ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಗೆ ಸಮಗ್ರ ಅಭಿವೃದ್ಧಿ ಯೋಜನೆ, ಇಬ್ಬರು ಸಲಹೆಗಾರರ ನೇಮಕ: ಸಚಿವ ಎಸ್. ಅಂಗಾರ

Last Updated 23 ಅಕ್ಟೋಬರ್ 2021, 6:34 IST
ಅಕ್ಷರ ಗಾತ್ರ

ಮಂಗಳೂರು: ‘ಕರಾವಳಿಯಲ್ಲಿ ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಇಲಾಖೆಗಳ ಅಭಿವೃದ್ಧಿ ಯೋಜನೆ ರೂಪಿಸಲು ಇಬ್ಬರು ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರ ವರದಿ ಆಧರಿಸಿ, ಕರಾವಳಿಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು’ ಎಂದು ಮೀನುಗಾರಿಕಾ ಸಚಿವ ಎಸ್. ಅಂಗಾರ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ನಿವೃತ್ತ ಎಂಜಿನಿಯರ್ ರಾಜಸಿಂಹ ಮತ್ತು ನಿವೃತ್ತ ಅಧಿಕಾರಿ ವಿಷ್ಣು ಭಟ್ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಅವರು ಕರಾವಳಿ ಅಭಿವೃದ್ಧಿ ಬಗ್ಗೆ ಅಧ್ಯಯನ ಮಾಡಿ, ಸಲಹೆ ನೀಡುತ್ತಾರೆ’ ಎಂದರು.

ಕೇಂದ್ರ ಪಶುಸಂಗೋಪನಾ ಸಚಿವ ಡಾ. ಮುರುಗನ್, ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಕೇಂದ್ರ ಬಜೆಟ್‍ನಲ್ಲಿ ಮೀನುಗಾರಿಕೆ ಅಭ್ಯುದಯಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ರಾಜ್ಯ ಬಜೆಟ್‍ನಲ್ಲೂ ಕರಾವಳಿ ಬಂದರು, ಮೀನುಗಾರಿಕೆ ಅಭಿವೃದ್ಧಿಗೆ ಅನುದಾನ ಲಭ್ಯವಾಗಲಿದೆ’ ಎಂದರು.

ಮತ್ಸ್ಯಸಂಪದ ಯೋಜನೆಯಲ್ಲಿ ಮಂಜುಗಡ್ಡೆ ಘಟಕ, ಮೀನು ಒಣಗಿಸುವ ಘಟಕ ನಿರ್ಮಾಣಕ್ಕೆ ನೆರವು ನೀಡಲಾಗುವುದು. ಆತ್ಮನಿರ್ಭರ ಯೋಜನೆಯಡಿ ರೈತ ಉತ್ಪಾದಕ ಸಂಘಗಳನ್ನು ಸ್ಥಾಪಿಸಿ ತೋಟಗಾರಿಕೆ, ಕೃಷಿ ಹಾಗೂ ಮೀನುಗಾರಿಕೆ ಗುಂಪುಗಳನ್ನು ರಚಿಸಿ ಸ್ವಉದ್ಯೋಗಕ್ಕೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.

ಸಂಭಾವ್ಯ ಕೋವಿಡ್ ಮೂರನೇ ಅಲೆ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಿಲ್ಲೆಯಲ್ಲಿ ಶೇ 88ರಷ್ಟು ಜನರು ಪ್ರಥಮ ಡೋಸ್, ಶೇ 51ರಷ್ಟು ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಈವರೆಗೆ ಒಟ್ಟು 22,93,151 ಮಂದಿ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದರು.

ಕರಾವಳಿಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಅನೈತಿಕ ಪೊಲೀಸ್‌ಗಿರಿ ವಿರುದ್ಧ ಕ್ರಮವಹಿಸುವ ದಿಸೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಆಗಿಲ್ಲ. ಎಲ್ಲ ಇಲಾಖೆಗಳು ಮುಕ್ತವಾಗಿ ಆಡಳಿತ ನಡೆಸುತ್ತಿವೆ. ಈ ಕುರಿತ ಆರೋಪದಲ್ಲಿ ಹುರುಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರಸಾಪ್‍ಸಿಂಹ ನಾಯಕ್, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್, ಉಪಾಧ್ಯಕ್ಷೆ ಕಸ್ತೂರಿ ಪಂಜ, ಈಶ್ವರ್ ಕಟೀಲ್, ಜಗದೀಶ ಶೇಣವ, ರಣದೀಪ್ಕಾಂಚನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT