ಭಾನುವಾರ, ಜುಲೈ 3, 2022
26 °C
ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕರ ಪ್ರತಿಭಟನೆ

ಕಾರ್ಪೊರೇಟ್‌ ಕಂಪನಿಗಳ ಏಜೆಂಟ್‌: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರೈತ, ಕಾರ್ಮಿಕ ವಿರೋಧಿಯಾದ ಕೃಷಿ ಕಾಯ್ದೆಗಳು, ಕಾರ್ಮಿಕ ಸಂಹಿತೆಗಳು, ವಿದ್ಯುತ್ ಮಸೂದೆಗಳ ವಾಪಸಾತಿ, ನರೇಗಾ ಯೋಜನೆಯ ವಿಸ್ತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದಾದ್ಯಂತ ಕಾರ್ಮಿಕರು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಮಿನಿ ವಿಧಾನಸೌಧದ ಎದುರು ಸಿಐಟಿಯು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ವಸಂತ ಅಚಾರಿ ಮಾತನಾಡಿ, ‘ಜನರಲ್ಲಿದ್ದ ಆಕ್ರೋಶವನ್ನು ಬಂಡವಾಳವನ್ನಾಗಿ ಮಾಡಿಕೊಂಡ ದೇಶದ ಆಳುವ ವರ್ಗ, ಎಲ್ಲ ಸಮಸ್ಯೆಗಳಿಗೆ ನರೇಂದ್ರ ಮೋದಿ ಉತ್ತರ ಎಂಬಂತೆ ಭ್ರಮೆ ಸೃಷ್ಟಿಸಿ, ಒಳ್ಳೆಯ ದಿನಗಳು ಬರಲಿವೆ ಎಂಬ ಸುಳ್ಳಿನ ಕಂತೆಯನ್ನೇ ಸೃಷ್ಟಿಸಿತು. ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರ್ಕಾರವು 6 ವರ್ಷಗಳಲ್ಲಿ ರೈತರು, ಕಾರ್ಮಿಕರು ಸೇರಿದಂತೆ ಜನಸಾಮಾನ್ಯರ ಬದುಕನ್ನೇ ನರಕವನ್ನಾಗಿಸಿದೆ. ಅಂಬಾನಿ ಅದಾನಿಗಳ ಹಿತ ಕಾಯುವ ಮೂಲಕ ಕಾರ್ಪೊರೇಟ್ ಕಂಪನಿಗಳ ಏಜೆಂಟ್ ಎಂಬುದನ್ನು ಸಾಬೀತುಪಡಿಸಿತು’ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ರೈತರು 45 ದಿನಗಳಿಂದ ಹೋರಾಟದ ಮಾಡುತ್ತಿದ್ದರೂ, ಅವರ ಬೇಡಿಕೆಗಳಿಗೆ ಸ್ಪಂದಿಸುವ ಎದೆಗಾರಿಕೆ ನರೇಂದ್ರ ಮೋದಿಗೆ ಇಲ್ಲವಾಯಿತು. ಸಂಸತ್ತಿನಲ್ಲಿ ಚರ್ಚೆ ನಡೆಸದೇ ಸುಗ್ರೀವಾಜ್ಞೆಗಳ ಮೂಲಕ ಕೃಷಿ ಶಾಸನಗಳನ್ನು ಜಾರಿಗೆ ತರಲು ಹೊರಟ ಕೇಂದ್ರ ಸರ್ಕಾರ ನಿಜಕ್ಕೂ ದೇಶದ್ರೋಹಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ‘ದೇಶದ ಜನರ ಬದುಕನ್ನು ಬಲಿ ಕೊಟ್ಟು, ಅದಾನಿ, ಅಂಬಾನಿಗಳಿಗಾಗಿ ದೇಶದ ಸರ್ವ ಸಂಪತ್ತನ್ನು ಧಾರೆ ಎರೆದು ಕೊಡುವ ದೇಶದ್ರೋಹಿ ಸರ್ಕಾರವನ್ನು ಶೀಘ್ರದಲ್ಲೇ ಕಿತ್ತೆಸೆಯಬೇಕಾಗಿದೆ’ ಎಂದರು.

ರೈತ ಸಂಘಟನೆ ನಾಯಕ ವಾಸುದೇವ ಉಚ್ವಿಲ್, ಸಿಐಟಿಯು ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ಜಯಂತ ನಾಯಕ್, ಜಯಂತಿ ಶೆಟ್ಟಿ, ಭಾರತಿ ಬೋಳಾರ, ಬಾಬು ದೇವಾಡಿಗ, ಜಯಲಕ್ಷ್ಮಿ, ದಿನೇಶ್ ಶೆಟ್ಟಿ, ವಿಲಾಸಿನಿ, ಜನಾರ್ದನ ಕುತ್ತಾರ್ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು