ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರು ಹಂಚಿಕೆ: ರಾಜಕೀಯ ಅಗತ್ಯವಿಲ್ಲ –ಕೆ.ಅಣ್ಣಾಮಲೈ

Published 23 ಏಪ್ರಿಲ್ 2024, 13:10 IST
Last Updated 23 ಏಪ್ರಿಲ್ 2024, 13:10 IST
ಅಕ್ಷರ ಗಾತ್ರ

ಮಂಗಳೂರು: ‘ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ, ತಮಿಳುನಾಡು ಎರಡೂ ರಾಜ್ಯಗಳಿಗೆ ಒಳ್ಳೆಯದಾಗಬೇಕು. ಎರಡು ರಾಜ್ಯಗಳವರು ಅಣ್ಣ– ತಮ್ಮಂದಿರಂತೆ ಇದ್ದು, ರಾಜಕೀಯ ಬಿಟ್ಟು ಚಿಂತಿಸಬೇಕು’ ಎಂದು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅಭಿಪ್ರಾಯಪಟ್ಟರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ನೀರಿನ ಸಮಸ್ಯೆ ಇರುವುದು ಶೇಕಡಾ ನೂರರಷ್ಟು ಸತ್ಯ. ಕಾಂ‌ಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದ ಸಮಸ್ಯೆ ಸೃಷ್ಟಿಯಾಗಿದೆ. ತಮಿಳುನಾಡಿನ ಸಾವಿರಾರು ಜನರು ಕರ್ನಾಟಕದಲ್ಲಿ, ಇಲ್ಲಿನ ಸಾವಿರಾರು ಜನರು ತಮಿಳುನಾಡಿನಲ್ಲಿ ಉದ್ಯೋಗದಲ್ಲಿದ್ದಾರೆ. ಎರಡೂ ರಾಜ್ಯಗಳಿಗೆ ಸಮಾನ ನ್ಯಾಯ ದೊರೆಯಬೇಕು. ಈ ನಿಟ್ಟಿನಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಸರ್ಕಾರ ನಿರ್ಣಯ ಕೈಗೊಳ್ಳುತ್ತವೆ’ ಎಂದರು.

ಸುಪ್ರೀಂ ಕೋರ್ಟ್ ಆದೇಶ ಇದೆ, ನೀರು ಹಂಚಿಕೆ ಸೂತ್ರದ ಪ್ರಕಾರವೇ ನಡೆಯುತ್ತದೆ. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದರು. 

ತುಲನೆ ಮಾಡಲಿ: ಕರ್ನಾಟಕಕ್ಕೆ ಬರ ಪರಿಹಾರ ಕುರಿತ ಪ್ರಶ್ನೆಗೆ, ರಾಜ್ಯ ಸರ್ಕಾರವು ಎನ್‌ಡಿಎ ಮತ್ತು ಯುಪಿಎ ಅವಧಿಯಲ್ಲಿ ಬಿಡುಗಡೆಯಾದ ಪರಿಹಾರ ಮೊತ್ತ ತುಲನೆ ಮಾಡಲಿ ಎಂದು ಸವಾಲು ಹಾಕಿದರು.

‘ಎನ್‌ಡಿಎ ಸರ್ಕಾರ ಯಾವ ರಾಜ್ಯಕ್ಕೂ ತಾರತಮ್ಯ ಮಾಡಿಲ್ಲ. ನ್ಯಾಯ ಸೂತ್ರ ಆಧರಿಸಿ ಪರಿಹಾರ ಮೊತ್ತ ನೀಡಿದೆ. ಕರ್ನಾಟಕ ಸರ್ಕಾರ ₹18 ಸಾವಿರ ಕೋಟಿ ಬರ ಪರಿಹಾರದ ಬೇಡಿಕೆ ಇಟ್ಟು, ಇದನ್ನು ಚುನಾವಣೆ ರಾಜಕೀಯದ ತಂತ್ರವಾಗಿ ಮಾರ್ಪಾಡಿಸಿಕೊಂಡಿದೆ’ ಎಂದು ಆರೋಪಿಸಿದರು.

‘ಹುಬ್ಬಳ್ಳಿಯ ನೇಹಾ ಪ್ರಕರಣವನ್ನು ಬಿಜೆಪಿ ಮಾನವೀಯ ನೆಲೆಯಲ್ಲಿ ಸ್ಪಂದಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಓಲೈಕೆ ರಾಜಕಾರಣ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ ಎಂದು ಹೇಳಿದರು. ರಾಜ್ಯದ ಗೃಹ ಸಚಿವರು ಬಳಸಿದ ಭಾಷೆಯನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT