ಮಂಗಳೂರು: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಕಾಂಗ್ರೆಸ್ ಪಕ್ಷವು ಶನಿವಾರ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲೇ ಪ್ರಕಟಿಸಿದೆ.
ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಹಾಲಿ ಶಾಸಕ ಯು.ಟಿ.ಖಾದರ್, ಬಂಟ್ವಾಳ ಕ್ಷೇತ್ರದಲ್ಲಿ ಹಿರಿಯ ನಾಯಕ ಬಿ.ರಮಾನಾಥ ರೈ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ವಿರುದ್ಧ ಸೋತಿದ್ದ ಮಿಥುನ್ ರೈ ಅವರಿಗೆ ಮೂಲ್ಕಿ–ಮೂಡುಬಿದಿರೆ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಕೃಷ್ಣಪ್ಪ ಬಿ. ಹಾಗೂ ತೀವ್ರ ಕುತೂಹಲ ಕೆರಳಿಸಿದ್ದ ಬೆಳ್ತಂಗಡಿ ಕ್ಷೇತ್ರದಲ್ಲಿ ರಕ್ಷಿತ್ ಶಿವರಾಂ ಅವರಿಗೆ ಮೊದಲ ಪಟ್ಟಿಯಲ್ಲೇ ಟಿಕೆಟ್ ಹಂಚಿಕೆ ಮಾಡಲಾಗಿದೆ.
ಬೆಳ್ತಂಗಡಿಯ ಟಿಕೆಟ್ ಬಯಸಿದ್ದ ರಕ್ಷಿತ್ ಶಿವರಾಂ ನಾಲ್ಕು ವರ್ಷಗಳಿಂದ ಈ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಒಡನಾಟ ಇಟ್ಟುಕೊಂಡಿದ್ದರು. ಬೆಸ್ಟ್ ಫೌಂಡೇಷನ್ ಮೂಲಕ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರು. ‘ಹೊರಗಿನವರಿಗೆ ಟಿಕೆಟ್ ನೀಡಬಾರದು’ ಎಂಬ ಟೀಕೆಗಳು ಕೇಳಿ ಬಂದಾಗ, ‘ನಾನು ಬೆಳ್ತಂಗಡಿ ತಾಲ್ಲೂಕಿನ ಸುಲ್ಕೇರಿ ಗ್ರಾಮದ ಹೇರಾಜೆ ಮನೆತನದ ಹೊಕ್ಕಳ ದಿ. ಹೇರಾಜೆ ವೆಂಕಪ್ಪ ಪೂಜಾರಿ– ನೀಲಮ್ಮ ದಂಪತಿಯ ಮಗಳಾದ ಲತಾ ಶಿವರಾಂ’ ಅವರ ಪುತ್ರ ಎಂದು ಪ್ರತ್ಯುತ್ತರ ನೀಡಿದ್ದರು.
ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿಎಎಲ್‌ಎಲ್‌ಬಿ ಪದವಿಧರರಾಗಿರುವ ರಕ್ಷಿತ್, ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಬೌದ್ಧಿಕ ಹಕ್ಕುಗಳ ಕುರಿತು ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ. ಬೆಂಗಳೂರು ಕಾನೂನು ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ನಡೆಸುವಾಗಲೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹೈಕೋರ್ಟ್‌ನಲ್ಲಿ ಕೆಲ ಕಾಲ ವಕೀಲರಾಗಿಯೂ ಕಾರ್ಯನಿರ್ವಹಿಸಿದ್ದರು. . ಯುವ ಕಾಂಗ್ರೆಸ್‌ನ ಬೆಂಗಳೂರು ನಗರ ಘಟಕದ ಉಪಾಧ್ಯಕ್ಷರಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಅವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಬೆಂಗಳೂರಿನ ಕಾಡುಮಲ್ಲೇಶ್ವರ ಗೆಳೆಯರ ಬಳಗ ಕಟ್ಟಿಕೊಂಡು ಧಾರ್ಮಿಕ ಕಾರ್ಯಕ್ರಮಗಳನ್ನೂ ಸಂಘಟಿಸುತ್ತಾ ಬಂದಿದ್ದಾರೆ. ಅರ್ಕಾವತಿ–ಕುಮುದವತಿ ಪುನಃಶ್ಚೇತನ, ಕೆರೆಗಳ ಸಂರಕ್ಷಣೆ ಕುರಿತ ಹೋರಾಟದಲ್ಲಿ ಸಕ್ರಿಯರಾಗಿದ್ದರು.
ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಹೊಸ ಮುಖ ಜಿ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಲು ಪಕ್ಷವು ನಿರ್ಧರಿಸಿದೆ. ಇಲ್ಲಿ ಟಿಕೆಟ್ ಪಡೆಯಲು ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರಾಗಿ ಗುರುತಿಸಿಕೊಂಡಿರುವ ಕೃಷ್ಣಪ್ಪ ಅವರಿಗೆ ಪಕ್ಷದ ವರಿಷ್ಠರು ಮಣೆ ಹಾಕಿದ್ದಾರೆ.
ಸಕಲೇಶಪುರದ ಕೆರೋಡಿಯ ಉದ್ಯಮಿ ಜಿ.ಕೃಷ್ಣಪ್ಪ ಎಂ.ಎಸ್ಸಿ ಹಾಗೂ ಎಂ.ಎ ಪಧವೀಧರರು. ಅವರು ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೆಪಿಸಿಸಿ ಸದಸ್ಯ ಹಾಗೂ ಕೆಪಿಸಿಸಿ ಸಂಯೋಜಕ ಸೇರಿದಂತೆ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ನಾಲ್ಕು ವರ್ಷಗಳಿಂದ ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿದ್ದರು. ಈ ಕ್ಷೇತ್ರದಲ್ಲಿ ಪಕ್ಷವು 2004ರಿಂದ 2018ರವರೆಗೆ ಸತತವಾಗಿ ಡಾ.ಬಿ.ರಘು ಅವರಿಗೆ ಟಿಕೆಟ್ ನೀಡಿತ್ತು. ಈ ಸಲ ಅವರ ಮಕ್ಕಳು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಲ್ಲಿ ಹೊಸ ಮುಖಕ್ಕೆ ಪಕ್ಷವು ಮಣೆ ಹಾಕಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತರಾಗಿರುವ ಮಿಥುನ್ ರೈ ಮೂಡುಬಿದಿರೆ ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲೇ ಟಿಕೆಟ್ ಗಿಟ್ಟಿಸಲು ಮಿಥುನ್ ಪ್ರಯತ್ನಿಸಿದ್ದರು. ಆದರೆ, ಪಕ್ಷವು ಅಭಯಚಂದ್ರ ಜೈನ್ ಅವರಿಗೆ ಟಿಕೆಟ್ ನೀಡಿತ್ತು. ಅವರು ಬಿಜೆಪಿಯ ಉಮಾನಾಥ ಕೋಟ್ಯಾನ್ ವಿರುದ್ಧ ಸೋತಿದ್ದರು. ಈ ಸಲ ಈ ಕ್ಷೇತ್ರದಿಂದ ಟಿಕೆಟ್‌ಗಾಗಿ ಮಿಥುನ್ ರೈ ಜೊತೆಗೆ ರಾಜಶೇಖರ ಕೋಟ್ಯಾನ್ ಹಾಗೂ ಪ್ರತಿಭಾಕುಳಾಯಿ ಅರ್ಜಿ ಸಲ್ಲಿಸಿದ್ದರು. ಬಿಲ್ಲವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಬಿಲ್ಲವರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯವೂ ಇತ್ತು. ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಮಿಥುನ್ ರೈ ಪರ ವಹಿಸಿದ್ದರು.
ಬಂಟ್ವಾಳ ಕ್ಷೇತ್ರದಲ್ಲಿ ಪಕ್ಷವು ಹಿರಿಯ ನಾಯಕ ಬಿ.ರಮಾನಾಥ ರೈ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಿದೆ. 1985ರಿಂದ ಈ ಕ್ಷೇತ್ರದಲ್ಲಿ ರಮಾನಾಥ ರೈ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಒಟ್ಟು ಎಂಟು ಸಲ ಸ್ಪರ್ಧಿಸಿರುವ ರಮಾನಾಥ ರೈ 2004ರಲ್ಲಿ ಬಿಜೆಪಿಯ ಬಿ.ನಾಗರಾಜ್ ಶೆಟ್ಟಿ ವಿರುದ್ಧ ಹಾಗೂ 2018ರಲ್ಲಿ ರಾಜೇಶ್ ನಾಯ್ಕ್ ಉಳೇಪಾಡಿ ವಿರುದ್ಧ ಸೋತಿದ್ದರು.
ಪಕ್ಷವು ಹಾಲಿ ಶಾಸಕರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದರಿಂದ ಮಂಗಳೂರು (ಉಳ್ಳಾಲ) ಕ್ಷೇತ್ರದ ಟಿಕೆಟ್ ಯು.ಟಿ.ಖಾದರ್ ಅವರಿಗೆ ಒಲಿದಿದೆ. ತಂದೆ ಯು.ಟಿ.ಫರೀದ್ ನಿಧನದಿಂದ ತೆರವಾದ ಸ್ಥಾನಕ್ಕೆ 2007ರಲ್ಲಿ ನಡೆದ ಉಪಚುನಾವಣೆಯಲ್ಲಿ ಖಾದರ್ ಗೆದ್ದಿದ್ದರು. ಆ ಬಳಿಕ ಸತತ ನಾಲ್ಕು ಸಲ ಈ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಖಾದರ್ ಮಾತ್ರ ಗೆದ್ದಿದ್ದರು.
ಮೂರು ಕ್ಷೇತ್ರಗಳಲ್ಲಿ ಕಾದು ನೋಡುವ ತಂತ್ರ
ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಪುತ್ತೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ. ಇಲ್ಲಿ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂದು ನೋಡಿಕೊಂಡು ಅಭ್ಯರ್ಥಿ ಆಯ್ಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮುಖ್ಯಾಂಶಗಳು
ಎರಡು ಕ್ಷೇತ್ರಗಳಲ್ಲಿ ಬಂಟ ಸಮುದಾಯಕ್ಕೆ ಟಿಕೆಟ್
ಒಂದು ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದ ಅಭ್ಯರ್ಥಿ
3 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಇದೇ ಮೊದಲ ವಿಧಾನಸಭಾ ಚುನಾವಣೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.