀರು ಕೊಡಬೇಕೆಂದು ಕೇಳಿಕೊಂಡಾಗಲೂ ನಾವು ಅದಕ್ಕೆ ಒಪ್ಪಿಕೊಂಡಿದ್ದೆವು. ಆದರೆ, ಹಠಕ್ಕೆ ಬಿದ್ದು ಇಲ್ಲಿ ಕೊಳವೆಬಾವಿ ಕೊರೆಯುವ ಕೆಲಸ ಆಗಿದೆ. ರಾಜಕೀಯ ಪ್ರೇರಿತವಾಗಿ ಈ ಕೆಲಸ ನಡೆದಿದೆ ಎಂದು ಸ್ಥಳೀಯರಾದ ಪವನ್ ತಿಳಿಸಿದರು.

ಕೊಲ್ಯ ವ್ಯಾಪ್ತಿಯಲ್ಲಿ ಕಳೆದ ವಾರದಿಂದಲೇ ಕುಡಿಯುವ ನೀರಿನ ಸಮಸ್ಯೆ ಇತ್ತು. ಜಿಲ್ಲಾಧಿಕಾರಿ ಹಾಗೂ ಪುತ್ತೂರು ಉಪ ವಿಭಾಗಾಧಿಕಾರಿ ಸೂಚನೆಯಂತೆ ಪ್ರತಿ 2 ದಿನಗಳಿಗೊಮ್ಮೆ ಪಂಚಾಯಿತಿಯಿಂದ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿತ್ತು. ಕೊಳವೆಬಾವಿಗಳು ಬತ್ತಿಹೋಗಿ 2 ದಿನಗಳಿಂದ ನೀರಿನ ಸಮಸ್ಯೆ ತೀವ್ರವಾಗಿತ್ತು. ಕೊಳವೆ ಬಾವಿ ಕೊರೆಯಲು ಅಡಚಣೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೇವೆ. ಬಳಿಕ ಎಲ್ಲರೂ ಸಹಕಾರ ನೀಡಿದ್ದಾರೆ. ಸುಮಾರು 400ರಿಂದ 500 ಮಂದಿ ಇರುವ 80 ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ ಎಂದು ತಹಶೀಲ್ದಾರ್ ಕುಞಿ ಅಹ್ಮದ್ ತಿಳಿಸಿದರು.

ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಕಂಬಳದಡ್ಡ ಎಂಬಲ್ಲಿ ನೂತನ ಕೊಳವೆ ಬಾವಿ ಕೊರೆಯಲು ಗ್ರಾಮ ಪಂಚಾಯಿತಿ ಮುಂದಾದ ವೇಳೆ ಆ ಭಾಗದ ಕೃಷಿಕರು ಆಕ್ಷೇಪ ವ್ಯಕ್ತಪಡಿಸಿ ತಡೆದರು. ತಹಶೀಲ್ದಾರ್ ಕುಞಿ ಅಹ್ಮದ್ ತಾಲ್ಲೂಕು ಪಂಚಾಯಿತಿ ಇಒ ಹನಮ ರೆಡ್ಡಿ ಸಿಪಿಐ ರಂಗಶ್ಯಾಮಯ್ಯ ಅವರು ಸ್ಥಳೀಯರ ಮನವೊಲಿಸಿದರು
ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಕಂಬಳದಡ್ಡ ಎಂಬಲ್ಲಿ ನೂತನ ಕೊಳವೆ ಬಾವಿ ಕೊರೆಯಲು ಗ್ರಾಮ ಪಂಚಾಯಿತಿ ಮುಂದಾದ ವೇಳೆ ಆ ಭಾಗದ ಕೃಷಿಕರು ಆಕ್ಷೇಪ ವ್ಯಕ್ತಪಡಿಸಿ ತಡೆದರು. ತಹಶೀಲ್ದಾರ್ ಕುಞಿ ಅಹ್ಮದ್ ತಾಲ್ಲೂಕು ಪಂಚಾಯಿತಿ ಇಒ ಹನಮ ರೆಡ್ಡಿ ಸಿಪಿಐ ರಂಗಶ್ಯಾಮಯ್ಯ ಅವರು ಸ್ಥಳೀಯರ ಮನವೊಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT