ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಸಂತ್ರಸ್ತರಿಗೆ ಮಾನವೀಯ ಸ್ಪಂದನೆ

ಬಂಟ್ವಾಳದಲ್ಲಿ ‘ಇಂದಿರಾ ಕ್ಷೇಮ ನಿಧಿ’ಗೆ ರಮಾನಾಥ ರೈ ಚಾಲನೆ
Last Updated 7 ಜೂನ್ 2021, 16:51 IST
ಅಕ್ಷರ ಗಾತ್ರ

ಬಂಟ್ವಾಳ: ‘ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಸಂತ್ರಸ್ತರಿಗೆ ತಲಾ ₹ 1ಸಾವಿರ ಮೌಲ್ಯದ ದಿನಸಿ ಸಾಮಗ್ರಿ ಕಿಟ್ ವಿತರಿಸುವ ಮೂಲಕ ಮಾನವೀಯ ಸ್ಪಂದನೆ ಜೊತೆಗೆ ಅಸಹಾಯಕರಿಗೆ ಸಾಧ್ಯವಾದಷ್ಟು ಸಹಾಯಧನ ನೀಡಲು ‘ಇಂದಿರಾ ಕ್ಷೇಮ ನಿಧಿ’ ಆರಂಭಿಸಲಾಗಿದೆ’ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಇಲ್ಲಿನ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ‘ಇಂದಿರಾ ಕ್ಷೇಮ ನಿಧಿ’ ಯೋಜನೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸೇರಿದಂತೆ ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಘಟಕ ಸದಸ್ಯರು ದೇಣಿಗೆ ಸಂಗ್ರಹಿಸುವ ಮೂಲಕ ಸಂಕಷ್ಟದಲ್ಲಿರುವ ಜನತೆಗೆ ನಿರಂತರವಾಗಿ ಸ್ಪಂದಿಸುವ ಉದ್ದೇಶ ನಮ್ಮದು’ ಎಂದರು.

‘ಎಐಸಿಸಿ ನಿರ್ದೇಶನದಂತೆ ಕೋವಿಡ್ ಸಂತ್ರಸ್ತರ ಮನೆಗೆ ತೆರಳಿ ಉಚಿತ ಅಕ್ಕಿ ಮತ್ತು ದಿನಸಿ ಸಾಮಗ್ರಿ ವಿತರಿಸಿ ಅವರಲ್ಲಿ ಧೈರ್ಯ ತುಂಬುವ ಪ್ರಯತ್ನ ನಡೆಸುತ್ತಿದ್ದೇವೆ. ಈಗಾಗಲೇ ಪಾಣೆಮಂಗಳೂರು ಯುವ ಕಾಂಗ್ರೆಸ್ ಸದಸ್ಯರು ಒಂದು ತಿಂಗಳಿನಿಂದ ಪ್ರತಿದಿನ ಮಧ್ಯಾಹ್ನ ಬಸ್ ಮತ್ತು ರೈಲು ನಿಲ್ದಾಣದಲ್ಲಿ ಅರ್ಹರಿಗೆ ಉಚಿತ ಊಟ ವಿತರಿಸುತ್ತಿದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಗರಿಷ್ಠ ಪ್ರಮಾಣದಲ್ಲಿ ರಕ್ತದಾನ ಮಾಡಲಾಗಿದೆ’ ಎಂದರು.

‘ವಿರೋಧ ಪಕ್ಷ ಸಹಿತ ಮಾಧ್ಯಮ ಮತ್ತು ನಾಗರಿಕರು ಗಟ್ಟಿ ಧ್ವನಿ ಎತ್ತಿದಾಗ ಮಾತ್ರ ಇಂಧನ ಬೆಲೆ ಇಳಿಕೆಯಾಗಲು ಸಾಧ್ಯವಿದೆ. ಕೋವಿಡ್ ಲಸಿಕೆ ಸೇರಿದಂತೆ ರೆಡಿಸಿವರ್ ಮತ್ತು ಕಪ್ಪು ಶಿಲೀಂದ್ರ ರೋಗಕ್ಕೆ ಔಷಧಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ಜನತೆಗೆ ಸಿಗುತ್ತಿಲ್ಲ. ಲಸಿಕೆಗಾಗಿ ಕಾಂಗ್ರೆಸ್ ಶಾಸಕರು ತನ್ನ ಪ್ರದೇಶಾಭಿವೃದ್ಧಿ ಯೋಜನೆಯಡಿ ₹ 1ಕೋಟಿ ಅನುದಾನ ಒಟ್ಟುಗೂಡಿಸಿ, ನೀಡಲು ಮುಂದಾದರೂ ಸರ್ಕಾರ ಇನ್ನೂ ಒಪ್ಪಿಗೆ ನೀಡುತ್ತಿಲ್ಲ’ ಎಂದು ಟೀಕಿಸಿದರು.

ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಹರೀಶ ಕುಮಾರ್ ಕಿಟ್ ವಿತರಣೆಗೆ ಚಾಲನೆ ನೀಡಿ, ‘ಜಿಲ್ಲೆಯಲ್ಲೇ ಗರಿಷ್ಠ ಪ್ರಮಾಣದಲ್ಲಿ ರಕ್ತದಾನ ನಡೆಸಿದ ಹೆಮ್ಮೆ ಬಂಟ್ವಾಳ ಕಾಂಗ್ರೆಸ್ಸಿಗರಿಗೆ ಸಲ್ಲುತ್ತದೆ. ಸರ್ಕಾರಗಳ ಕೆಲವೊಂದು ತಪ್ಪು ನಿರ್ಧಾರದಿಂದ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ವಿಸ್ತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಡಳಿತ ವೈಫಲ್ಯ ಮರೆ ಮಾಚಲು ಪ್ಯಾಕೇಜ್ ಘೋಷಣೆ ಮೂಲಕ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಎಂ.ಎಸ್.ಮಹಮ್ಮದ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತ ಡಿಸೋಜ, ಪ್ರಮುಖರಾದ ಸುದರ್ಶನ್ ಜೈನ್, ಕೆ.ಪದ್ಮನಾಭ ರೈ, ಜಯಂತಿ ವಿ.ಪೂಜಾರಿ, ಆಲ್ಬರ್ಟ್‌ ಮಿನೇಜಸ್, ಜನಾರ್ದನ ಚೆಂಡ್ತಿಮಾರ್, ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಜೋರ ಇದ್ದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT