ಶನಿವಾರ, ಡಿಸೆಂಬರ್ 7, 2019
21 °C
ಪುತ್ತೂರಿನಲ್ಲಿ ಎಂಜಿನಿಯರ್‌ಗಳ ದಿನಾಚರಣೆ

ಭೌಗೋಳಿಕತೆ ಆಧರಿಸಿ ರಸ್ತೆ ನಿರ್ಮಿಸಿ: ಸರ್ಕಾರಕ್ಕೆ ತಜ್ಞರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ಅವಿಭಜಿತ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಪ್ರಾಕೃತಿಕ, ಭೌಗೋಳಿಕ  ಗುಣಲಕ್ಷಣಗಳಿಗೆ ಅನುಗುಣವಾಗಿ ರಸ್ತೆಗಳನ್ನು ನಿರ್ಮಾಣ ಮಾಡುವಂತೆ ಸರ್ಕಾರವನ್ನು ಆಗ್ರಹಿಸಲು ಭಾನುವಾರ ಪುತ್ತೂರಿನಲ್ಲಿ ನಡೆದ ‘ಎಂಜಿನಿಯರ್‌ಗಳ ದಿನಾಚರಣೆ’ಯಲ್ಲಿ  ನಿರ್ಣಯ ಕೈಗೊಳ್ಳಲಾಯಿತು.

ಪುತ್ತೂರಿನ ಕಲ್ಲೇಗದಲ್ಲಿ ಇರುವ ಮಾಸ್ಟರ್ ಪ್ಲಾನರಿಯ ‘ಸರ್ ಎಂ.ವಿ.ಸಭಾಂಗಣ’ದಲ್ಲಿ ಕೊಡಗು ಜಿಲ್ಲೆಯ ‘ದಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್’, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್, ಇನ್‌ಸ್ಟಿಟ್ಯೂಟ್ ಆಫ್ ವ್ಯಾಲ್ಯೂವರ್ಸ್‌ ಹಾಗೂ ಪುತ್ತೂರು ಪೇಸ್ ಸಹಯೋಗದಲ್ಲಿ ಮೋಕ್ಷಗೊಂಡಂ ಸರ್ ವಿಶ್ವೇಶ್ವರಯ್ಯ ಜನ್ಮದಿನಾಚರಣೆ (‘ಎಂಜಿನಿಯರ್‌ಗಳ ದಿನಾಚರಣೆ’) ನಡೆಯಿತು.

‘ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಕೊಡುಗು ಪ್ರದೇಶ ಗುಡ್ಡಬೆಟ್ಟಗಳ ಭೌಗೋಳಿಕ ಪರಿಸರ, ಅತಿಯಾಗಿ ಸುರಿಯುವ ಮಳೆ, ನೆಲದಿಂದ ನೀರು ಒಸರುವ ಭೂಮಿಯ ಲಕ್ಷಣ ಮುಂತಾದ ಕಾರಣಗಳಿಂದಾಗಿ  ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮಳೆಗಾಲದಲ್ಲಿ ಕಿತ್ತುಹೋಗಿ ಅವ್ಯವಸ್ಥೆಗೆ ಕಾರಣವಾಗುತ್ತಿದೆ. ಪ್ರತೀ ವರ್ಷ ರಸ್ತೆಗಳ ಹಾನಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಬೀಳುತ್ತದೆ’ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಪ್ರತೀ ವರ್ಷ ಮಳೆಗಾಲದಲ್ಲಿ ರಸ್ತೆಗಳು ಹದಗೆಡುತ್ತಿರುವುದರಿಂದ ಸರ್ಕಾರದ ತೆರಿಗೆಯ ಹಣ ವ್ಯರ್ಥವಾಗುತ್ತಿರುವ ಕುರಿತು ಸಭೆಯಲ್ಲಿ ಪಾಲ್ಗೊಂಡಿದ್ದ ಸಿವಿಲ್ ಎಂಜಿನಿಯರ್‌ಗಳು ತಮ್ಮ ಅಭಿಪ್ರಾಯ ಹಾಗೂ ಕಳವಳ ವ್ಯಕ್ತಪಡಿಸಿದರು. ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧಕರಿರುವ ಈ ಭಾಗದಲ್ಲಿ ಅತ್ಯಂತ ಕಳಪೆ ಮಟ್ಟದ ರಸ್ತೆಗಳು ಇರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

ದಿನಾಚರಣೆ ಉದ್ಘಾಟಿಸಿದ ತೂಗು ಸೇತುವೆ ತಜ್ಞ ಗಿರೀಶ್ ಭಾರದ್ವಾಜ್ , ‘ಸರ್ ಎಂ. ವಿಶ್ವೇಶ್ವರಯ್ಯ ಅವರ ಆದರ್ಶ, ಪ್ರತಿಭೆ, ಪ್ರಾಮಾಣಿಕತೆ, ನಿಷ್ಕಪಟತೆ, ನ್ಯಾಯನಿಷ್ಠ ಪಾರದರ್ಶಕ ಬದುಕು ಪ್ರತಿಯೊಬ್ಬ ಎಂಜಿನಿಯರ್‌ಗೆ ಆದರ್ಶವಾಗಿರಬೇಕು. ಯುವ ಎಂಜಿನಿಯರ್‌ಗಳು ಕೌಶಲ ಮತ್ತು ಕಾರ್ಯ ತತ್ಪರತೆಯೊಂದಿಗೆ ಕ್ರೀಯಾಶೀಲರಾಗಿ ಸಾಧನೆ ಮಾಡಬೇಕು’ ಎಂದರು.

ಅಡಿಕೆ ಮರವನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಏರಬಲ್ಲ ಯಂತ್ರವನ್ನು ಆವಿಷ್ಕರಿಸಿದ ಕೃಷಿ ಸಂಶೋಧಕ ಗಣಪತಿ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘಟನಾ ಸಂಸ್ಥೆಗಳ ಪದಾಧಿಕಾರಿಗಳಾದ ಆನಂದ ಕುಮಾರ್ ಕೆ.ಎಸ್., ಡಾ. ಕೆ.ಎಸ್. ಬಾಬು ನಾರಾಯಣ, ಪಿ.ಡಿ. ಕಾಂತರಾಜ್, ಎಚ್.ಎಲ್. ರಾವ್ ಇದ್ದರು. ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಸಿವಿಲ್ ಎಂಜಿನಿಯರ್‌ಗಳು ಪಾಲ್ಗೊಂಡಿದ್ದರು.

ಪುತ್ತೂರು ಪೇಸ್ ಅಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಸಿವಿಲ್ ಎಂಜಿನಿಯರ್‌ಗಳ ಅಸೋಸಿಯೇಶನ್ ಕಾರ್ಯದರ್ಶಿ ಎಂ. ದಿವಾಕರ ಶೆಟ್ಟಿ ವಂದಿಸಿದರು. ಸಿವಿಲ್ ಎಂಜಿನಿಯರ್ ಕೆ. ವಸಂತ ಭಟ್ ನಿರೂಪಿಸಿದರು.

ಪ್ರತಿಕ್ರಿಯಿಸಿ (+)