ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಯ | ಗುಂಪಿಗೆ ಸೇರದ ಮರಿಯಾನೆಗೆ ಅರಣ್ಯ ಇಲಾಖೆ ರಕ್ಷಣೆ

Last Updated 14 ಏಪ್ರಿಲ್ 2023, 7:37 IST
ಅಕ್ಷರ ಗಾತ್ರ

ಸುಳ್ಯ(ದಕ್ಷಿಣ ಕನ್ನಡ): ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ರಕ್ಷಣೆ ಮಾಡಿರುವ ಮರಿಯಾನೆ ಸದ್ಯ ಅರಣ್ಯ ಇಲಾಖೆಯ ರಕ್ಷಣೆಯಲ್ಲಿದೆ.

ಗುರುವಾರ ತುದಿಯಡ್ಕದ ರೈತರ ಜಮೀನಿನಲ್ಲಿರುವ ದೊಡ್ಡ ಹೊಂಡ (ಕೆರೆ)ದಲ್ಲಿ ಎರಡು ದೊಡ್ಡ ಆನೆಗಳು ಮತ್ತು ಎರಡು ಮರಿ ಆನೆಗಳು ಅಕಸ್ಮತ್ತಾಗಿ ಬಿದ್ದಿದ್ದವು. ಅದರಲ್ಲಿ ಮೂರು ಆನೆಗಳು ಕಷ್ಟಪಟ್ಟು ಕೆರೆಯಿಂದ ಮೇಲೆ ಬಂದಿದ್ದರೆ, ಸುಮಾರು ಮೂರು ತಿಂಗಳ ಒಂದು ಮರಿಯಾನೆ ಮೇಲೆ ಬರಲಾಗದೆ ಕುಸಿದು ಬೀಳುತ್ತಿತ್ತು. ಅರಣ್ಯ ಇಲಾಖೆಯವರು ಮತ್ತು ಸ್ಥಳೀಯರು ಕೆರೆಗಿಳಿದು ಈ ಮರಿಯಾನೆಯನ್ನು ತಳ್ಳಿ ಮೇಲಕ್ಕೆ ಹತ್ತಿಸಿದ್ದರು.

ನಂತರ ಕಾಡಿನೆಡೆಗೆ ಸಾಗಿದ್ದ ಆನೆಗಳ ಜತೆ ಮರಿಯಾನೆಯನ್ನು ಬಿಡಲಾಗಿತ್ತು. ಅದು ತಾಯಿ ಜೊತೆ ಹೋಗದೆ ಸಂಜೆ ವೇಳೆಗೆ ಮತ್ತೆ ರಬ್ಬರ್ ತೋಟಕ್ಕೆ ಮರಳಿತ್ತು.

‘ಮರಿಯಾನೆಯನ್ನು ಮನುಷ್ಯರು ಮುಟ್ಟಿ ಮೇಲಕ್ಕೆ ಹತ್ತಿಸಿದ್ದರಿಂದ ಆನೆಗಳು ಅದನ್ನು ಸ್ವೀಕರಿಸುತ್ತಿಲ್ಲ ಎಂದು ಸ್ಥಳೀಯರು ಅನುಮಾನಿಸಿದ್ದರು. ಮನುಷ್ಯರು ಮುಟ್ಟಿದರೆ ಅಂತಹ ಮರಿಗಳನ್ನು ಆನೆಗಳು ಸ್ವೀಕರಿಸುವುದಿಲ್ಲವೇ, ಹಾಗಿದ್ದರೆ ಆನೆಗಳನ್ನು ಮನುಷ್ಯರು ಸಾಕಿ ಸಲಹುತ್ತಿರುವುದಾದರೂ ಹೇಗೆ, ಎಂಬ ಪ್ರಶ್ನೆಗಳು ಕೂಡ ಸ್ಥಳೀಯರ ನಡುವೆ ಚರ್ಚೆಯಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ಅವರು, ಅಂತಹ ಸಾಧ್ಯತೆ ಇಲ್ಲ ಎಂದಿದ್ದಾರೆ. ‘ಮರಿ ಆನೆ ದೊಡ್ಡ ಆನೆಗಳ ಹಿಂಡಿನಿಂದ ಸುಮಾರು 200 ಮೀಟರ್ ದೂರದಲ್ಲಿಇದೆ. ಒಮ್ಮೆ ಅದನ್ನು ಆನೆ ಹಿಂಡಿನ ಬಳಿಗೆ ಬಿಟ್ಟು ಬಂದೆವು. ಆದರೆ ಅದು ಮರಳಿ ಬಂದಿದೆ. ಈ ಬಗ್ಗೆ ನಾವು ಮೈಸೂರಿನ ನಾಗರಹೊಳೆ ಅಭಯಾರಣ್ಯದ ಆನೆ ತಜ್ಞ ಡಾ. ಮುಜೀಬ್‌ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ, ಆನೆಗಳಲ್ಲಿ ಆ ರೀತಿಯ ಗುಣಧರ್ಮ ಇಲ್ಲ. ಆದರೆ ಕೆಲವು ಆನೆಗಳು ಒಂದೇ ದಿನದಲ್ಲಿ ಮರಿಯೊಂದಿಗಿನ ಅಟ್ಯಾಚ್‌ಮೆಂಟ್ ಕಳೆದುಕೊಳ್ಳಬಹುದು ಅಥವಾ ತಾಯಿ ಆನೆಯ ಕೆಚ್ಚಲಿನಲ್ಲಿ ಏನಾದರೂ ನೋವಿದ್ದರೆ ಅದು ಮರಿಯನ್ನು ದೂರವಿಡಬಹುದು ಎಂದು ತಿಳಿಸಿದ್ದಾರೆ’ ಎಂದು ವಿವರಿಸಿದರು.

‘ನಾವು ನೋಡಿದ ಪ್ರಕಾರ ಆನೆಯ ಕೆಚ್ಚಲಿನಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ. ಆದರೂ ಮರಿ ಯಾಕೆ ಗುಂಪು ಸೇರುತ್ತಿಲ್ಲ ಎಂದು ಗೊತ್ತಾಗುತ್ತಿಲ್ಲ. ಗುಂಪಿಗೆ ಸೇರಿಸಲು ಪ್ರಯತ್ನ ನಡೆಸುವಂತೆ ಡಾ. ಮುಜೀಬ್ ಅವರು ನಮಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಪ್ರಯತ್ನ ನಡೆಸುತ್ತಿದ್ದೇವೆ. ಈಗ ಆನೆಯ ಹಿಂಡು ಬೆಳ್ಳಪ್ಪಾರೆ ಬಳಿ ಇದೆ.
ಅವು ಮತ್ತೆ ತುದಿಯಡ್ಕ ಕಡೆಗೆ ನೀರು ಕುಡಿಯಲು ಬರುವ ನಿರೀಕ್ಷೆ ಇದ್ದು, ಆ ಸಂದರ್ಭದಲ್ಲಿ ಮತ್ತೆ ಗುಂಪಿನತ್ತ ಮರಿಯನ್ನು ಕರೆದೊಯ್ಯುತ್ತೇವೆ. ಅಲ್ಲಿಯವರೆಗೆ ನಮ್ಮ ಇಬ್ಬರು ಸಿಬ್ಬಂದಿ ಆನೆ ಮರಿಗೆ ಕಾವಲಾಗಿ ನಿಂತಿರುತ್ತಾರೆ. ಮರಿ ಗುಂಪಿಗೆ ಸೇರಿಸಲು ಸಾಧ್ಯವೇ ಆಗದಿದ್ದರೆ ಅದನ್ನು ಆನೆ ಶಿಬಿರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸಾಕುವ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಮಂಜುನಾಥ್ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT