ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಪಾಲಿಕೆಗೆ ಮತ್ತೆ ಮರಗಳ ಮೇಲೆ ಕಣ್ಣು!

ಬಾಬುಗುಡ್ಡದ ರುದ್ರಭೂಮಿಯಲ್ಲಿ ನೂರಾರು ಮರಗಳ ಕಡಿತಕ್ಕೆ ಪ್ರಸ್ತಾವ
Last Updated 4 ನವೆಂಬರ್ 2022, 6:42 IST
ಅಕ್ಷರ ಗಾತ್ರ

ಮಂಗಳೂರು: ನಗರದ ಅತ್ತಾವರ ವಾರ್ಡ್‌ನ ನಂದಿಗುಡ್ಡ–ಬಾಬುಗುಡ್ಡದಲ್ಲಿರುವ ಬ್ರಹ್ಮ ಸಮಾಜ ರುದ್ರಭೂಮಿಯಲ್ಲಿ ನೂರಾರು ಮರಗಳ ತೆರವಿಗೆ ಯತ್ನ ನಡೆಯುತ್ತಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ವಿಶಾಲವಾದ ಬ್ರಹ್ಮ ಸಮಾಜ ರುದ್ರಭೂಮಿಯಲ್ಲಿ ಅನೇಕರ ಸ್ಮಾರಕಗಳು ಇವೆ. ಇವುಗಳ ನಡುವೆ ವಿವಿಧ ಜಾತಿಯ ಮರಗಳು, ಸಸ್ಯಗಳು ಇದ್ದು ಇಡೀ ಪರಿಸರ ಹಸಿರಿನಿಂದ ತುಂಬಿ, ಮಿಯಾವಾಕಿ ಅರಣ್ಯದ ಅನುಭವ ನೀಡುತ್ತದೆ. ಇಲ್ಲಿ ಕುದ್ಮುಲ್ ರಂಗರಾವ್ ಅವರ ಸಮಾಧಿ ಕೂಡ ಇದೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಇಲ್ಲಿ ಪ್ರವಾಸಿ ತಾಣ ಹಾಗೂ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಮರ ತೆರವುಗೊಳಿಸಲು ಅನುಮತಿ ನೀಡುವಂತೆ, ಮಹಾನಗರ ಪಾಲಿಕೆಯ ಎಂಜಿನಿಯರಿಂಗ್ ವಿಭಾಗವು ನಾಲ್ಕು ತಿಂಗಳ ಹಿಂದೆ ವಲಯ ಅರಣ್ಯಾಧಿಕಾರಿಗೆ ಪತ್ರ ಬರೆದಿರುವ ಮಾಹಿತಿ ಲಭ್ಯವಾಗಿದೆ.

‘ನಾಲ್ಕು ವರ್ಷಗಳ ಹಿಂದೆ ಇಲ್ಲಿ ನಾಟಿ ಮಾಡಿರುವ ನೇರಳೆ, ಹೆಬ್ಬಲಸು, ಮಾವು, ಪುನರ್ಪುಳಿ, ದೂಪ, ಕದಂಬ ಸೇರಿದಂತೆ ಉತ್ತಮ ಜಾತಿಯ ಗಿಡಗಳು ಮುಗಿಲಿಗೆ ಮುಖ ಮಾಡಿ ಬೆಳೆದು ನಿಂತಿವೆ. ಜತೆಗೆ ಇಲ್ಲಿ 40 ವರ್ಷಕ್ಕೂ ಹಳೆಯ ದೇವದಾರು ಮರಗಳು ಇವೆ. ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡರೆ, 150ಕ್ಕೂ ಹೆಚ್ಚು ಮರ, ಗಿಡಗಳು ಕೊಡಲಿಗೆ ಬಲಿಯಾಗುತ್ತವೆ’ ಎಂಬುದು ಪರಿಸರ ಪ್ರೇಮಿಗಳ ಆಕ್ಷೇಪ.

‘1870ರಲ್ಲಿ ಬ್ರಿಟಿಷ್ ಸರ್ಕಾರ ಇರುವಾಗ ಬ್ರಹ್ಮ ಸಮಾಜ ಟ್ರಸ್ಟ್‌ಗೆ ಭೂಮಿ ಮಂಜೂರು ಆಗಿದೆ. ಇದರ ಕೇಂದ್ರ ಕಚೇರಿ ಕಲ್ಕತ್ತದಲ್ಲಿದೆ.
ಕುದ್ಮುಲ್ ರಂಗರಾವ್ ಸಮಾಧಿ ಇರುವಲ್ಲಿ ಸ್ಮಾರಕ ನಿರ್ಮಿಸಲು ನನ್ನ ತಂದೆಯವರ ಬಳಿ 22 ವರ್ಷಗಳ ಹಿಂದೆ ಪ್ರಸ್ತಾವ ಬಂದಿತ್ತು. ಅದನ್ನು ಕೇಂದ್ರ ಕಚೇರಿ ಮುಂದಿಟ್ಟಾಗ ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಅನುಮತಿ ದೊರೆಯಿತು. ಇಲ್ಲಿ ಈಗ ಮತ್ತೆ ಅಭಿವೃದ್ಧಿ ಹೆಸರಿನಲ್ಲಿ ನಿರ್ಮಾಣ ಕೈಗೊಳ್ಳಲು ಟ್ರಸ್ಟ್‌ಗೆ ಯಾವುದೇ ಮಾಹಿತಿ ದೊರೆತಿಲ್ಲ’ ಎನ್ನುತ್ತಾರೆ ಟ್ರಸ್ಟ್‌ ಮಾಜಿ ಅಧ್ಯಕ್ಷ ದೀಪಕ್ ತಲವಾರ್.

‘ಅಕ್ರಮವಾಗಿ ಇಲ್ಲಿ ಗಿಡ ಕಟಾವು ಮಾಡಲು ಮುಂದಾದರೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆಯಲಾಗುವುದು. ರುದ್ರಭೂಮಿ ಹಿಂಭಾಗದಲ್ಲಿ ಜಾಗ ಇದೆ. ಅಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಬಹುದು. ಇದರಿಂದ ಗಿಡಗಳು ಉಳಿದುಕೊಳ್ಳುತ್ತವೆ. ಕಟ್ಟಡ ನಿರ್ಮಿಸಲು ಕೂಡ ಸಾಧ್ಯವಾಗುತ್ತದೆ’ ಎಂದು ಅವರು ಸಲಹೆ ಮಾಡಿದರು.

‘ನಾನು 2018–19ರಲ್ಲಿ ಅರಣ್ಯ ಇಲಾಖೆ ಒದಗಿಸಿರುವ ಸುಮಾರು 870 ಗಿಡಗಳನ್ನು, ದಾನಿಗಳ ನೆರವಿನಲ್ಲಿ ಅಂದಾಜು ₹ 2 ಲಕ್ಷ ವೆಚ್ಚ ಮಾಡಿ ನಾಟಿ ಮಾಡಿದ್ದೇನೆ. ಬೇಸಿಗೆಯಲ್ಲಿ ನೀರು, ಗೊಬ್ಬರ ನೀಡಿ ಪೋಷಿಸಿರುವ ಗಿಡಗಳು ಆಳೆತ್ತರಕ್ಕೆ ಬೆಳೆದಿವೆ. ಮಂಗಳೂರಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಈಗಾಗಲೇ ಹಲವಾರು ಕಡೆಗಳಲ್ಲಿ ಹಸಿರು ನಾಶವಾಗಿದೆ. ಪರಿಸರಾಸಕ್ತರು, ಅರಣ್ಯ ಇಲಾಖೆ ಅಲ್ಲಲ್ಲಿ ನಾಟಿ ಮಾಡಿರುವ ಅಳಿದುಳಿದ ಗಿಡಗಳನ್ನಾದರೂ ಸಂರಕ್ಷಿಸಬೇಕು. ಗಿಡಗಳ ಕಟಾವಿಗೆ ಅನುಮತಿ ನೀಡಬಾರದು’ ಎಂದು ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್ ಅವರು ವಲಯ ಅರಣ್ಯಾಧಿಕಾರಿಗೆ ಪತ್ರ ಬರೆದು ವಿನಂತಿಸಿದ್ದಾರೆ.

‘ಪಾಲಿಕೆ ಜಾಗದಲ್ಲಿ ಯೋಜನೆ’

‘ಸರ್ಕಾರದ ಹೆಸರಿನಲ್ಲಿ ಈ ಜಮೀನು ಇದ್ದು, 50 ಸೆಂಟ್ಸ್ ಜಾಗ ಮಾತ್ರ ಮಹಾನಗರ ಪಾಲಿಕೆಗೆ ದೊರೆತಿದೆ. ಈ ಜಾಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಚಿಸಲಾಗಿದೆ. ಖಾಲಿ ಜಾಗ ಪಾಲಿಕೆಯ ವ್ಯಾಪ್ತಿಯಲ್ಲಿಲ್ಲ. ಪರ್ಯಾಯ ಸ್ಥಳ ಲಭ್ಯವಿದ್ದಲ್ಲಿ ಖಂಡಿತ ಮರ–ಗಿಡಗಳನ್ನು ಉಳಿಸುವ ಪ್ರಯತ್ನ ಮಾಡುತ್ತೇವೆ’ ಎಂದು ಮಹಾನಗರ ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿದರು.

ಪರ್ಯಾಯ ವ್ಯವಸ್ಥೆಗೆ ಸಲಹೆ

ಮಹಾನಗರ ಪಾಲಿಕೆಯು ಯೋಜಿತ ಕಟ್ಟಡ ನಿರ್ಮಾಣ ಸ್ಥಳವನ್ನು ಬದಲಾಯಿಸಿದರೆ, ಹಸಿರನ್ನು ಉಳಿಸಿಕೊಂಡು ಈ ತಾಣವನ್ನು ಅಭಿವೃದ್ಧಿಪಡಿಸಬಹುದು. ಇದೇ ರುದ್ರಭೂಮಿಯ ಒಂದು ಭಾಗದಲ್ಲಿ ಖಾಲಿ ಸ್ಥಳ ಇದ್ದು, ಅಲ್ಲಿ ಕಟ್ಟಡ ನಿರ್ಮಿಸಿದರೆ, ರಸ್ತೆ ಸಂಪರ್ಕ ಕೂಡ ಸುಲಭವಾಗುತ್ತದೆ. ಅಲ್ಲದೆ, ಕುದ್ಮುಲ್ ರಂಗರಾವ್ ಅವರ ಸಮಾಜಮುಖಿ ಆಶಯಕ್ಕೆ ಇದು ಪೂರಕವಾಗುತ್ತದೆ. ಉದ್ಯಾನದ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಿದರೆ, ಜನರಿಗೆ ನೆರಳು, ಉತ್ತಮ ಗಾಳಿ ಸಿಗುತ್ತದೆ ಎಂಬುದು ಪರಿಸರ ಪ್ರೇಮಿಗಳ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT