ಸೋಮವಾರ, ಅಕ್ಟೋಬರ್ 18, 2021
23 °C
ಇಂಧನ ಪೂರೈಕೆಯಲ್ಲಿ ತೊಂದರೆ: ವಾಹನ ಮಾಲೀಕರಿಗೆ ಸಂಕಷ್ಟ, ಅಸಮಾಧಾನ

ಸಿಎನ್‌ಜಿಗೆ ಬದಲಿಸುವ ನಿರ್ಧಾರ ಮುಂದೂಡಿ: ಶ್ರೀನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲೆಯಲ್ಲಿ ಸಿಎನ್‌ಜಿ ಚಾಲಿತ ವಾಹನಗಳ ಖರೀದಿ ಹೆಚ್ಚುತ್ತಿದ್ದರೂ, ನಿಗದಿತ ಪೆಟ್ರೋಲ್ ಬಂಕ್‌ಗಳಲ್ಲಿ ಮೂಲ ಸೌಕರ್ಯ ಹಾಗೂ ಸಿಎನ್‌ಜಿ ಅನಿಲದ ಕೊರತೆಯಿಂದ ಬಳಕೆದಾರರು ಸಮಸ್ಯೆ ಎದುರಿಸುವಂತಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಿಎನ್‌ಜಿ ಬಳಕೆದಾರರ ಸಂಘ ಹಾಗೂ ನಾಗರಿಕ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎನ್‌ಜಿ ಬಳಕೆದಾರರ ಸಂಘದ ಸ್ಥಾಪಕ ಅಧ್ಯಕ್ಷ ಶ್ರೀನಾಥ್, ಪೆಟ್ರೋಲಿಯಂ ಉತ್ಪನ್ನಗಳಿಗೆ ಪರ್ಯಾಯವಾಗಿ ಸಿಎನ್‌ಜಿ ಇಂಧನ ಪೂರೈಕೆಯನ್ನು ಗೇಲ್ ಸಂಸ್ಥೆ ಆರಂಭಿಸಿತ್ತು. ಆದರೆ ಸಿಎನ್‌ಜಿ ವಾಹನ ಖರೀದಿಸಿದವರೇ ಇಂಧನಕ್ಕಾಗಿ ಕಷ್ಟಪಡುವಂತಾಗಿದೆ. ಹಾಗಾಗಿ ಸೂಕ್ತ ವ್ಯವಸ್ಥೆ ಆಗುವವರೆಗೆ ಸಿಎನ್‌ಜಿ ವಾಹನ ಖರೀದಿದಾರರು ತಮ್ಮ ನಿರ್ಧಾರವನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.

ನಗರದ ಕಾವೂರು, ಅಡ್ಯಾರು, ಸುರತ್ಕಲ್ ಬಳಿಯ ಹೊಸಬೆಟ್ಟು ಪೆಟ್ರೋಲ್‌ ಬಂಕ್‌ಗಳಲ್ಲಿ ಸದ್ಯ ಸಿಎನ್‌ಜಿ ಇಂಧನ ಮಾರಾಟ ನಡೆಯುತ್ತಿದೆ. ಆದರೆ ಕಾವೂರು ಹೊರತುಪಡಿಸಿ, ಇತರ ಬಂಕ್‌ಗಳಲ್ಲಿ ಮೂಲ ಸೌಕರ್ಯದ ಕೊರತೆ ಹಾಗೂ ಇಂಧನ ಪೂರೈಕೆ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದರು.

ಆರಂಭದಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿದ್ದ ಸಿಎನ್‌ಜಿ ವಾಹನಗಳು, ಲಾಕ್‌ಡೌನ್ ಬಳಿಕ ಹೆಚ್ಚಾಗುತ್ತಿವೆ. ಅಧಿಕ ಇಂಧನ ಕ್ಷಮತೆಯುಳ್ಳ ಸಿಎನ್‌ಜಿ ಕಿಟ್ ಅಳವಡಿಕೆಗೆ ವಾಹನ ಖರೀದಿದಾರರು ಮುಂದಾಗುತ್ತಿದ್ದಾರೆ. ಆದರೆ ಅಲ್ಪ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವ ಸಿಎನ್‌ಜಿ ಇಂಧನಕ್ಕಾಗಿ ನಗರದಲ್ಲಿ ಈಗಾಗಲೇ ಗಂಟೆಗಟ್ಟಲೆ ಬಂಕ್‌ಗಳಲ್ಲಿ ಕಾಯುವ ಪರಿಸ್ಥಿತಿ ಇದೆ ಎಂದು ಹೇಳಿದರು.

ಗೇಲ್ ಸಂಸ್ಥೆಯ ಉಸ್ತುವಾರಿಯಲ್ಲಿ ನಗರದ ಬೈಕಂಪಾಡಿ ಪ್ರದೇಶದಲ್ಲಿ ಸಿಎನ್‌ಜಿ ಸ್ಥಾವರ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಸದ್ಯ ಸಿಎನ್‌ಜಿ ಆಸಕ್ತಿದಾರರು ತಮ್ಮ ಖರೀದಿ ಪ್ರಕ್ರಿಯೆ ಮುಂದೂಡಬೇಕು. ತಮ್ಮಲ್ಲಿರುವ ಪೆಟ್ರೋಲ್ ಚಾಲಿತ ವಾಹನಗಳನ್ನು ಕಿಟ್ ಅಳವಡಿಸಿ ಸಿಎನ್‌ಜಿ ವಾಹನಗಳನ್ನಾಗಿ ಮಾರ್ಪಡಿಸಲು ಇಚ್ಛಿಸುವವರು ಸದ್ಯ ಪೆಟ್ರೋಲ್‌ನಲ್ಲಿಯೇ ವಾಹನ ಓಡಿಸಬೇಕು ಎಂದು ಮನವಿ ಮಾಡಿದರು.

ಸಿಎನ್‌ಜಿ ರಿಕ್ಷಾ ಚಾಲಕರ ಸಂಘದ ಜಯರಾಂ ಶೆಟ್ಟಿ ಮಾತನಾಡಿ, ಇಂಧನ ಕ್ಷಮತೆಗಾಗಿ ಸಿಎನ್‌ಜಿ ವಾಹನ ಖರೀದಿಸಿದ್ದು, ಇದೀಗ ಇಂಧನಕ್ಕಾಗಿ ನಸುಕಿನ 2 ಗಂಟೆಯಿಂದ ಮಧ್ಯಾಹ್ನದವರೆಗೆ ಬಂಕ್‌ಗಳಲ್ಲಿ ಸರದಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಸರಿಯಾಗಿ ದುಡಿಮೆ ಇಲ್ಲದೆ ಸಾಲ ಮಾಡಿ ಖರೀದಿಸಿದ ವಾಹನಕ್ಕೆ ಕಂತಿನ ಹಣ ಪಾವತಿಸಲೂ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಲೋಕೇಶ್, ಸಂದೀಪ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು