ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ‘ಕೈ’ ಹಿಡಿಯದ ಕಾಂಗ್ರೆಸ್‌ ಪ್ರಣಾಳಿಕೆ

‘ಹಿಂದುತ್ವವಾದ’ದ ಬೇರಿಗೆ ನೀರೆರೆದ ಮೋದಿ, ಯೋಗಿ, ಶಾ ಪ್ರಚಾರ * ಒಳಜಗಳದಿಂದಾಗಿ ಅವಕಾಶ ಕೈಚೆಲ್ಲಿದ ಕಾಂಗ್ರೆಸ್‌
Published 13 ಮೇ 2023, 20:52 IST
Last Updated 13 ಮೇ 2023, 20:52 IST
ಅಕ್ಷರ ಗಾತ್ರ

ಮಂಗಳೂರು: ಪುತ್ತೂರು ಕ್ಷೇತ್ರವೊಂದು ಬಿಜೆಪಿಯಿಂದ ಕಾಂಗ್ರೆಸ್‌ ತೆಕ್ಕೆಗೆ ಜಾರಿದ್ದು ಬಿಟ್ಟರೆ, 2018ರ ವಿಧಾನಸಭೆ ಚುನಾವಣೆಯ ಫಲಿತಾಂಶವೇ ಈ ಸಲದ ಚುನಾವಣೆಯಲ್ಲೂ ಮರುಕಳಿಸಿದೆ. ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಆರರಲ್ಲಿ ಬಿಜೆಪಿ ಹಾಗೂ ಎರಡರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ರಾಜ್ಯದೆಲ್ಲೆಡೆ ಕಾಣಿಸಿಕೊಂಡ ಆಡಳಿತ ವಿರೋಧಿ ಅಲೆ ಕರಾವಳಿಯಲ್ಲಿ ನೆಲಕಚ್ಚಿದೆ. ಈ ಸಲವೂ ‘ಹಿಂದುತ್ವ’ಕ್ಕೆ ಮಣೆ ಹಾಕಿರುವ ಇಲ್ಲಿನ ಮತದಾರರು ಕಾಂಗ್ರೆಸ್‌ ಪಕ್ಷದ ‘ಗ್ಯಾರಂಟಿ’ ಯೋಜನೆಗಳಿಗೆ ಸೊಪ್ಪು ಹಾಕಿಲ್ಲ. 

ಜಿಲ್ಲೆಯಲ್ಲಿ ಗಟ್ಟಿಯಾಗಿ ಬೇರೂರಿರುವ ‘ಹಿಂದುತ್ವವಾದ’ ಸಿದ್ಧಾಂತಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್‌ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರ ಚುನಾವಣಾ ಪ್ರಚಾರ ಮತ್ತಷ್ಟು ನೀರೆದಿರುವುದು ಜಿಲ್ಲೆಯ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.

ಕರಾವಳಿಯ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಚುನಾವಣಾ ಪ್ರಚಾರ ನಡೆಸಿದ್ದರು. ಮೂಡುಬಿದಿರೆ ಕ್ಷೇತ್ರದ ಮೂಲ್ಕಿಯಲ್ಲಿ ಚುನಾವಣಾ ಪ್ರಚಾರ ಸಮಾವೇಶ ನಡೆಸಿದ್ದ ನರೇಂದ್ರ ಮೋದಿ ಅವರು ‘ಜೈ ಬಜರಂಗ ಬಲಿ’ ಘೋಷಣೆ ಮೊಳಗಿಸುವ ಮೂಲಕ ಧಾರ್ಮಿಕ ಭಾವನೆ ಬಡಿದೆಬ್ಬಿಸುವ ಪ್ರಯತ್ನ ನಡೆಸಿದ್ದರು. ಅಮಿತ್‌ ಶಾ ಚುನಾವಣೆಗೆ ಮುನ್ನ ಜಿಲ್ಲೆಗೆ ಎರಡು ಸಲ ಭೇಟಿ ನೀಡಿದ್ದರು. ನಗರದಲ್ಲಿ ಭಾರಿ ರೋಡ್‌ ಶೋ ನಡೆಸಿದ್ದರು. ದಿ.ಪ‍್ರವೀಣ್‌ ನೆಟ್ಟಾರು ಮನೆಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸುಳ್ಯದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ‘ಪ್ರವೀಣ್‌ ನೆಟ್ಟಾರು ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ಹೇಳಿಕೆ ನೀಡಿದ್ದರು. ಯೋಗಿ ಆದಿತ್ಯನಾಥ ಅವರು ಬಂಟ್ವಾಳ ಹಾಗೂ ಪುತ್ತೂರಿನಲ್ಲಿ ರೋಡ್‌ ಶೋ ನಡೆಸಿದ್ದರು. ಯೋಗಿ ಅವರ ರೋಡ್‌ ಶೋ ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್‌ ನಾಯ್ಕ್‌ ಉಳಿಪಾಡಿ ಅವರಿಗೆ ಅನುಕೂಲ ಕಲ್ಪಿಸಿರುವುದು ಸ್ಪಷ್ಟ. ಆದರೆ, ಪುತ್ತೂರಿನಲ್ಲಿ ಯೋಗಿ ಅಷ್ಟಾಗಿ ಪ್ರಭಾವ ಬೀರಿಲ್ಲ. ಹಿಮಂತ್‌ ಬಿಸ್ವಾ ಶರ್ಮ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಬೆಳ್ತಂಗಡಿ ಹಾಗೂ ಮಂಗಳೂರು ನಗರ ಉತ್ತರ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು.

ಆಡಳಿತ ವಿರೋಧಿ ಅಲೆಯ ಮುನ್ಸೂಚನೆ ಸಿಗುತ್ತಲೇ ಬಿಜೆಪಿಯವರು ಕರಾವಳಿಯ ತಮ್ಮ ಕೋಟೆಯನ್ನು ಉಳಿಸಿಕೊಳ್ಳಲು ಕಾರ್ಯತಂತ್ರ ಹೆಣೆದಿದ್ದರು. ಹಾಲಿ ಶಾಸಕರ ಕಾರ್ಯವೈಖರಿ ಕುರಿತು ಮತದಾರರಿಂದಲೇ ವಿರೋಧ ವ್ಯಕ್ತವಾಗಿದ್ದ ಪುತ್ತೂರು ಮತ್ತು ಸುಳ್ಯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸುವ ಮೂಲಕ ಅವರ ಕೋಪ ಶಮನ ಮಾಡುವ ಪ್ರಯತ್ನ ಮಾಡಿದ್ದರು. ಸುಳ್ಯದಲ್ಲಿ ಈ ತಂತ್ರ ಬಿಜೆಪಿಯ ಕೈ ಹಿಡಿದಿದೆ. ಆದರೆ ಪುತ್ತೂರಿನಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಆದ ಎಡವಟ್ಟಿನಿಂದಾಗಿ ಜಿಲ್ಲೆಯಲ್ಲಿ ಈ ಕ್ಷೇತ್ರದಲ್ಲಿ ಅರಳುವುದರಲ್ಲಿದ್ದ ‘ತಾವರೆ’ಯನ್ನು ಅವರ ಕಾರ್ಯಕರ್ತರೇ ‘ಬ್ಯಾಟ್‌’ನಿಂಧ ಧ್ವಂಸಗೊಳಿಸಿದ್ದಾರೆ. 

ಬಿಜೆಪಿ ಸಾಕಷ್ಟು ಮುನ್ನವೇ ಎಚ್ಚೆತ್ತು ಚುನಾವಣೆಯ ಕಾರ್ಯತಂತ್ರ ರೂಪಿಸಿದ್ದರೆ, ಕಾಂಗ್ರೆಸ್‌ ಪಾಳೆಯದಲ್ಲಿ ಒಳಜಗಳಗಳೇ ಸದ್ದು ಮಾಡಿದವು. ಬೆಳ್ತಂಗಡಿಯಲ್ಲಿ ಪಕ್ಷದ ಅಭ್ಯರ್ಥಿ ರಕ್ಷಿತ್‌ ಶಿವರಾಂ ಅವರು ಕ್ಷೇತ್ರದ ಹೊರಗಿನ ಅಭ್ಯರ್ಥಿ ಎಂದು ಬಿಂಬಿಸುವ ಪ್ರಯತ್ನ ಸ್ವಪಕ್ಷೀಯರಿಂದಲೇ ನಡೆಯಿತು. ಟಿಕೆಟ್‌ಗಾಗಿ ನಡೆದ ಲಾಬಿ ಹಾಗೂ ಇದರಿಂದ ಸೃಷ್ಟಿಯಾದ ಗೊಂದಲಗಳು ಕಾರ್ಯಕರ್ತರ ಉತ್ಸಾಹ ಕುಗ್ಗಿಸಿದವು. ಸುಳ್ಯಕ್ಷೇತ್ರದಲ್ಲಿ ಟಿಕೆಟ್‌ ಘೋಷಣೆಯಾದ ಬಳಿಕವೂ ಕಾಂಗ್ರೆಸ್‌ಗೆ ಸ್ವಪಕ್ಷೀಯರಿಂದಲೇ ಪ್ರತಿರೋಧ ವ್ಯಕ್ತವಾಯಿತು. ಇದರಿಂದಾಗಿ ಪಕ್ಷದ ಕಾರ್ಯಕರ್ತರು ಕೊನೆಯವರೆಗೂ ಗೊಂದಲದಲ್ಲೇ ಕಾಲಕಳೆಯುವಂತಾಯಿತು.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಂತಿಮ ದಿನದವರೆಗೂ ಅಭ್ಯರ್ಥಿಯನ್ನು ಘೋಷಣೆ ಮಾಡದ ಕಾಂಗ್ರೆಸ್‌, ಈ ಕ್ಷೇತ್ರದಲ್ಲಿ ಎದುರಾಳಿ ಅಭ್ಯರ್ಥಿ ಭಾರಿ ಅಂತರದ ಹಾಗೂ ನಿರಾಯಸದ ಗೆಲುವು ದಕ್ಕಿಸಿಕೊಳ್ಳುವುದಕ್ಕೆ ಎಲ್ಲ ಅವಕಾಶಗಳನ್ನು ಒದಗಿಸಿಕೊಟ್ಟಿತು.

ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ‘ಹಿಂದುತ್ವ’ದ ವಿಚಾರವನ್ನೇ ಮುಂದಿಟ್ಟುಕೊಳ್ಳುವ ಬಿಜೆಪಿಗೆ ಪ್ರತಿತಂತ್ರ ಹೆಣೆಯಬೇಕಾದರೆ ಕ್ರೈಸ್ತ ಸಮುದಾಯದವರನ್ನು ಕಣಕ್ಕಿಳಿಸುವ ಪರಿಪಾಠಕ್ಕೆ ಇತಿಶ್ರೀ ಹಾಡಿ, ಹಿಂದುಗಳಿಗೆ ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಪಕ್ಷದೊಳಗಿಂದಲೇ ವ್ಯಕ್ತವಾಗಿತ್ತು. ಇದಕ್ಕೆ ಸೊಪ್ಪು ಹಾಕದಿರುವ ವರಿಷ್ಠರ ನಿರ್ಧಾರವೂ ಪಕ್ಷದ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ಟಿಕೆಟ್‌ ಹಂಚಿಕೆಯ ಗೊಂದಲಗಳನ್ನು ಕಾಂಗ್ರೆಸ್‌ ವರಿಷ್ಠರು ನಿವಾರಿಸುವಷ್ಟರಲ್ಲಿ ಬಿಜೆಪಿ ಅಭ್ಯರ್ಥಿ ಎರಡು–ಮೂರು ಸುತ್ತುಗಳ ಪ್ರಚಾರ ಕಾರ್ಯವನ್ನೂ ಮುಗಿಸಿದ್ದರು.

ಒಂದೆಡೆ, ಬಿಜೆಪಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರೆ, ಕಾಂಗ್ರೆಸ್‌ ಪ್ರಚಾರ ಕಾರ್ಯವೂ ಸಪ್ಪೆ ಎನಿಸಿತು. ಮಂಗಳೂರಿಗೆ ರಾಹುಲ್‌ ಗಾಂಧಿ ಹಾಗೂ ಮೂಲ್ಕಿಗೆ ಪ್ರಿಯಾಂಕ ಗಾಂಧಿ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೊತ್‌ ಅವರನ್ನು ಕರೆಸಿದರೂ, ಮತದಾರರ ಮೇಲೆ ಅಂತಹ ಪ್ರಭಾವ ಉಂಟಾದಂತಿಲ್ಲ. ಪ್ರಜಾಧ್ವನಿ ಯಾತ್ರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕರ್ನಾಟಕದ ಉಸ್ತುವಾರಿ ರಣ್‌ದೀಪ್ ಸಿಂಗ್‌ ಸುರ್ಜೇವಾಲ ಬಂದು ಹೋದರು. ಆಗ ಸೃಷ್ಟಿಯಾದ ಸಂಚಲನವನ್ನು ಕೊನೆಯವರೆಗೂ ಉಳಿಸಿಕೊಳ್ಳುವಲ್ಲಿ ಪಕ್ಷವು ಯಶಸ್ವಿಯಾಗಿಲ್ಲ. 

ಮಂಗಳೂರು ಕ್ಷೇತ್ರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ 15 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರ ಹೊರತಾಗಿಯೂ ಕಾಂಗ್ರೆಸ್‌ನ ಯು.ಟಿ.ಖಾದರ್‌ ಅವರ ಗೆಲುವಿನ ಅಂತರ ಕಳೆದ ಸಲಕ್ಕಿಂತ ಹೆಚ್ಚಾಗಿದೆ. ಪುತ್ತೂರಿ ಕ್ಷೇತ್ರದಲ್ಲಿ ಬಿಜೆಪಿಯ ಸ್ವಯಂ ಕೃತ ಅಪರಾಧದ ಲಾಭ ಪಡೆದ ಕಾಂಗ್ರೆಸ್‌ ಪ್ರಯಾಸದ ಗೆಲುವು ಸಾಧಿಸಿದೆ. ಬಿಜೆಪಿಯಿಂದ ವಲಸೆ ಬಂದಿರುವ ಅಶೋಕ್‌ ಕುಮಾರ್ ರೈ ಅಲ್ಪ ಅಂತರದಿಂದ ಗೆದ್ದಿದ್ದಾರೆ. ಇದನ್ನು ಹೊರತುಪಡಿಸಿದರೆ ಜಿಲ್ಲೆಯ ಕಾಂಗ್ರೆಸ್‌ ಪಾಲಿಗೆ ಈ ಸಲದ ಫಲಿತಾಂಶವೂ ನಿರಾಶೆಯನ್ನೇ ಮೂಡಿಸಿದೆ. 

ಮೂಡುಬಿದಿರೆಯಲ್ಲಿ ಮೋದಿ ಅವರ ಚುನಾವಣಾ ಸಮಾವೇಶಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಕರೆಸಿ ‌ಚುನಾವಣಾ ಸಮಾವೇಶ ಹಮ್ಮಿಕೊಂಡರೂ, ಪಕ್ಷದ ಅಭ್ಯರ್ಥಿಯನ್ನು ಗೆಲುವಿನ ದಡ ಸೇರಿಸಲು ಅದು ನೆರವಾಗಿಲ್ಲ. ಕಳೆದ ಸಲಕ್ಕಿಂತ ಈ ಸಲ ಗೆಲುವಿನ ಅಂತರವನ್ನು ಕಡಿಮೆಗೊಳಿಸಿದೆ. ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ಅವರು ‘ಇದು ನನ್ನ ಕೊನೆಯ ಚುನಾವಣೆ’ ಎಂದು ಹೇಳಿಕೊಂಡರೂ ಮತದಾರರು ಒಲಿಯಲಿಲ್ಲ.

‘ಬಜರಂಗದಳ ನಿಷೇಧದ ಕುರಿತು ಪ್ರಣಾಳಿಕೆಯಲ್ಲಿ ಉಲ್ಲೇಖ ಮಾಡಿದ್ದು ಕೂಡಾ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಹೊಡೆತ ನೀಡಿತು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕಾಂಗ್ರೆಸ್‌ ನಾಯಕರೊಬ್ಬರು ವಿಶ್ಲೇಷಿಸಿದರು.

‘ಬಿಜೆಪಿ ಬಗ್ಗೆ ಅಸಮಾಧಾನವಿದ್ದ ಅನೇಕರು ಕಾಂಗ್ರೆಸ್‌ನತ್ತ ವಾಲಿದ್ದರು. ಅವರ ಮತ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಸಿಗುವ ಸಾಧ್ಯತೆಯೂ ಇತ್ತು. ಆದರೆ, ಪಕ್ಷದ ಪ್ರಣಾಳಿಕೆಯಲ್ಲಿ  ಬಜರಂಗ ದಳದ ನಿಷೇಧದ ಬಗ್ಗೆ ಉಲ್ಲೇಖಿಸಿದ ಬಗ್ಗೆ ಅನೇಕರು ನಮ್ಮ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ. ಈ ನಿರ್ಧಾರ ಒಂದೆರಡು ಕ್ಷೇತ್ರಗಳಲ್ಲಿ ನಮ್ಮ ಗೆಲುವಿನ ಅವಕಾಶಕ್ಕೆ ತಣ್ಣೀರೆರಚಿತು’ ಎಂದು ಅವರು ತಿಳಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT