ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮಗಂಟು ರೋಗ: ಬೂಸ್ಟರ್ ಡೋಸ್ ಲಸಿಕೆ

ಕೆಎಂಎಫ್‌ ಸಹಯೋಗದಲ್ಲಿ ಅನುಷ್ಠಾನ; 17ಸಾವಿರ ಡೋಸ್ ಲಸಿಕೆ ಲಭ್ಯ
Published 23 ಮೇ 2023, 16:24 IST
Last Updated 23 ಮೇ 2023, 16:24 IST
ಅಕ್ಷರ ಗಾತ್ರ

ಮಂಗಳೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಸವಾಲಾಗಿದ್ದ ಜಾನುವಾರು ಚರ್ಮಗಂಟು ರೋಗ ಜಿಲ್ಲೆಯಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಸದ್ಯದಲ್ಲಿ ಒಂದು ಪ್ರಕರಣವೂ ಇಲ್ಲವಾಗಿದೆ. ಆದರೆ, ರೋಗ ಮತ್ತೆ ಬರದಂತೆ ಎಚ್ಚರವಹಿಸಲು ಇಲಾಖೆಯು ಎಲ್ಲ ಜಾನುವಾರುಗಳಿಗೆ ಬೂಸ್ಟರ್‌ ಡೋಸ್ ಲಸಿಕೆ ನೀಡಲು ಸಿದ್ಧತೆ ನಡೆಸಿದೆ.

ಜಿಲ್ಲೆಯಲ್ಲಿ ಸ್ಥಳೀಯ 65,997, ಮಿಶ್ರ ತಳಿಯ 1,84,572 ಹಸುಗಳು ಸೇರಿ ಒಟ್ಟು 2,50,569 ಹಸುಗಳು ಇವೆ. ಇವುಗಳಿಗೆ ಬೂಸ್ಟರ್‌ ಡೋಸ್ ಲಸಿಕೆ ನೀಡಲು ಇಲಾಖೆ ತಯಾರಿ ನಡೆಸಿದ್ದು, ಸದ್ಯದಲ್ಲಿ ಈ ಹಿಂದೆ ಬಂದಿರುವ 17ಸಾವಿರ ಡೋಸ್ ಲಸಿಕೆಗಳು ಮಾತ್ರ ಲಭ್ಯ ಇವೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ಕೆಎಂಎಫ್ ಸಿಬ್ಬಂದಿ ನೆರವಿನಲ್ಲಿ ಇಲಾಖೆಯು ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಿದೆ.

ಚರ್ಮಗಂಟು ರೋಗದಿಂದ ಜಿಲ್ಲೆಯಲ್ಲಿ ಒಟ್ಟು 456 ಜಾನುವಾರುಗಳು ಮೃತಪಟ್ಟಿದ್ದು, 352 ಜಾನುವಾರುಗಳ ಮಾಲೀಕರಿಗೆ ಒಟ್ಟು ₹65.05 ಲಕ್ಷ ಪರಿಹಾರ ನೀಡಲಾಗಿದೆ. ಇನ್ನುಳಿದವರಿಗೆ ಸರ್ಕಾರದಿಂದ ಹಣ ಬಿಡುಗಡೆಯಾದ ತಕ್ಷಣ ವಿತರಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ಈಗಾಗಲೇ ಜಿಲ್ಲೆಯಲ್ಲಿ ಕಂದುರೋಗ (ಬ್ರುಸೆಲ್ಲೋಸಿಸ್) ನಿಯಂತ್ರಣಕ್ಕೆ 4ರಿಂದ 8 ತಿಂಗಳ ಹೆಣ್ಣು ಕರುಗಳಿಗೆ ಲಸಿಕೆ ನೀಡಲಾಗುತ್ತಿದೆ. ಒಟ್ಟು 421 ಹೆಣ್ಣು ಕರುಗಳನ್ನು ಗುರುತಿಸಿದ್ದು, ಈವರೆಗೆ 409 ಕರುಗಳಿಗೆ ಲಸಿಕೆ ನೀಡಲಾಗಿದೆ. ವರ್ಷದಲ್ಲಿ ಮೂರು ಬಾರಿ ಈ ಅಭಿಯಾನ ನಡೆಯುತ್ತದೆ.

ಮೂಗಿನ ಮಾದರಿ ಸಂಗ್ರಹಕ್ಕೆ ಯೋಜನೆ: ಪಶುಗಳಿಗೆ ಆಧಾರ್ ಮಾದರಿಯಲ್ಲಿ 12 ಅಂಕೆಗಳ ಗುರುತಿನ ಸಂಖ್ಯೆ ನೀಡುವ ಕೇಂದ್ರ ಸರ್ಕಾರದ ಯೋಜನೆಯ ಮುಂದುವರಿದ ಭಾಗವಾಗಿ ಈ ಯೋಜನೆಗೆ ಇನ್ನಷ್ಟು ನಿಖರತೆ ನೀಡುವ ಉದ್ದೇಶದಿಂದ ಜಾನುವಾರುಗಳ ಮೂತಿಯ ಮಾದರಿಯನ್ನು (muzzle pattern) ಬಯೊಮೆಟ್ರಿಕ್ ರೂಪದಲ್ಲಿ ಸಂಗ್ರಹಿಸಲು ಕಾರ್ಯಕ್ರಮ ರೂಪಿಸಲಾಗಿದೆ.

ಪ್ರಾಯೋಗಿಕ ನೆಲೆಯಲ್ಲಿ ರಾಜ್ಯದ 30 ಜಿಲ್ಲೆಗಳ ಒಟ್ಟು 5 ಲಕ್ಷ ಜಾನುವಾರುಗಳು ಮೂಗಿನ ಮಾದರಿ ಸಂಗ್ರಹಿಸಲಾಗುತ್ತದೆ. ಡಿಪಿಎಆರ್‌, ಇ-ಗವರ್ನೆನ್ಸ್‌ ಇಲಾಖೆಯವರು ಇದಕ್ಕೆ ಬೇಕಾದ ಸಾಫ್ಟ್‌ವೇರ್‌ ಹಾಗೂ ಆ್ಯಪ್‌ಗಳ ಸೇವೆಯನ್ನು ಒದಗಿಸಲಿದ್ದಾರೆ. ಪಶುಸಂಗೋಪನಾ ಇಲಾಖೆಯವರು ಮೈತ್ರಿ ಕಾರ್ಯಕರ್ತರು, ಪಶುಸಖಿಯರು, ವಿವಿಧ ವೃಂದದ ಪಶುವೈದ್ಯ ಪರೀಕ್ಷಕರು, ಜಾನುವಾರು ಅಧಿಕಾರಿಗಳು, ಜಾನುವಾರು ಅಭಿವೃದ್ಧಿ ಅಧಿಕಾರಿಗಳ ಮೂಲಕ ಆಕಳು, ಎತ್ತು, ಎಮ್ಮೆ, ಕೋಣ, ಕರುಗಳು ಸೇರಿದಂತೆ ಜಾನುವಾರುಗಳ ಮೂಗಿನ ವಿನ್ಯಾಸವನ್ನು ಬಯೊಮೆಟ್ರಿಕ್ ರೂಪದಲ್ಲಿ ಸಂಗ್ರಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT