ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ

Last Updated 15 ನವೆಂಬರ್ 2020, 7:44 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಭಾನುವಾರ ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಹಕಾರಸಂಸ್ಥೆಗಳನ್ನು ಬಲಪಡಿಸುವ ಸಲುವಾಗಿ ಆರ್ಥಿಕ ಸ್ಪಂದನ ಕಾರ್ಯಕ್ರಮದಡಿ ಮೈಸೂರು, ಬೆಂಗಳೂರು, ಕಲಬುರ್ಗಿ, ಬೆಳಗಾವಿ ವಿಭಾಗಗಳಡಿ ಸಾಲ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

ಸಹಕಾರಿ ಸಂಸ್ಥೆಗಳು ಒಗ್ಗಟ್ಟಾಗಿ ಮತ್ತು ಬಲಿಷ್ಠವಾಗಿ ಬೆಳೆಯುತ್ತಿವೆ. ಸಾಲ ಸೌಲಭ್ಯ ನೀಡುವಲ್ಲಿ ಸಹಕಾರಿ ಬ್ಯಾಂಕುಗಳು ನಂಬರ್ ವನ್ ಆಗಿವೆ ಎಂದರು.

ಆತ್ಮ ನಿರ್ಭರ ಯೋಜನೆಯಡಿ ರಾಜ್ಯಕ್ಕೆ ಮೀಸಲಿಟ್ಟ ಅನುದಾನದಲ್ಲಿ ₹600 ಕೋಟಿಗೆ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಅನುದಾನ ಶೀಘ್ರ ದೊರೆಯುವ ಭರವಸೆ ಇದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಸಹಕಾರ ಅಧ್ಯಯನ ಪೀಠ ಆರಂಭಿಸಲು ಸರ್ಕಾರದಿಂದ ಅನುಮತಿ ದೊರಕಿದ್ದು, ಈ ವರ್ಷದಿಂದಲೇ ಆರಂಭಗೊಳ್ಳಲಿದೆ. ಇದು ಹೆಮ್ಮೆಯ ವಿಷಯ ಎಂದರು.

ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆಗೊಂಡಿತು. ಅಲ್ಲದೆ ಉತ್ತಮ ನವೋದಯ ಸ್ವ ಸಹಾಯ ಸಂಘಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮಕ್ಕೆ ಮೊದಲು ನಡೆದ ಸಹಕಾರ ಜಾಥಾಕ್ಕೆ ಎಸ್ ಸಿ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಚಾಲನೆ ನೀಡಿದರು. ಮೇಯರ್ ದಿವಾಕರ ಪಾಂಡೇಶ್ವರ ಸಹಕಾರ ಸಂಘಗಳ ಮಳಿಗೆ ಉದ್ಘಾಟಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಮೀನು ಮಾರಾಟ ಮಹಾ ಮಂಡಳದ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಕೆಎಂಎಫ್ ಅಧ್ಯಕ್ಷ ರವಿರಾಜ ಹೆಗ್ಡೆ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿಗೆ ಆಹ್ವಾನ ನೀಡಿದ ನಳಿನ್
ಮಂಗಳೂರು:
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಬಿಜೆಪಿ ಸೇರ್ಪಡೆ ಆಗುವಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾನುವಾರ ಇಲ್ಲಿ ಪರೋಕ್ಷ ಆಹ್ವಾನ ನೀಡಿದರು.

ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ 67 ನೆಯ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ‘ರಾಜೇಂದ್ರ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಜನೌಷಧಿ ಮಳಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಅವರು ರಾಷ್ಟ್ರ ಮಟ್ಟದ ನಾಯಕ ಆಗಬೇಕು ಎಂಬುದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ನಮ್ಮೆಲ್ಲರ ಆಸೆ. ಆದರೆ, ಅದಕ್ಕಾಗಿ ಅವರು ನಮ್ಮ ಬಳಿ ಕುಳಿತು ಕೊಳ್ಳಬೇಕು. ಇದು ಬಹಿರಂಗವಾಗಿ ಚರ್ಚಿಸುವ ವಿಚಾರ ಅಲ್ಲ. ನಾನು ಅವರ ಜೊತೆ ವೈಯಕ್ತಿಕವಾಗಿ ಮಾತನಾಡುತ್ತೇನೆ’ ಎಂದು ಹೇಳಿ ಮುಗುಳ್ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT